Friday, May 24, 2024
Google search engine
Homeತುಮಕೂರ್ ಲೈವ್ಪ್ರಧಾನಿಗೆ ಪತ್ರ ಬರೆದ ತಿಪಟೂರು ‌ರೈತರು

ಪ್ರಧಾನಿಗೆ ಪತ್ರ ಬರೆದ ತಿಪಟೂರು ‌ರೈತರು

ಎಲ್ಲರ ಪತ್ರಗಳಿಗೆ ಉತ್ತರಿಸಿ ಗಮನ ಸೆಳೆಯುವ ಪ್ರಧಾನಿ ನರೇಂದ್ರ ಮೋದಿಯವರು ತಿಪಟೂರು ತಾಲ್ಲೂಕಿನ ರೈತರು ಬರೆದಿರುವ ಪತ್ರಕ್ಕೆ ಏನು ಉತ್ತರ ಕೊಡುತ್ತಾರೆ ಎಂಬ ಕುತೂಹಲ ಮೂಡಿದೆ.

ಗುರುವಾರ ತಿಪಟೂರು ನಗರದಲ್ಲಿ ಎಲ್ಲಿ ನೋಡಿದರಲ್ಲಿ ರೈತರು,

ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ

#RCEPಬೇಡ #NoRCEP

ಕೃಷಿ, ಹೈನುಗಾರಿಕೆ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳು `ಆರ್.ಸಿ.ಇ.ಪಿ’ ಒಪ್ಪಂದ ಕುರಿತಾಗಿನ ಆತಂಕದಿಂದ ಮತ್ತು ಬಹುಕಾಳಜಿಯಿಂದ ಈ ಪತ್ರ ಬರೆಯುತ್ತಿದ್ದು, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಲ್ಲಿ ಭಾರತ ಅಥವಾ ಇತರೆ ಯಾವುದೇ ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಅತೀ ಸೂಕ್ಷ್ಮ ಉತ್ಪನಗಳಾದ ಹಾಲು, ಅಡುಗೆ ಎಣ್ಣೆ, ರೇಷ್ಮೆ ಮತ್ತು ಕೃಷಿ ಬೀಜಗಳ ಮೇಲಿನ ಯಾವುದೇ ಬೌದ್ದಿಕ ಆಸ್ತಿ ಹಕ್ಕು (IPR) ಸೇರಿದಂತೆ ಯಾವುದೇ ರೀತಿಯ ಹಕ್ಕು ಭಾಧ್ಯತೆಗಳನ್ನು ಮತ್ತು ಮುಕ್ತ ವ್ಯಾಪರವನ್ನು ಹೇರಬಾರದು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್. ದೇವರಾಜು ಆಗ್ರಹಿಸಿದರು.
ತಿಪಟೂರಿನಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಇಂದು ನಡೆದ ರೈತ ವಿರೋಧಿ `ಆರ್ ಸಿಇಪಿ’ (RCEP) ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಮಾಡಬಾರದೆಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗ್ರಾಮದೇವತೆ ಕೆಂಪಮ್ಮದೇವಿ ದೇವಸ್ಥಾನದ ಬಳಿ ಉದ್ಘಾಟಿಸಿ ಮಾತನಾಡಿದರು.

ವಿಡಿಯೋಗೆ ಇಲ್ಲೊ ಕ್ಲಿಕ್ ಮಾಡಿ

ಆರ್.ಸಿ.ಇ.ಪಿ(RCEP) ಪ್ರಸ್ತುತ ವಿಶ್ವವ್ಯಾಪಾರ ಸಂಸ್ಥೆಯ (WTO) ಒಪ್ಪಂದಗಳ ನಿಯಮಗಳನ್ನು ಮೀರಿಸುವಂತಹ ಅಸಮಂಜಸ ಕಟ್ಟುಪಾಡುಗಳನ್ನು ಮತ್ತು ನಿಯಮಗಳನ್ನು ಭಾರತ ಸೇರಿದಂತೆ ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಹೇರಲು ಒತ್ತಾಯಿಸುತ್ತಿದ್ದು, ಇದು ಅಂತರರಾಷ್ಟ್ರೀಯ ಬೀಜ ಕಂಪನಿಗಳು UPOV 91 ನಿಯಮಗಳಡಿ ನಮ್ಮ ದೇಸಿ ತಳಿ ಬೀಜಗಳನ್ನು ಕಸಿಯುವ ತಂತ್ರವಾಗಿರುತ್ತದೆ. ಆದುದರಿಂದ ಅಂತರರಾಷ್ಟ್ರೀಯ ಸಸ್ಯಪ್ರಭೇದಗಳ ಸಂರಕ್ಷಣೆ ಒಕ್ಕೂಟದ (UPOV 91) ಯಾವುದೇ ಕಟ್ಟುಪಾಡುಗಳು/ನಿಯಮಗಳನ್ನು ಆರ್.ಸಿ.ಇ.ಪಿ (RCEP) ಒಪ್ಪಂದದಲ್ಲಿ ಭಾರತ ನಿರಾಕರಿಸಬೇಕು ಎಂದು RKS ನ ಸ್ವಾಮಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಈಗಾಗಲೇ ಭಾರತ-ಆಸಿಯಾನ್ ದೇಶಗಳ ಮುಕ್ತ ವ್ಯಾಪಾರ ಒಪ್ಪಂದದ ನಂತರ, ಆಗ್ನೇಯ ರಾಷ್ಟ್ರಗಳಿಂದ ಅದರಲ್ಲಿಯೂ ಫಿಲಿಫೈನ್ಸ್, ಮಲೇಶಿಯಾ, ಇಂಡೋನೇಷಿಯಾದಂತಹ ದೇಶಗಳಿಂದ ಅತೀ ಕಡಿಮೆ ಬೆಲೆಯಲ್ಲಿ ತೆಂಗಿನ ಎಣ್ಣೆ ಮತ್ತು ತೆಂಗು ಉತ್ಪನ್ನಗಳ ಆಮದಿನ ಕಾರಣ ಕರ್ನಾಟಕದ ವಿಶಿಷ್ಟವಾದ ತಿಪಟೂರು ತೆಂಗಿನಕಾಯಿ, ಸೇರಿದಂತೆ ದಕ್ಷಿಣ ಭಾರತದ ತೆಂಗು ಬೆಳೆಯುವ ರೈತರು ತಮ್ಮ ತೆಂಗು ಉತ್ಪನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡು ಕಂಗಾಲಗಿದ್ದು ಆರ್.ಸಿ.ಇ.ಪಿ ಒಪ್ಪಂದವು ತೆಂಗು ಬೆಳೆಗಾರರನ್ನು ಮತ್ತಷ್ಟು ಆತಂಕ್ಕೆ ದೂಡುತ್ತಿದೆ. ಇದೇ ಪರಿಸ್ಥಿತಿಯು ಕರ್ನಾಟಕ ರೇಷ್ಮೆ ಬೆಳೆಯುವ ರೈತರಿಗೂ ಕೂಡ ಉಂಟಾಗಿದ್ದು ಈ ಒಪ್ಪಂದವು ಭಾರತದ ರೈತರ ಜೀವನೋಪಾಯವನ್ನು ಅಪಾಯದಲ್ಲಿ ಸಿಲುಕಿಸುವುದರಲ್ಲಿ ಅನುಮಾನವೇ ಇಲ್ಲ, ಹಾಗಾಗಿ RCEPಯನ್ನು ದುಡಿಯು ರೈತರು ವಿರೋಧಿಸಬೇಕು ಎಂದು ಸೌಹಾರ್ದ ವೇದಿಕೆಯ ಅಲ್ಲಾಬಕಾಶ್ ಹೇಳಿದರು.

ಕೃಷಿಯ ಜೊತೆಜೊತೆಯಾಗಿ ಹೈನುಗಾರಿಕೆ ಕಟ್ಟಿಕೊಂಡ ಭಾರತದ 10 ಕೋಟಿ ರೈತರ ಜೀವನ ಭದ್ರತೆಗೆ ಆಪಾಯ ಬಂದಿದ್ದು ಆರ್.ಸಿ.ಇ.ಪಿ ಕಾರಣದಿಂದ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯ ದೇಶಗಳ ಹಾಲು ಉತ್ಪಾದಿಸುವ ದೈತ್ಯ ಕಂಪನಿಗಳು ಹಾಲು ಮತ್ತು ಅದರ ಉತ್ಪನ್ನಗಳನ್ನು ನಮ್ಮ ದೇಶಕ್ಕೆ ತಂದು ಸುರಿದು ಇಲ್ಲಿನ ಸ್ಥಳೀಯ ಹೈನು ಉದ್ಯಮವನ್ನು ಹಾಗು 30 ವರ್ಷಗಳಿಂದ ಹಳ್ಳಿ ಹಳ್ಳಿಗಳಲ್ಲಿ ರೈತರೇ ಕಟ್ಟಿ ಬೆಳೆಸಿದ ಹಾಲು ಉತ್ಪಾದಕ ಸಂಘಗಳನ್ನು ನಾಶಪಡಿಸಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಈ ಒಪ್ಪಂದದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೈಬಿಡದಿದ್ದರೆ ಹೋರಾಟ ಇನ್ನೂ ತೀವ್ರ ರೂಪ ತಾಳಲಿದೆ ಎಂದು ಬೆಂಗಳೂರು ಹಾಲು ಮಹಾ ಮಂಡಳಿಯ ತುಮಕೂರು ಜಿಲ್ಲಾ ನಿರ್ದೇಶಕ ಮಾದೀಹಳ್ಳಿ ಪ್ರಕಾಶ ಸರ್ಕಾರಕ್ಕೆ ಎಚ್ಚರಿಸಿದರು.

ಭಾರತ ಸರ್ಕಾರವು ಈ ಒಪ್ಪಂದಕ್ಕೆ ಬದ್ದರಾಗುವ ಮುನ್ನ ಭಾರತದ ತೆಂಗು ಮತ್ತು ಇತರ ಎಣ್ಣೆ ಬೀಜಗಳ ಉತ್ಪಾದಕ ರೈತರು, ಹಾಲು ಉತ್ಪಾದಕ ರೈತರು, ರೇಷ್ಮೆ ಬೆಳೆಗಾರ ರೈತರು ಹಾಗು ಇತರೆ ಕೃಷಿ ಬೀಜಗಳನ್ನು ಉಳಿಸಿಕೊಳ್ಳುವ, ಬೀಜಗಳನ್ನು ವಿನಿಮಯ ಮಾಡಿಕೊಳ್ಳುವ, ಬೀಜಗಳನ್ನು ಮಾರುವ ಅಥವ ಪ್ರಸರಣ ಮಾಡುವ ಸ್ವಾತಂತ್ರ್ಯಕ್ಕೆ ಚ್ಯುತಿ ಬಾರದಂತೆ ಮತ್ತು UPOV 91 ಅಂಶಗಳನ್ನು ಸೇರಿದಂತ ನಕಾರಾತ್ಮಕ ಅಂಶಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಉಜ್ಜಜ್ಜಿ ರಾಜಣ್ಣ ಅಭಿಪ್ರಾಯಪಟ್ಟರು.

ಈ ಒಪ್ಪಂದಕ್ಕೆ ಒಮ್ಮೆ ಭಾರತ ಬದ್ದವಾದಲ್ಲಿ ಭಾರತದ ಹಾಲು ಉತ್ಪಾದನೆಯ ವ್ಯವಸ್ಥೆ, ತೆಂಗು ಮತ್ತು ಇತರೆ ಎಣ್ಣೆ ಬೀಜಗಳ ಉತ್ಪಾದನೆ ವ್ಯವಸ್ಥೆ, ಕೃಷಿ ಬೀಜ ವ್ಯವಸ್ಥೆ, ಅಂತರರಾಷ್ಟ್ರೀಯ ಹಕ್ಕುಗಳು ಮತ್ತು ಅವುಗಳ ಕಟ್ಟುಪಾಡುಗಳ ಮೇಲೆ ಅಸಮಂಜಸ ಮತ್ತು ದುಷ್ಪರಿಣಾಮ ಬೀರಲಿದೆ. ಆದುದರಿಂದ ಭಾರಿ ವೈವಿಧ್ಯಮಯ ಬದುಕು ಮತ್ತು ಕೃಷಿ ಜ್ಞಾನದ ದೇಶವಾಗಿರುವಂತಹ ಭಾರತದ, ವೈವಿಧ್ಯ ಬೀಜ ಸಂರಕ್ಷಣೆ, ವಿನಿಮಯ ಮತ್ತು ಪ್ರಸರಣ ಸಂಸ್ಕೃತಿಯ ಸ್ವಾತಂತ್ರ್ಯದ ಮೇಲೆ ಹಾಗೂ ರೈತರ ಜೀವನೋಪಾಯ ರಕ್ಷಣೆಯ ವ್ಯವಸ್ಥೆಯ ಮೇಲೆ ಅಪಾಯ ಬೀರುವ ಆರ್.ಸಿ.ಇ.ಪಿ ಅಂತಹ ಭಾರಿ ಮುಕ್ತ ವ್ಯಾಪಾರ ನಮಗೆ ಸ್ವೀಕಾರಾರ್ಹವಲ್ಲ ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆರ್.ಸಿ.ಇ.ಪಿ ಒಪ್ಪಂದವನ್ನು ಧಿಕ್ಕರಿಸಿದರು.

ಕಾಲ್ನಡಿಗೆ ಮೂಲಕ ಸಾವಿರಾರು ರೈತರು ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಜಮಾಯಿಸಿದರು. ಪ್ರಾಂತ್ಯ ರೈತ ಸಂಘದ ಚನ್ನಬಸವಣ್ಣ ಮಾತನಾಡಿದರು. ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದ ಸಾರಾಂಶವನ್ನು ಓದಿ ನಂತರ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಸಿರು ಸೇನೆಯ ತಿಮ್ಲಾಪುರ ದೇವರಾಜು, ಬಸ್ತೀಹಳ್ಳಿ ರಾಜಣ್ಣ, ಮನೋಹರ್ ಪಟೇಲ್, ಸಿ.ಬಿ.ಶಶಿಧರ್, ಎಂ.ಆರ್. ಸಂಗಮೇಶ್, ನ್ಯಾಕೇನಹಳ್ಳಿ ಸುರೇಶ್ ಹಾಜರಿದ್ದರು. ಸಾವಿರಾರು ರೈತರು ಭಾಗವಹಿಸಿದ್ದರು. ನೂರಾರು ಮಹಿಳಾ ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಭಾಗವಹಿಸಿ RCEP ಒಪ್ಪಂದದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?