ತುಮಕೂರು ಲೈವ್

ಧಾರ್ಮಿಕ ಮೂಲಭೂತವಾದ ರಾಷ್ಟ್ರೀಯತೆ ಅಲ್ಲ: ಬರಗೂರು

ಸಮಾರಂಭದಲ್ಲಿ ಪ್ರಸಿದ್ಧ ಲೇಖಕ, ಸಿನಿಮಾ ವಿಮರ್ಶಕ ರಾಮಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಬರಗೂರು ರಾಮಚಂದ್ರಪ್ಪ ಇದ್ದಾರೆ

ತುಮಕೂರು: ಧಾರ್ಮಿಕ ಮೂಲಭೂತವಾದ ರಾಷ್ಟ್ರೀಯತೆ ಅಲ್ಲ ಎಂದು ನಾಡೋಜ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ತುಮಕೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಯುವಬರಹಗಾರರ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,ದೇಶದಲ್ಲಿ ಧರ್ಮ, ಸಂಸ್ಕೃತಿ ಇತಿಹಾಸದ ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳ ಅಪಾಯದ ಸೂಚನೆಯಾಗಿದೆ ಎಂದು ಹೇಳಿದರು.

ಪಕ್ಷ, ಜಾತಿ, ಧರ್ಮ ಮೀರಿದ ನಾಯಕತ್ವದ ಬಗ್ಗೆ ಆರೋಗ್ಯವಂತ ಸಮಾಜ ನಿರೀಕ್ಷಿಸುತ್ತಿದೆ ಎಂದು ಹೇಳಿದರು.

ನಾಲಿಗೆ ಮಾರಾಟ ಮಾಡುವ ಪಕ್ಷಬದ್ಧ ಬೌದ್ದಿಕ ನಾಯಕತ್ವದಿಂದ ಸಾಮಾಜಿಕ ನ್ಯಾಯವನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪಕ್ಷಬದ್ಧ ಬೌದ್ಧಿಕ ವಲಯಕ್ಕಿಂತ ಜನಬದ್ಧ ಬೌದ್ಧಿಕ ವಲಯ ಬೇಕಾಗಿದೆ ಎಂದರು.

ಇಂದು ನ್ಯಾಯಾಂಗದ ಬಗ್ಗೆಯೂ ಅಪನಂಬಿಕೆ ಬೆಳೆಯುತ್ತಿದೆ. ಸಂವಿಧಾನದ‌ ಆಶಯಗಳನ್ನು ಬುಡಮೇಲು ಮಾಡಲಾಗುತ್ತಿದೆ. ಪಕ್ಷ ಬದ್ಧತೆ ನ್ಯಾಯಾಂಗದಲ್ಲೂ ಕಂಡು ಬರುತ್ತಿರುವುದು ವಿಷಾದನೀಯ ಎಂದರು.

ಎಲ್ಲರಿಗೂ, ಎಲ್ಲರಲ್ಲೂ ರಾಜಕೀಯ ಹಿತಾಸಕ್ತಿಗಳಿರುತ್ತವೆ. ಆದರೆ ಅಭಿಪ್ರಾಯ ಬದ್ಧತೆ ಬಂದಾಗ ಅದು ರಾಜಕೀಯ ಪ್ರೇರಿತವಾಗಿರಬಾರದು. ಈ ವಿಷಯದಲ್ಲಿ ಕುಮಾರ ವ್ಯಾಸ, ಪಂಪ, ಬಸವಣ್ಣ, ಅಕ್ಕ ಮಹಾದೇವಿ, ಅಂಬಿಗರ ಚೌಡಯ್ಯ, ಸೂಳೆ ಸಂಕವ್ವೆ, ಕುಮಾರ ವ್ಯಾಸ, ಕುವೆಂಪು, ರೂಸೊ ಆದರ್ಶವಾಗಬೇಕು. ಪ್ರಸ್ತುತ ಬಿತ್ತಿರುವ ಅಪನಂಬಿಕೆಗೆ ನಮ್ಮ‌ ಕನ್ನಡ ಸಾಹಿತ್ಯದಲ್ಲಿ ಉತ್ತರ ಇದೆ ಎಂದು ಅಭಿಪ್ರಾಯಪಟ್ಟರು.

Comment here