Public story
ತುರುವೇಕೆರೆ; ಸ್ಥಳೀಯ ಬೆಸ್ಕಾಂ ಕಛೇರಿ ಹಲವು ಗ್ರಾಹಕರಿಗೆ ಸಾವಿರಾರು ರೂಪಾಯಿಗಳ ಯದ್ವಾತದ್ವಾ ವಿದ್ಯುತ್ ಬಿಲ್ ನೀಡುವ ಮೂಲಕ ಶಾಕ್ ನೀಡಿದೆ.
ಬೆಸ್ಕಾಂ ಕಛೇರಿಯ ಹಿಂಭಾಗದ ಸುಬ್ರಹ್ಮಣ್ಯ ನಗರ ಬಡಾವಣೆಯ ಹಲವು ಗ್ರಾಹಕರು ಈ ಬಾರಿಯ (ಆಗಸ್ಟ್ 2021)ಬೆಸ್ಕಾಂ ವಿದ್ಯುತ್ ಬಿಲ್ ನೋಡಿ ಆಘಾತಕ್ಕೊಳಗಿದ್ದಾರೆ.
ಮಾಹೆಯಾನ ರೂ.200 ರಿಂದ ರೂ.300 ವಿದ್ಯುತ್ ಬಿಲ್ ಬರುತ್ತಿದ್ದ ಮನೆಗಳಿಗೆ ರೂ.20 ಸಾವಿರದಿಂದ 80 ಸಾವಿರದವರೆಗೆ ಬಿಲ್ ನೀಡಲಾಗಿದ್ದು ನಾಗರಿಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ನಾವು ಒಂದು ತಿಂಗಳಲ್ಲಿ 18 ರಿಂದ 30 ಯೂನಿಟ್‍ನಷ್ಟು ಮಾತ್ರ ವಿದ್ಯುತ್ ಬಳಕೆ ಮಾಡುತ್ತಿದ್ದೆವು. ಆದರೆ ಈ ಬಾರಿ 2480 ಯೂನಿಟ್ ವಿದ್ಯುತ್ ಬಳಕೆ ಮಾಡಿರುವುದಾಗಿ ತಿಳಿಸಿ ರೂ.20,401 ರೂಪಾಯಿಗಳಿಗೆ ಬಿಲ್ ನೀಡಲಾಗಿದೆ. ಇಷ್ಟೊಂದು ಅಗಾಧ ಪ್ರಮಾಣದ ಬಿಲ್ ಕಂಡು ಅಚ್ಚರಿಯಾಗಿದೆ ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡರು.
ಹಲವು ಗ್ರಾಹಕರು ಬೆಸ್ಕಾಂ ಕಛೇರಿಯನ್ನು ಸಂಪರ್ಕಿಸಿ ವಿವರಣೆ ಕೇಳಿದಾಗ ಹಿಂದಿನ ಬಾಕಿಯನ್ನು ಈಗ ಸೇರಿಸಿ ಬಿಲ್ ಕೊಡಲಾಗಿದೆ ಎಂಬ ಸಮಜಾಯಿಸಿ ನೀಡಿರುವುದು ಗ್ರಾಹಕರನ್ನು ಮತ್ತೂ ಗೊಂದಲಕ್ಕೆ ತಳ್ಳಿದೆ. ಪ್ರತಿ ತಿಂಗಳು ತಪ್ಪದೆ ಬಿಲ್ ಕಟ್ಟುತ್ತಿರುವಾಗ ಇಷ್ಟೊಂದು ಭಾರೀ ಬಾಕಿ ಎಲ್ಲಿಂದ ಬಂತು? ಇಷ್ಟು ದಿನ ಬೆಸ್ಕಾಂ ಬಾಕಿ ವಸೂಲಿ ಮಾಡದೆ ಏಕೆ ಸುಮ್ಮನೆ ಬಿಟ್ಟಿತ್ತು ?ಎಂಬ ಪ್ರಶ್ನೆಗಳೂ ಎದುರಾಗಿವೆ. ಆದರೆ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಿದಾಗ ಮೀಟರ್ ಓದುವ ಸಿಬ್ಬಂದಿಯ ತಪ್ಪಿನಿಂದಾಗಿ ಈ ಗೊಂದಲ ಉಂಟಾಗಿದ್ದು ಶೀಘ್ರ ಪರಿಷ್ಕøತ ಬಿಲ್ ನೀಡುವ ಭರವಸೆ ನೀಡಿದ್ದಾರೆ.