Publicstory. in
ತುಮಕೂರು: ಕಳೆದ 25 ದಿನಗಳಿಂದ ಕರೊನಾ ಸೋಂಕು ಪತ್ತೆಯಾಗದ ತುಮಕೂರು ಶುಕ್ರವಾರ ಅಕ್ಷರಶಃ ತತ್ತರಿಸಿತು.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 10 ರಲ್ಲಿ ಪಿ ಎಚ್ ಕಾಲೋನಿಯಲ್ಲಿ ಕರೊನಾ ಸೋಂಕಿತನ್ನೊಬ್ಬ ಪತ್ತೆಯಾಗಿದ್ದಾನೆ.
ಗುರುವಾರ ರಾತ್ರಿಯಿಂದಲೇ ಆ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಪಿ ಎಚ್ ಕಾಲೋನಿ 12 ನೇ ಮುಖ್ಯರಸ್ತೆಯಲ್ಲಿರುವ ನಿಮ್ರಾ ಮಸೀದಿ ದಾರುಲ್ ಉಲೂಮ್ ಸಿದ್ದೀಬಿಯಾ ಮಸ್ಜಿದ್ ಎ ನಿಮ್ರಾ ಟ್ರಸ್ಟ್ ನ ಮಸಿದಿಯಲ್ಲಿ ಕ್ವಾರೆಂಟೈನ್ ನಲ್ಲಿದ್ದ 34 ವರ್ಷದ ವ್ಯಕ್ತಿಗೆ ಪಾಸಿಟಿವ್ ತಗುಲಿದೆ.
ಕಳೆದ ರಾತ್ರಿ ಈತನನ್ನ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ವ್ಯಕ್ತಿಯನ್ನ ಬೆಂಗಳೂರಿಗೆ ರವಾನೆ ಮಾಡಲಾಗಿದೆ.
ಈತನ ಜೊತೆಯಲ್ಲಿದ್ದ ಉಳಿದ 13 ಮಂದಿ ಇದ್ದರು. ಇವರನ್ನು ಮಸಿದಿಯಲ್ಲೆ ಕ್ವಾರೆಂಟೈನ್ ಮಾಡಲಾಗಿದೆ. ಎಲ್ಲರ ಜತೆಯಲ್ಲಿದ್ದ ಕಾರಣ, ಇವರು ಎಲ್ಲೆಲ್ಲಿ ಓಡಾಡಿದ್ದಾರೋ ಎಂಬ ಭಯ ವಾರ್ಡ್ ನಲ್ಲಿ ಕಾಣಿಸಿದೆ.
ಪಿ ಎಚ್ ಕಾಲೋನಿಯ ನಿಮ್ರಾ ಮಸಿದಿ ಸುತ್ತಾ 150 ಮೀಟರ್ ಸೀಲ್‌ಡೌನ್ ಮಾಡಲಾಗಿದೆ. ಎಲ್ಲಾ ಸಂಪರ್ಕ ರಸ್ತೆಗಳನ್ನ ಕಬ್ಬಿಣದ ಶೀಟ್ ಹಾಕಿ ಬಂದ್ ಮಾಡಲಾಗಿದೆ.
ಮಸೀದಿಯ ಸುತ್ತಲು 150 ಮೀಟರ್ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ ಜನರು ಹೊರಬರದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೀಲ್ ಡೌನ್ ವ್ಯಾಪ್ತಿಯಲ್ಲಿರುವ ಎಲ್ಲರನ್ನ ತಪಾಸಣೆಗೆ ಒಳಪಡಿಸುವ ಸಾಧ್ಯತೆ ಇದೆ. ಜನರಿಗೆ ಬೇಕಾದ ಅಗತ್ಯ ದಿನಸಿ ವಸ್ತುಗಳು ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಅಜಯ್ , ತಹಸಿಲ್ದಾರ್ ಮೋಹನ್ ಕುಮಾರ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್ ಭೇಟಿ ನೀಡಿ ಪರಿಶೀಲಿಸಿದರು.