Thursday, October 10, 2024
Google search engine
Homeಸಾಹಿತ್ಯ ಸಂವಾದಅಂತರಾಳನಿಮ್ಮ ಪ್ರೀತಿಗೆ.. ಅದರ ರೀತಿಗೆ..

ನಿಮ್ಮ ಪ್ರೀತಿಗೆ.. ಅದರ ರೀತಿಗೆ..

ಜಿ ಎನ್ ಮೋಹನ್


‘ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?’ ಎಂಬ ಪ್ರಶ್ನೆಯನ್ನು ನನ್ನ ಮುಂದಿಟ್ಟದ್ದು ‘ಕನ್ನಡ ಒನ್ ಇಂಡಿಯಾ’.

ಅವರು ಹಾಗೆ ಕೇಳುವ ವೇಳೆಗೆ ನಾನೂ ಅದೇ ಪ್ರಶ್ನೆಯನ್ನು ನನ್ನ ಎದೂರು ಹರಡಿಕೊಂಡು ಒಂದು ವಾರವಾಗಿತ್ತು.

‘ಕ್ಯಾಸ್ಟ್ ಅವೇ’ ಸಿನೆಮಾದಲ್ಲಿಯಂತೆ ಆದಂತೆ ದಿಢೀರನೆ, ರಾತ್ರೋ ರಾತ್ರಿ ಜನರಿಲ್ಲದ ದ್ವೀಪಕ್ಕೆ ಎಸೆದುಬಿಡುವುದು ಎಂದರೆ ಏನು ಎಂದು ಗೊತ್ತಾಗಲು ಆರಂಭವಾಗಿತ್ತು.

ಇದು ಲಂಕೇಶರು ಹಿಂದೊಮ್ಮೆ ಹೇಳಿದಂತೆ ‘ಹಸಿರಿಲ್ಲದ ಉಸಿರಿಲ್ಲದ ಹೆಸರಿಲ್ಲದ ನರಕ’.

ಇದೆಲ್ಲಾ ಯೋಚಿಸುತ್ತಲೇ “ಇದ್ದಕ್ಕಿದ್ದಂತೆ ನಾನು ಒಂಟಿ ಎನಿಸಿದೆ. ಸದಾ ಜನರೊಟ್ಟಿಗೆ ಬೆರೆಯುವ, ಅವರ ಜೊತೆಗೆ ಇದ್ದು ಬದುಕು ಮಾಡುವ ನನಗೆ ರಾತ್ರೋರಾತ್ರಿ ಎರಗಿದ ಕೊರೊನಾ ಇನ್ನು ನಿನಗೆ ನೀನೇ ಎನ್ನುವ ಭಯಾನಕ ಸ್ಥಿತಿಯನ್ನು ಅರಿವು ಮಾಡಿಸುತ್ತಿದೆ. ಏಕಾಂತ ಮತ್ತು ಲೋಕಾಂತ ಎರಡರ ನಡುವಿನ ತಾಕಲಾಟದಲ್ಲಿ ನಾನಿದ್ದೇನೆ”. ಎಂದು ಉತ್ತರ ಕೊಟ್ಟು ಸುಮ್ಮನಾದೆ.

ಆದರೆ ನನಗೆ ಸವಾಲುಗಳನ್ನು ಎದುರು ಹಾಕಿಕೊಳ್ಳುವುದು ಸದಾ ಪ್ರೀತಿಯ ವಿಷಯ

ಹಾಗಾಗಿಯೇ ಬಲವಂತದ ಮಾಘ ಸ್ನಾನವಾಗಿದ್ದ ಏಕಾಂತವನ್ನು ಒಂದೇ ಏಟಿಗೆ ಚಿತ್ ಮಾಡಲು ಯೋಚಿಸಿದೆ.

ನನ್ನ ಅಮ್ಮ ನೆನಪಾದರು, ಸಫ್ಧರ್ ಹಶ್ಮಿ ನೆನಪಾದರು.

ಈ ಇಬ್ಬರೂ ತಮ್ಮದೇ ರೀತಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದವರು. ತಮ್ಮದೇ ರೀತಿ ಗೆದ್ದವರೂ ಕೂಡಾ

ಆ ಸವಾಲು ಗೆದ್ದವರ ಕಥೆಗಳನ್ನು ಹೇಳಬೇಕೆನಿಸಿತು.

ಅರೆ! ಒಂದು ಮ್ಯಾಜಿಕ್ ಆಗಿಹೋಯಿತು

ಇದನ್ನು ಓದಿದವರ, ಕಾಮೆಂಟ್ ಮಾಡಿದವರ ಶೇರ್ ಮಾಡಿದವರ..
ಅಷ್ಟೇ ಅಲ್ಲ ಅದನ್ನು ಮರು ಪ್ರಕಟಿಸಿದ ವೆಬ್ ಸೈಟ್ ಗಳ ಸಂಖ್ಯೆ ನೋಡಿ ಗಾಬರಿ ಬಿದ್ದೆ.

ಫೇಸ್ ಬುಕ್ ನನ್ನ ಮುಂದಿಟ್ಟ ಅಂಕಿ ಅಂಶಗಳು ನನಗೇ ಆಶ್ಚರ್ಯ ಉಂಟು ಮಾಡಿತು.

ನನ್ನ ಏಕಾಂತ ಎದುರಿಸುವ ಪ್ರಶ್ನೆಗೂ ಉತ್ತರ ಸಿಕ್ಕಿಹೋಗಿತ್ತು.

ಹತಾಶೆಯ ಲಾಕ್ ಡೌನ್ ನಲ್ಲಿ ಎಲ್ಲರೂ ಬದುಕು ಕಟ್ಟಿಕೊಳ್ಳುವ ಮಾಡೆಲ್ ಗಳನು ಹುಡುಕುತ್ತಿದ್ದಾರೆ ಎಂದು

ಅಲ್ಲಿಂದ ನಾನು ಈ ಹಿಂದೆ ಮಾಡಿದ ಸಂದರ್ಶನಗಳು ನನಗೆ ಆದ ಅನುಭವಗಳು ಹೇಳಿಕೊಳ್ಳಲೇ ಬೇಕು ಎಂದು ನನ್ನೊಳಗೆ ತುಡಿಯುತ್ತಿದ್ದ ವಿಷಯಗಳು ಹೀಗೆ ಒಂದೊಂದನ್ನೇ ಹೊರಗಿಟ್ಟೆ.

ಪ್ರತೀ ದಿನ ಬರೆಯಬೇಕು ಎಂದೇನೂ ಅಂದುಕೊಂಡಿರಲಿಲ್ಲ.
ಆದರೆ ಬರಲು ಶುರುವಾದ ಪ್ರತಿಕ್ರಿಯೆಯ ರೀತಿ ನನ್ನನ್ನು ನಿಬ್ಬೆರಗಾಗಿಸಿತು. ಮೂಕವಾಗಿಸಿತು

ಬೆಳಕಿನ ದಾರಿ ಕಾಣಲು ತವಕಿಸುತ್ತಿರುವವರಿಗೆ ಇದು ಅಗತ್ಯ ಕೂಡಾ ಅನಿಸಿತು.
ಪ್ರತೀ ದಿನ ಬರೆಯಲು ಶುರು ಮಾಡಿದೆ.

‘ದೂರದಲಿ ಇದ್ದವರನು ಹತ್ತಿರಕೆ ತರಬೇಕು
ಎರಡು ದಂಡೆಗೂ ಉಂಟಲ್ಲ ಎರಡು ತೋಳು..’ ಎನ್ನುತ್ತಾರೆ ನನ್ನ ಪ್ರೀತಿಯ ಕವಿ ಸು ರಂ ಎಕ್ಕುಂಡಿ

ನನಗೆ ಗೊತ್ತಿಲ್ಲದ ಹಾಗೆ ಈ ಬರಹಗಳು ಎಷ್ಟೊಂದು ಜನರನ್ನು ನನ್ನ ಹತ್ತಿರಕ್ಕೆ ತಂದಿದೆ ಎಂದರೆ ಒಂದು ಹತಾಷೆಯ, ಡಿಪ್ರೆಶನ್ ಗೆ ಒಳಗು ಮಾಡಿಬಿಡಬಹುದಾಗಿದ್ದ ಒಂದು ಲಾಕ್ ಡೌನ್ ನನ್ನ ಮನಸಿಗೆ ನೂರು ರೆಕ್ಕೆ ಹಚ್ಚಿದೆ.

ಕಂಬಾರರು ಹೇಳ್ತಾರಲ್ಲಾ
‘ನೀ ಯಾರೋ ಏನೋ ಎಂತೋ ಅಂತೂ ಪೋಣಿಸಿತು ಕಾಣದ ತಂತು’ ಅಂತ..

ಹಾಗೆ, ಥೇಟ್ ಹಾಗೆ ಯಾರೋ ಏನೋ ಗೊತ್ತಿಲ್ಲದವರು ಈಗ ನಾನು ಪ್ರತಿ ದಿನ ಸಂವಾದಿಸಿಯುವ ಆಪ್ತರಾಗಿದ್ದಾರೆ.

ಈ ಬರಹಗಳನ್ನು ಓದಿ ಕಣ್ಣೀರಾದವರು ಇದ್ದಾರೆ
ನಿಟ್ಟುಸಿರಿಟ್ಟವರಿದ್ದಾರೆ.
ನನ್ನನ್ನು ತಿದ್ದಿದವರಿದ್ದಾರೆ
ಮಾಹಿತಿ ತಪ್ಪಾದಾಗ ಕಿವಿ ಹಿಂಡಿದವರಿದ್ದಾರೆ.
ಇಲ್ಲಿನ ಘಟನೆಗಳಂತೆಯೇ ನಡೆದ ಘಟನೆಗಳನ್ನು ನನ್ನ ಮುಂದೆ ಸುರಿದವರಿದ್ದಾರೆ.

ಈ ಮಧ್ಯೆ ಇಂತಹವರೂ ಇದ್ದಾರೆ
ಜೋಗಿಯಂತವರು.

ನಾನು ಬಿಲ್ ಕುಲ್ ಫೋನ್ ತೆಗೆಯುವ ಗಿರಾಕಿ ಅಲ್ಲ ಎಂದು ಗೊತ್ತಿದ್ದೂ ಆ ಬಗ್ಗೆ ಮುನಿಸಿಕೊಳ್ಳದೆ ನನಗೆ ವಾಯ್ಸ್ ಮೆಸೇಜ್ ಕಳಿಸಿದ್ದಾರೆ.

ಅಷ್ಟೇ ಅಲ್ಲ ಮನ ದುಗುಡದ ಕಾಲದಲ್ಲಿ ಎದ್ದು ನಿಲ್ಲುವುದು ಸುಲಭವಲ್ಲ ಎಂದು ವಿಸ್ಮಯಗೊಂಡಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದೆ
‘ನೀವು ಫೇಸ್ ಬುಕ್ ನಲ್ಲಿ ಬರೆಯುವ ಅದೇ ರೀತಿಯಲ್ಲಿ, ಅದೇ ವಿಷಯವನ್ನು ನಮಗೆ ಈ ಬಾರಿ ಬರೆದು ಕೊಡಲೇಬೇಕು’ ಎಂದು ನನ್ನಿಂದ ಬರೆಸಿದ್ದಾರೆ.

ನಾನು ಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿಕೊಂಡ ಅರುಂಧತಿಯ ಬಗ್ಗೆ ಬರೆದಿದ್ದೇನೆ

ಇದನ್ನು ಪ್ರಕಟಿಸುತ್ತಾ ಜೋಗಿ ಪ್ರೀತಿಯಿಂದ ಈ ಇಂಟ್ರೋ ಬರೆದಿದ್ದಾರೆ.-

“ಏಪ್ರಿಲ್ ಕ್ರೂರ ಮಾಸ. ಅದು ನೆನಪುಗಳನ್ನು ಬಯಕೆಗಳನ್ನು ಬೆರೆಸುತ್ತದೆ ಅನ್ನುವ ಕವಿಯ ಮಾತು ಸುಳ್ಳಾಗಲಿಲ್ಲ.

ಅನೇಕರ ಪಾಲಿಗೆ ಏಪ್ರಿಲ್ ಝಳಕ್ಕಿಂತ ಬಿರುಸಾಗಿ ಕಾಡಿದ್ದು ಏಕಾಂತ.

ಇಂಥ ಹೊತ್ತಲ್ಲಿ ಹೇಗಾದರೂ ಮಾಡಿ ವರ್ತಮಾನದಲ್ಲೇ ಉಳಿಯಲು ಒಬ್ಬೊಬ್ಬರೂ ಒಂದೊಂದು ತರದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಜಿ ಎನ್ ಮೋಹನ್ ನೆನಪುಗಳನ್ನು ಬಗೆದು ದಾಖಲಿಸುವ ಕೈಂಕರ್ಯದಲ್ಲಿ ತೊಡಗಿಕೊಂಡರು.

ದಿನಕ್ಕೊಂದು ನೆನಪನ್ನು ದಾಖಲಿಸುತ್ತಾ ಹೋದರು.

ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಕೂಡ ಅದ್ಭುತವಾಗಿತ್ತು.

ಇಲ್ಲಿ ಮೋಹನ್ ತಾವು ಹಿಂದೆಂದೋ ಸಂದರ್ಶಿಸಿದ ಅರುಂಧತಿ ನಾಗ್ ಜೊತೆಗೆ ಕಳೆದ ಕ್ಷಣಗಳನ್ನು ಕಣ್ಮುಂದೆ ತಂದು ಕೊಟ್ಟಿದ್ದಾರೆ

ಅಂದಹಾಗೆ ಇದು ಸಂದರ್ಶನವಲ್ಲ, ಕಥನವೂ ಅಲ್ಲ, ಆಕಾಶದ ಒಂದು ತುಣುಕು..”

ಇದನ್ನು ಓದಿಕೊಂಡು ಒಂದು ಅಡಿ ಮೇಲೆ ಹೋದೆ.

ಅಷ್ಟರಲ್ಲಿ ಮಂಡ್ಯ ರಮೇಶ್ ವಾಯ್ಸ್ ಮೆಸೇಜ್ ಬಂತು

‘ಅಣ್ಣ, ಬರಹದಲ್ಲಿ ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಅನ್ನುವ ಸಾಲು ‘ತುಘಲಕ್’ ನಾಟಕದ್ದು ಅಂತ ಬರೆದಿದ್ದೀಯ. ಅದು ‘ಯಯಾತಿ’ ನಾಟಕದ್ದು ಸರಿ ಮಾಡು’ ಅಂತ.

ಹೇಳಿದ ವಿಷಯ ಇದೇ ಆದರೂ ದನಿ ಮಾತ್ರ ‘ಮುಚ್ಚಿಕೊಂಡು ಮೊದಲು ಸರಿ ಮಾಡು. ರಂಗಭೂಮಿಯಲ್ಲಿ ಇದ್ದೀಯಾ ಅಂತ ಬೇರೆ ಹೇಳ್ಕೊಂಡು ತಿರುಗ್ತಿದ್ದೀಯಾ’ ಅನ್ನುವಂತಿತ್ತು.

ನಾನು ಒಂದಡಿ ಮೇಲೆ ಹೋಗಿದ್ದವನು ಥಟ್ ಅಂತ ವಾಸ್ತವಕ್ಕೆ ಬಂದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?