Publicstory
ತುರುವೇಕೆರೆ: ಪೋಷಕರು-ವಿದ್ಯಾರ್ಥಿಗಳ ಸಂಪರ್ಕದ ಕೊಂಡಿಯಾಗಿ ಶಿಕ್ಷಕರು ಕೆಲಸ ಮಾಡುತ್ತಾ ಮಕ್ಕಳು ಒಂದಿಲ್ಲೊಂದು ಕಲಿಕೆಯಲ್ಲಿ ಸಕ್ರಿಯವಾಗುವಂತೆ ನೋಡಿಕೊಳ್ಳಬೇಕಿದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ಶಿಕ್ಷಕರಿಗೆ ಸಲಹೆ ನೀಡಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲಾ ಹಾಗು ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್-19ರ ಸಂದರ್ಭದಲ್ಲಿ ಪಟ್ಟಣ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸುವುದು ಒಂದು ಸವಾಲಾಗಿದೆ. ಈಗ ಪಠ್ಯ ವಿಷಯ ಬೋಧಿಸುವುದಕ್ಕಿಂತ ಮೊದಲು ಮಕ್ಕಳಿಗೆ ಕನಿಷ್ಠವಾದರೂ ಮೂಲಭೂತ ಭಾಷಾ ಕಲಿಕೆ ಹಾಗು ಇನ್ನಿತರ ಕಲಿಕಾ ಸಾಮಥ್ರ್ಯಗಳನ್ನು ಕಲಿಸಲು ಆದಷ್ಟು ಒತ್ತು ನೀಡಿ ಎಂದು ಶಿಕ್ಷಕರುಗಳಿಗೆ ಸಲಹೆ ನೀಡಿದರು.
ಜಿಲ್ಲಾ ವಿಷಯ ಪರಿವೀಕ್ಷಕ ಸಂಪನ್ಮೂಲ ವ್ಯಕ್ತಿ ಗಿರೀಶ್ ಮಾತನಾಡಿ, ಶಾಲೆಗಳನ್ನು ಪ್ರಾರಂಭಿಸುವ ತನಕ ಮಕ್ಕಳಿಗೆ ಕಲಿಕೆಗೆ ತೊಡಕಾಗದಂತೆ ಶಿಕ್ಷಕರು ಎಚ್ಚರವಹಿಸಿ. ಜೊತೆಗೆ 8, 9 ಮತ್ತು 10ನೇ ತರಗತಿ ಮಕ್ಕಳಿಗೆ ಚಂದ ಟಿವಿಯಲ್ಲಿ ಪಠ್ಯ ವಿಷಯಗಳನ್ನು ಅವಲೋಕಿಸಿ, ಅಭ್ಯಾಸ ಮಾಡುವಂತೆ ಮಾಡಿ. ವಿದ್ಯಾಗಮ ಕಲಿಕೆಯ ಅನುಷ್ಠಾನ ಹಾಗು ಕ್ರಿಯಾ ಯೋಜನೆಯ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಿದರು.
ಇದೇ ವೇಳೆ ಹಿಂದಿ, ಆಂಗ್ಲಭಾಷೆ, ಗಣಿತ, ವಿಜ್ಞಾನ, ಸಮಾಜ ವಿಷಯ ಶಿಕ್ಷಕರುಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಆರ್ಸಿ ವಸಂತ್ಕುಮಾರ್, ಪ್ರಾಂಶುಪಾಲ ಪರಮೇಶ್ವರ್, ಕನ್ನಡ ಭಾಷಾ ಬೋಧಕರ ಸಂಘದ ತಾಲ್ಲೂಕು ಅಧ್ಯಕ್ಷ ಎಲ್.ಮಂಜೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಗುರುರಾಜು, ಶ್ರೀಕಾಂತ್, ಉಮಾಮಹೇಶ್, ಸಚೀಂದ್ರನ್, ಆದಿನಾರಾಯಣ್ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.