Thursday, December 12, 2024
Google search engine
Homeಸಾಹಿತ್ಯ ಸಂವಾದಅಂತರಾಳದಿನಕ್ಕೊಂದು ’ನಿಟ್ಟುಸಿರ’ ಕಥೆ

ದಿನಕ್ಕೊಂದು ’ನಿಟ್ಟುಸಿರ’ ಕಥೆ

ಜಿ ಎನ್ ಮೋಹನ್


ನನ್ನ ಇನ್ ಬಾಕ್ಸ್ ಗೆ ಒಂದು ನಿಟ್ಟುಸಿರು ಬಂದು ಬಿತ್ತು.

ಅದೊಂದು ಗಾಢ ನಿಟ್ಟುಸಿರು. ತನ್ನ ಒಡಲೊಳಗಿನ ನೋವನ್ನೆಲ್ಲಾ ನನ್ನೆದುರು ಸುರಿದ ನಿಟ್ಟುಸಿರು.

ನನಗೆ ಆ ನೋವಿನ ಗುಂಗಿನಿಂದ ಇನ್ನೂ ಹೊರಗೆ ಬರಲು ಆಗಿರಲೇ ಇಲ್ಲ ಆಗಲೇ ಇನ್ನೊಂದು ನಿಟ್ಟುಸಿರು ನನ್ನ ಇನ್ ಬಾಕ್ಸ್ ಗೆ ಬಂದು ಬಿತ್ತು.

ಅದೇನೆಂದು ನೋಡುವ ವೇಳೆಗೆ ಮತ್ತೊಂದು, ಅದನ್ನು ತಿರುವಿ ಹಾಕುವುದರೊಳಗೆ ಮಗದೊಂದು..

‘ನಾನು ಈಗ ಶಾಲೆಯಲ್ಲಿ ಟೆಸ್ಟ್ ಬರೆಯಬೇಕು. ಟೆಸ್ಟ್ ಬರೆಯಲು ಅವಕಾಶ ನೀಡಬೇಕೆಂದರೆ ಸ್ಟೀಲ್ ತಟ್ಟೆ ತಂದುಕೊಡಬೇಕು ಎಂದು ಮೇಷ್ಟ್ರು ತಾಕೀತು ಮಾಡಿದ್ದಾರೆ. ನಾನು ಆ ತಟ್ಟೆ ಎಲ್ಲಿಂದ ತಂದುಕೊಡಲಿ?’ ಎಂದು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕೇಳುತ್ತಿದ್ದಾಳೆ.

‘ನನಗೆ ಎಲ್ಲರಂತೆ ಮರಕೋತಿ, ಚಿನ್ನಿ ದಾಂಡು, ಲಗೋರಿ, ಕಬಡ್ಡಿ ಆಡಬೇಕು ಎನ್ನುವ ಆಸೆ. ನನ್ನ ಕಂಡೊಡನೆ ಎಲ್ಲರೂ ಓಡಿ ಹೋಗುತ್ತಾರೆ. ನಾನು ಯಾರೊಂದಿಗೆ ಆಡಲಿ?’ ಎಂದು ಪ್ರಶ್ನಿಸುವ ದಲಿತ ಹುಡುಗ ತನ್ನನ್ನು ಮುಟ್ಟಿಸಿಕೊಳ್ಳದವರ ಕಥೆಯನ್ನು ಹೇಳುತ್ತಾನೆ.

‘ನನಗೆ ಪಿಂಚಣಿ ಬರಬೇಕು. ಆದರೆ ಅಂಚೆಯವ ನನಗೆ ಇನ್ನು ಮುಂದೆ ಪಿಂಚಣಿ ಇಲ್ಲ ಎಂದು ಹೇಳುತ್ತಿದ್ದಾನೆ. ಇದು ಯಾಕೆ?’ ಎನ್ನುವುದು ವಿಧವಾ ವೇತನದಲ್ಲಿಯೇ ಬದುಕು ನಡೆಸುತ್ತಿದ್ದ ಆ ಅಸಹಾಯಕ ವದ್ಧೆಯ ಪ್ರಶ್ನೆ.

‘ನನ್ನ ಊರಿನಲ್ಲಿ ಜುಳು ಜುಳು ಹರಿಯುತ್ತಿದ್ದ ನದಿಯನ್ನು ಕಲುಷಿತ ಮಾಡಿದವರು ಯಾರು?’ ‘ಗಣಿ ಧೂಳು ಬೆರಸಿ ನೀರನ್ನು ಕುಡಿಯಲಾಗದಂತೆ ಕಪ್ಪಾಗಿಸಿದವರು ಯಾರು?’ ಎನ್ನುವುದು ಜಾರ್ಖಂಡ್‌ನ ಎಲ್ಲರ ಪ್ರಶ್ನೆ.

ಹೀಗೆ ನಿಟ್ಟುಸಿರ ಗಾಥೆಗೆ ಕೊನೆಯೇ ಇಲ್ಲ.

ನನಗೆ ಅದುವರೆಗೆ ಗೊತ್ತಿದ್ದದ್ದು ‘ದಿನಕ್ಕೊಂದು ಕಥೆ’ ಮಾತ್ರ. ಸೊಂಪಾಗಿ ಮಲಗಲೆಂದು ಅಮ್ಮ ಮಾಯಾ, ಕಿನ್ನರ, ರಾಜಕುವರಿಯರ ಲೋಕಕ್ಕೆ ಕರೆದೊಯ್ಯುತ್ತಿದ್ದ ಕಥೆಗಳು.

ಆದರೆ ಇಲ್ಲಿಯೂ ದಿನಕ್ಕೊಂದು ಕಥೆ ಇದೆ. ಆದರೆ ಇದು ನಿದ್ದೆಯಲ್ಲಿದ್ದವರನ್ನು ಎಬ್ಬಿಸುವ, ಸುಖದ ನಡುವೆ ಇದ್ದವರನ್ನು ನಿಡುಸುಯ್ಯುವಂತೆ ಮಾಡುವ, ನಮ್ಮೊಳಗನ್ನು ಪ್ರಶ್ನಿಸುವಂತೆ ಮಾಡುವ ಕಥೆಗಳು.

ಪ್ರತೀ ದಿನ ಹೀಗೆ ಒಂದೊಂದು ನಿಟ್ಟುಸಿರ ಕಥೆಯನ್ನು ನಮ್ಮ ಇ- ಮೇಲ್ ಗೆ ದೂಡುತ್ತಿರುವವರು ‘ವಿಡಿಯೊ ವಾಲಂಟಿಯರ್ಸ್’.

ಸಿ ಎನ್ ಎನ್, ಫಾಕ್ಸ್, ಕೋರ್ಟ್ ಟಿವಿ. ಹಲವು ವರ್ಷಗಳ ಕಾಲ ಟಿವಿ ಚಾನಲ್‌ಗಳಲ್ಲಿ ಕೆಲಸ ಮಾಡಿದ ಜೆಸ್ಸಿಕಾ ಮೇಬೆರ‌್ರಿಗೆ ಒಂದು ದಿನ ತನ್ನ ಕೆಲಸದ ಅರ್ಥ ಏನು ಎನ್ನುವ ಪ್ರಶ್ನೆ ಎದ್ದು ನಿಂತಿತು.

ಅತಿರೇಕದ ವರದಿ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎನಿಸಿ ದಾಕ್ಷಣ ರಾಜೀನಾಮೆ ನೀಡಿ ಹೊರಬಂದು ನೇರ ಇಳಿದದ್ದು ಅಹಮದಾಬಾದ್‌ನಲ್ಲಿ.

ಅಲ್ಲಿನ ಮಹಿಳೆಯರಿಗೆ ಕ್ಯಾಮೆರಾ ಹಿಡಿಯುವ, ಅದನ್ನು ತಮ್ಮ ಒಳಿತಿಗೆ ಬಳಸಿಕೊಳ್ಳುವುದನ್ನು ಹೇಳಿಕೊಡಲು ನಿಂತರು. ಅಮೆರಿಕನ್ ಇಂಡಿಯಾ ಫೌಂಡೇಷನ್ ಇವರ ಬೆನ್ನಿಗಿತ್ತು. ಸತತ ಒಂದು ವರ್ಷ ಭಾರತದ ಮೂಲೆ ಮೂಲೆ ಅಲೆದು, ಮಹಿಳೆಯರ ಪಿಸು ಮಾತು ಆಲಿಸುತ್ತಾ, ಹೇಳಿಕೊಳ್ಳಲಾಗದ ಕಥೆಗಳನ್ನು ಕೇಳುತ್ತಾ ಹೋದ ಇವರಿಗೆ ತಮ್ಮ ಎದುರು ಇನ್ನೂ ದೊಡ್ಡ ಸವಾಲಿದೆ ಅನಿಸಿತು.

ಮಹಿಳೆಯರು ಮಾತ್ರವಲ್ಲ, ಅಭಿವೃದ್ಧಿ ಎನ್ನುವುದು ತಾಕಿಯೇ ಇಲ್ಲದ, ಸದಾ ನಿಟ್ಟುಸಿರಿನಲ್ಲಿ ಕೈ ತೊಳೆಯುತ್ತಿದ್ದವರ ಕಥೆಗೆ ದನಿಯಾಗಬೇಕು ಅನಿಸಿತು. ಆ ವೇಳೆ ಕ್ಯಾಮೆರಾ ಕಣ್ಣಿನ ಮೂಲಕ ಮಾತನಾಡುತ್ತಿದ್ದ ಕೆ ಸ್ಟಾಲಿನ್ ಜೊತೆಯಾದರು.

‘ವಿಡಿಯೋ ವಾಲಂಟಿಯರ್ಸ್’ ಸಂಸ್ಥೆ ತಲೆ ಎತ್ತಿತು.

ದೇಶದ ಮೂಲೆ ಮೂಲೆಗಳಲ್ಲಿ ಕ್ಯಾಮೆರಾ ಓಡಾಡಬೇಕು. ಯಾರೂ ಮುಟ್ಟದ ಪರ್ವತದ ತುದಿ, ಕೊರೆವ ಹಿಮರಾಶಿ, ಕಾಲಿಡಲಾಗದ ಘಟ್ಟಗಳು, ಓಡಾಡಲು ರಸ್ತೆ ಇರದ ತಾವುಗಳು ಎಲ್ಲೆಲ್ಲೂ ಕ್ಯಾಮೆರಾಗಳು ಅಲೆಯಬೇಕು. ಅದುವರೆಗೂ ಭಾರತ ಕೇಳಿಲ್ಲದ ನಿಟ್ಟುಸಿರ ಕಥೆಗಳನ್ನು ಹೇಳಬೇಕು ಎಂದು ಹಂಬಲಿಸಿದರು.

ಇಂದು ಭಾರತದ ಮೂಲೆ ಮೂಲೆಗಳಲ್ಲಿ ‘ವಿಡಿಯೊ ವಾಲಂಟಿಯರ್ಸ್’ ನ ಕಾರ್ಯಕರ್ತರಿದ್ದಾರೆ.

ಒಬ್ಬ ಆಟೋ ಚಾಲಕ, ಒಬ್ಬ ಕೂಲಿಯಾಳು, ಶಾಲೆ ಬಿಟ್ಟು ದಿಕ್ಕುಪಾಲಾಗಿದ್ದ ಹುಡುಗ, ಮದ್ಯವ್ಯಸನದ ವಿರುದ್ಧ ಹೋರಾಡಿದ ಮಹಿಳೆಯರು, ಸ್ಮಶಾನದಲ್ಲಿ ಮಣ್ಣು ಹೊರುತ್ತಿದ್ದ ಆಳು ಎಲ್ಲರೂ ಇಂದು ಈ ‘ವಿಡಿಯೋ ವಾಲಂಟೀರ್ಸ್’ನ ವರದಿಗಾರರು.

‘ಇವತ್ತು ಕುಗ್ರಾಮಗಳಲ್ಲಿ ವರದಿಗಾರರೆಲ್ಲಿದ್ದಾರೆ? ಅಲ್ಲಿನ ದನಿ ಯಾವ ಮಾಧ್ಯಮದಲ್ಲಿ ಬರುತ್ತಿದೆ ಹೇಳಿ? ಇವತ್ತು ಮಾಧ್ಯಮಗಳು ವರದಿಗಳನ್ನು ಹೊರತೆಗೆಯುವ ಮಾತನಾಡುತ್ತಿವೆ. ಆದರೆ ನಾವು ವರದಿಗಳನ್ನು ಹೊರಗೆ ಕಳಿಸುವ ಬಗ್ಗೆ ಚಿಂತಿಸುತ್ತಿದ್ದೇವೆ’ ಎನ್ನುತ್ತಾರೆ ಜೆಸ್ಸಿಕಾ ಮೇಬೆರ‌್ರಿ.

‘ಒಂದಲ್ಲಾ ಒಂದು ದಿನ, ಇಂದಲ್ಲಾ ನಾಳೆ ನಾವು ಈ ವಿಡಿಯೊ ಸಾಹಸವನ್ನು ಗ್ರಾಮೀಣ ಭಾರತದ ರಾಯ್ಟರ್ಸ್’ ಆಗಿ ಮಾಡುತ್ತೇವೆ. ಭಾರತದ ಎಲ್ಲ 625 ಜಿಲ್ಲೆಗಳಲ್ಲಿ ನಮ್ಮ ಕ್ಯಾಮೆರಾಗಳು ಓಡಾಡಬೇಕು’ ಎನ್ನುತ್ತಾರೆ.

‘ಅದು ಸಾಧ್ಯವಿಲ್ಲ’ ಎಂದು ಹೇಳುವ ಅವಕಾಶವನ್ನು ಈಗಾಗಲೇ ಊರೂರು ಅಲೆಯುತ್ತಿರುವ ಅವರ ಪ್ರತಿನಿಧಿಗಳು ತಪ್ಪಿಸಿಬಿಟ್ಟಿದ್ದಾರೆ.

ಮೇಲ್ಜಾತಿಯವರ ಮನೆಗಳ ಮುಂದೆ ಹಾದುಹೋಗಬೇಕಾದಾಗ ಚಪ್ಪಲಿ ಕಳಚಿ ಕೈನಲ್ಲಿ ಹಿಡಿದು ಹೋಗಬೇಕಾದ ಕಥೆ ರಾಜಸ್ಥಾನದ ಕುಗ್ರಾಮವೊಂದರಿಂದ ಹೊರಬೀಳುತ್ತದೆ.

ಮದ್ಯಪಾನ ಮಾಡಿ ಹಾಳಾದವರಿಗೆ ಪಾಠ ಕಲಿಸಲು ಮುಂದಾದ ಚಿಂಗಾರಿ ಮಹಿಳಾ ಸಮಿತಿಯ ಸಾಹಸ ಜಾರ್ಖಂಡ್ ನ ರಾಯಪುರದಿಂದ ಹೊರಬೀಳುತ್ತದೆ.

ಛತ್ತೀಸ್‌ಗಢದ ಎದೆಯಲ್ಲಿ ಹಾದು ಹೋಗುವ ರಸ್ತೆ ನಿರ್ಮಿಸಿದ 22 ಕೂಲಿಕಾರರಿಗೆ ಮೂರು ವರ್ಷವಾದರೂ ವೇತನ ನೀಡದ ಸರ್ಕಾರದ ಕಥೆ ಇನ್ನೊಂದು ಕುಗ್ರಾಮದಿಂದ ಎದ್ದು ನಿಲ್ಲುತ್ತದೆ.

ಜಾರ್ಖಂಡ್‌ನ ಕುಂಟಿ ಗ್ರಾಮದಲ್ಲಿ ರಾತ್ರೋರಾತ್ರಿ ಮರಳು ಕಳುವು ಮಾಡುತ್ತಿದ್ದವರ ಕಥೆ ಬಯಲಾಗುತ್ತದೆ. ಗಿರಣಿ ಧೂಳು ಕಾಡುತ್ತಿದ್ದಾಗ ಕ್ಯಾಮೆರಾ ಕಣ್ಣು ಅದರ ಸುತ್ತಾ ಹರಿದಾಡುತ್ತದೆ.

‘ವಿಡಿಯೊ ವಾಲಂಟಿಯರ್ಸ್’ಗಳು ಕ್ಯಾಮೆರಾ ಹಿಡಿದದ್ದೇ ಅವರ ಸುತ್ತಮುತ್ತಲಿನವರ ಬದುಕು ಹಸನಾಗಿದೆ. ಜತೆಗೆ ಆ ಕ್ಯಾಮೆರಾ ಹಿಡಿದವರ ಬದುಕೇ ಬದಲಾಗಿ ಹೋಗಿದೆ. ಅದುವರೆಗೂ ಅಸ್ಪಶ್ಯತೆಯ ಕಾರಣಕ್ಕೆ ದೇವಸ್ಥಾನದ ಒಳಗೆ ಹೋಗಲಾಗದ ಯುವಕನಿಗೆ ಕ್ಯಾಮೆರಾ ಹಿಡಿದಾಕ್ಷಣ ಸಲೀಸಾಗಿ ಪ್ರವೇಶ ದಕ್ಕುತ್ತದೆ.

ಎಷ್ಟೋ ಜನ ತಾವು ಬಾಲ್ಯದಲ್ಲಿ ಅನುಭವಿಸಿದ ನೋವು ಅಪಮಾನಗಳನ್ನು ಕ್ಯಾಮೆರಾ ಹಿಡಿದಾಕ್ಷಣ ನೆನಪು ಮಾಡಿಕೊಂಡಿದ್ದಾರೆ. ಅಂತಹ ವರದಿಗಳ ಬೆನ್ನು ಹತ್ತಿ ಹೋಗಿದ್ದಾರೆ.

ಶಾಲೆಗೆ ದಿನಗಟ್ಟಲೆ ಬಾರದ ಶಿಕ್ಷಕ ಮರಳಿ ಬರುವಂತೆ ಮಾಡುತ್ತದೆ. ಅತ್ಯಾಚಾರಕ್ಕೆ ಒಳಗಾದವರ ಕಥೆ ಸರ್ಕಾರದ ಕಣ್ಣಿಗೆ ರಾಚಿ ಕ್ರಮಕ್ಕೆ ಆಗ್ರಹಿಸುತ್ತದೆ. ನಿರಾಶ್ರಿತರಿಗೆ ಮನೆ ಕಟ್ಟುವಂತೆ ಮಾಡಿದೆ. ಆಸ್ಪತ್ರೆಗಳಿಗೆ ಶುಚಿತ್ವ, ಔಷಧ ಎರಡೂ ಬರುವಂತೆ ಮಾಡಿದೆ. ಮರಗಳ್ಳರು ಜೈಲು ಸೇರುವಂತೆ ಮಾಡಿದೆ.

ಈ ಕಥೆಗಳನ್ನು ಚಿತ್ರಿಸಿ ಡಬ್ಬಿಯಲ್ಲಿಟ್ಟರೆ ಯಾರ ಬದುಕು ಬದಲಾಗಲು ಸಾಧ್ಯ?

ಅದಕ್ಕಾಗಿ ಸಮುದಾಯ ವಿಡಿಯೊ ಕೇಂದ್ರಗಳನ್ನು ಸಷ್ಟಿಸಿದೆ. ಇವರು ತಯಾರಿಸುವ ಬಡತನತ ಕಥನಗಳನ್ನು ಈ ಕೇಂದ್ರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರದರ್ಶಿಸುತ್ತದೆ.

ತನ್ನ ಸುತ್ತಲಿನ ಹಳ್ಳಿಗಳ ಕಥೆಗಳನ್ನು ಕೇಂದ್ರೀಕರಿಸಿದ ವಿಡಿಯೊ ಮ್ಯಾಗಜಿನ್ ತಯಾರಿಸಿ ಪ್ರದರ್ಶಿಸುತ್ತದೆ. ವೆಬ್ ಸೈಟ್ ನಲ್ಲಿ ಪ್ರದರ್ಶಿಸುತ್ತದೆ. ತನ್ನ ಸಂಪರ್ಕಕ್ಕೆ ಬಂದವರಿಗೆ ದಿನಕ್ಕೊಂದು ವಿಡಿಯೋ ಮೇಲ್ ಮಾಡುತ್ತದೆ.

‘ಶ್ರೀಮಂತಿಕೆ ಹಾಗೂ ಬಡತನದ ನಡುವಣ ಕಂದರವನ್ನು ತಂತ್ರಜ್ಞಾನ ಇನ್ನಷ್ಟು ಹೆಚ್ಚಿಸುತ್ತಿದೆ. ಅದನ್ನು ತೊಡೆದು ಹಾಕುವುದೇ ನಮ್ಮ ಉದ್ದೇಶ’ ಎನ್ನುವ ಜೆಸ್ಸಿಕಾ ಕನಸು ನನಸಾಗುತ್ತಲೇ ಹೋಗುತ್ತಿದೆ.

ನಿಟ್ಟುಸಿರ ಕಥೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

VV Human Rights Organisation – Home

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?