Publicstory
ಸಿರಾ: ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾದ ಸಾವಿತ್ರಿಬಾ ಫುಲೆ ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು. ಸಮಾಜದ ತಳ ವರ್ಗದ ಹೆಣ್ಣುಮಕ್ಕಳಿಗಾಗಿ ಶಾಲೆ, ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆ, ದಲಿತರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ಸ್ಥಾಪನೆ ಹೀಗೆ ಸಮಾಜಮುಖಿಯಾದ ಹತ್ತಾರು ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಸಾವಿತ್ರಿಬಾಯಿ ಎಂದು ಸ.ಹಿ.ಪ್ರಾ.ಶಾಲೆ, ಗಾಣದಹುಣಸೆ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಗಾಣದಹುಣಸೆ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾ ಫುಲೆ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರಿದ್ದ ಕಾಲ, ಅವರು ಎದುರಿಸಿದ ಸವಾಲುಗಳು, ಅವರು ಮಾಡಿದ ಕಾರ್ಯ ಎಲ್ಲವನ್ನೂ ಒಮ್ಮೆ ನೆನಪಿಸಿಕೊಂಡರೆ ಅವರಿಗೆ ತಲೆಬಾಗಿ ನಮಸ್ಕರಿಸಬೇಕು ಎಂಬ ಭಾವನೆ ಮೂಡುವುದು ಅತ್ಯಂತ ಸಹಜ. ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ ತುಂಬಲಿ, ಆ ಮಹಾನ್ ಚೇತನವನ್ನು ನಾವೆಲ್ಲರೂ ಸದಾ ನೆನಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
1848ರಿಂದ 1852ರ ಅವಧಿಯಲ್ಲಿ 14 ಶಾಲೆಗಳನ್ನು ಫುಲೆ ದಂಪತಿಗಳು ತೆರೆದರು. ಆಡಳಿತದ ಸಂಪೂರ್ಣ ಜವಾಬ್ದಾರಿ ಸಾವಿತ್ರಿ ಅವರದಾಗಿತ್ತು. ಬ್ರಿಟಿಷ್ ಸರ್ಕಾರ ಅವರ ಕಾರ್ಯವನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸ್ತ್ರೀಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಹಂಬಲವಾಗಿತ್ತು. ಸಮಾಜಕ್ಕೇ ಶಿಕ್ಷಕಿಯಾದವರು ಸಾವಿತ್ರಿಬಾಯಿ. ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿಯೇ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು ಎಂದು ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ಹೇಳಿದರು.
ಹಿರಿಯ ಸಹಶಿಕ್ಷಕ ಮಹಮ್ಮದ್ ಗೌಸ್ ಮಾತನಾಡಿ, ಈ ಮಹಾ ತಾಯಿಯ ಬದುಕಿನ ಪರಿಚಯ ನಮ್ಮೆಲ್ಲ ಮಕ್ಕಳಿಗೂ ತಿಳಿಯಬೇಕು. ಈ ಮಹಾನ್ ಹೋರಾಟಗಾರ್ತಿಯ ಸವಾಲುಗಳನ್ನು ಎದುರಿಸುವ ಛಲ ನಮ್ಮೆಲ್ಲಾ ಮಕ್ಕಳಲ್ಲೂ ಬರಬೇಕು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕಾಳಜಿ ನಮ್ಮೆಲ್ಲ ಮಕ್ಕಳಲ್ಲಿ ಉಂಟಾಗಬೇಕು ಎಂಬುದೇ ಈ ಜನ್ಮದಿನದ ಆಚರಣೆಯ ಅರ್ಥ. ಜೊತೆಗೆ ನಮ್ಮ ಮಕ್ಕಳಿಗೆ ಇವರ ಧ್ಯೇಯದಿಂದ ಕೂಡಿದ ಬದುಕನ್ನು ತಿಳಿಸುವುದೇ ಈ ಮಹಾನ್ ಚೇತನಕ್ಕೆ ನಾವೆಲ್ಲರೂ ಸಲ್ಲಿಸಬಹುದಾದ ಅರ್ಥಪೂರ್ಣ ಗೌರವ ಎಂದು ತಿಳಿಸಿದರು.
ಅತಿಥಿ ಶಿಕ್ಷಕಿ ಧನಲಕ್ಷ್ಮೀ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.