Monday, October 14, 2024
Google search engine
HomeYour Childಮಗಳೆಂದರೆ Tension ಅಲ್ಲ Ten sons ಗೆ ಸಮ...

ಮಗಳೆಂದರೆ Tension ಅಲ್ಲ Ten sons ಗೆ ಸಮ…

ಧನಂಜಯ ಕುಚ್ಚಂಗಿಪಾಳ್ಯ


ಮಗಳೆಂದರೆ ಅಪ್ಪನಿಗೆ ಜೀವ, ಅಪ್ಪ ಅಂದರೆ ಮಗಳಿಗೆ ಪ್ರಪಂಚ. ಮಗಳು ಅಂದರೆ ಸಂತೋಷ,ದೇವತೆ, ಉಸಿರು, ಹಸಿರು, ಅನುರಾಗ ಭಾವನೆಗಳ ಮೊತ್ತ. ಸಮೃದ್ಧಿಯ ಸಂಕೇತ,ವಾತ್ಸಲ್ಯದ ಪ್ರತಿರೂಪ,ಮಮತೆಯ ದನಿ,ಮರ್ಯಾದೆಯ ಪರಮಾವಧಿ.

ಸಾಂತ್ವನದ ಗಣಿ, ಐಶ್ವರ್ಯದ ಧ್ಯೋತಕ, ಸೌಂದರ್ಯಕ್ಕೆ ಪರ್ಯಾಯ ಪದ,ಸೃಷ್ಟಿಯ ಚಿಹ್ನೆ,ಸಂಸ್ಕಾರದ ಪ್ರತೀಕ, ಬದುಕಿನ ನೆಮ್ಮದಿ. ಮಗಳು ಅಂದರೆ ಯಾಕೆ ವಿಶೇಷ ಗೊತ್ತಾ? ಮಗಳು ಎಂಬ ಪದದಲ್ಲಿ ಮಗನೂ ಇದ್ದಾನೆ. ಅದಕ್ಕೆ ಮಗಳನ್ನ ಸಂಭೋದಿಸುವಾಗ ಮಗನೇ ಅಂತಲೂ ಕರೆಯುತ್ತೇವೆ. ಆದರೆ ಮಗ ಪದದಲ್ಲಿ ಮಗಳು ಇಲ್ಲ!

ಮನೆಯಲ್ಲಿ ಮಗಳ ಮಾತು ಗಿಳಿಯಂತೆ, ಗೆಜ್ಜೆ ಹಾಕಿದ ಕಾಲುಗಳು ಓಡಾಡಿದರೆ ನವಿಲಿನ ನರ್ತನದಂತೆ. ಮಗಳು ಎಂಬ ಈ ಪದದಲ್ಲಿ ಎಂತಹ ಸುಖ, ಅದ್ಭುತವಾದ ಜೀವನ ರಹಸ್ಯವಿದೆಯೆಂದರೆ, ದೇವರು ತನ್ನ ಭಕ್ತನ ಬಗ್ಗೆ ಸಂತೃಪ್ತಗೊಂಡಾಗ, ಅತೀ ಸಂತೋಷಗೊಂಡಾಗ, ತನ್ನ ಭಕ್ತನಿಗೆ ಮಗಳನ್ನು ಪಡೆಯುವ ಸಂತಾನ ಭಾಗ್ಯದ ವರವ ಕರುಣಿಸುತ್ತಾನಂತೆ!

ಹೆಣ್ಣು ಮಗುವಿನ ತಂದೆ-ತಾಯಿಯೆನಿಸಿಕೊಳ್ಳುವುದೇ ಒಂದು ಹೆಮ್ಮೆ. ಅದು ಹೇಗೆ ಅಂತೀರ? 90 ರ ದಶಕದ ಪ್ರಾರಂಭಿಕ ವರ್ಷ.ಆಗ ನಮ್ಮ ಮನೆಯಲ್ಲಿ ಹೆಣ್ಣೆಂದರೆ ಅಮ್ಮ ಒಬ್ಬಳೇ, ಇಲ್ಲಿಯವರೆಗೂ ನಮ್ಮನ್ನೆಲ್ಲ ಎತ್ತಿ ಆಡಿಸಿದ್ದ ಅಕ್ಕಂದಿರಿಗೆ ಮದುವೆಯಾಗಿತ್ತು, ಉಳಿದ ನಾವೆಲ್ಲರೂ ಅಪ್ಪನೂ ಸೇರಿದಂತೆ ಐದು ಜನರು ಗಂಡು ಮಕ್ಕಳೇ. ಇಲ್ಲದ್ದಕ್ಕೆ ಕಂಡುಬಂದ ಕೊರತೆಯ ಕಾರಣವೋ,ನನ್ನ ಮನದೊಳಗಿದ್ದಂತೆ ನನ್ನ ಸ್ನೇಹಿತರಿಗೆಲ್ಲಾ ಇದ್ದಂತೆ ನನಗೂ ಆಡಿ ನಲಿಯುವುದಕ್ಕೆ ನನಗಿಂತ ಚಿಕ್ಕವಳು, ನಾನು ಹೇಳಿದಂತೆ ಕನಿಷ್ಠ ಮಟ್ಟದಲ್ಲಾದರೂ ಕೇಳುವ ಮನಸ್ಸುಳ್ಳ ಹೆಣ್ಣು ಮಗಳೊಬ್ಬಳು ಇರಬೇಕಿತ್ತು,

ನಾನು ಎತ್ತಿ ಆಡಿಸಿ ಮುದ್ದಿಸಬೇಕೆಂಬ ಆಸೆಗೋ, ನನ್ನ ಅಣ್ಣನ ಮಗಳು ಹುಟ್ಟುವವರೆಗೂ ಕೊರಗು ಕಾಡುತ್ತಲೇ ಇತ್ತು.ಅವಳು ಹುಟ್ಟಿದ ದಿನ ಆಕಾಶವೇ ನನ್ನ ಕೈಗೆ ಸಿಕ್ಕಷ್ಟು ಸಂತೋಷ. ಆದರೆ ಅವಳನ್ನು ಎತ್ತಿ ಆಡಿಸುವ, ಮುದ್ದಿಸುವ ವಯಸ್ಸು ಮುಗಿಯುವ ಹೊತ್ತಿಗೆ, ನಂತರ ನನ್ನ ಅಣ್ಣ ಮತ್ತು ತಮ್ಮನಿಂದ ಜನ್ಮ ಪಡೆದ ಮಕ್ಕಳೆಲ್ಲರೂ ಗಂಡು ಸಂತಾನವೇ.!

ಮತ್ತದೇ ಕೊರಗು ತಿರುಗಿ ಬಂತು.ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದ ನನಗೆ ಮತ್ತೇಲ್ಲಿ ಗಂಡು ಮಗುವೇ ಆಗಬಹುದೆಂಬ ಆತಂಕದಲ್ಲಿದ್ದಾಗ ಇರುವ ಒಬ್ಬನೇ
ಸಾಕೆಂದು ಸುಮ್ಮನಾಗಿ ಕುಟುಂಬ ಯೋಜನೆಗೆ ಮುಂದಾದ ನನಗೆ, ನನ್ನ ಮನದಾಸೆ ಅರಿತ ನನ್ನಾಕೆ ಖಂಡಿತವಾಗಿಯೂ ಈ ಭಾರಿ ಹೆಣ್ಣು ಮಗುವೇ ಆಗುವುದು, ನನ್ನ ಮಗನ ಜೊತೆ ಕೂಡಿ ಆಡಿ ನಲಿಯುವುದಕ್ಕೆ ಇನ್ನೊಂದು ಮಗುವಿನ ಅವಶ್ಯಕತೆಯ ಅರಿವು ಮೂಡಿಸಿ ಕನಸು ಕಮರಿ ಹೋಗದಂತ ಭರವಸೆ ತುಂಬಿದಳು.

ಅವಳು ತುಂಬಿದ ಭರವಸೆ, ದೇವರಲ್ಲಿ ನಾನಿಟ್ಟ ನಿರಂತರ ಪ್ರಾಮಾಣಿಕ ಮೊರೆಯ ಫಲವಾಗಿ,ಈಗ ನನ್ನ ಮನೆಯ, ಮನದ ಕಣ್ಣಾಗಿರುವ ಮುದ್ದಿನ ಮಗಳು ಲಕ್ಷ್ಮಿ ಸುವಿಧ ಹುಟ್ಟಿ ಇಂದಿಗೆ 6 ವರ್ಷಗಳು. ಹೆಣ್ಣು ಮಗುವೇ ಹುಟ್ಟುವುದೆಂಬ ಭರವಸೆ ಎಷ್ಟರಮಟ್ಟಿಗೆ ನನ್ನಳೊಗಿತ್ತೆಂದರೆ, “One beautiful colour added to our life ಅದನ್ನ ಕನ್ನಡಕ್ಕೆ ತರ್ಜುಮೆಗೊಳಿಸಿ ನಮಗೆ ಮಹಾಲಕ್ಷ್ಮಿಯಂಥ ಹೆಣ್ಣು ಮಗು ಜನಿಸಿದ್ದಾಳೆ” ಅಂತ ಹುಟ್ಟುವ ಮೊದಲೇ ಸಂದೇಶ ಸಿದ್ದಪಡಿಸಿಕೊಂಡು ಸ್ನೇಹಿತರಿಗೆ ಕಳುಹಿಸಲು ಸಿದ್ದನಾಗಿದ್ದೆ!!

ಅವಳಿಗೊಂದು ಅರ್ಥಪೂರ್ಣವಾದ ಹೆಸರಿಡುವುದರಲ್ಲೂ ವಿಶೇಷತೆ ಮೆರೆದಿದ್ದೆ. ‘ಲಕ್ಷೀಸುವಿಧ’ ಎಂಬ ಹೆಸರನ್ನಿಡಲು ತೀರ್ಮಾನಿಸಿದೆ.ಕಾರಣ ನನ್ನ ತಾಯಿಯ ಹೆಸರು ಲಕ್ಷ್ಮಮ್ಮ, ಅವರಜ್ಜಿಯ ಔದಾರ್ಯ ಗುಣಗಳು ಬರಲೆಂದು ಮತ್ತು ನಮ್ಮ ಮನೆತನದ ಹೆಣ್ಣು ದೇವರ ಹೆಸರು ಲಕ್ಷೀಯೇ ಆದ್ದರಿಂದ ಅವಳ ಕೃಪೆ ಸದಾ ಇರಲೆಂದು ಲಕ್ಷ್ಮೀ ಎಂದು ಪ್ರಾರಂಭಿಸಿ, ಮುಂದೆ ‘ಸು’ ಅವರಮ್ಮನ ಹೆಸರು ಸುಚಿತ್ರ.

ಯಾವತ್ತೂ ಹೆತ್ತಮ್ಮನಿಗೆ ಮಗಳ ಕೈರುಚಿ, ತನ್ನಮ್ಮನ ಕೈತುತ್ತು ನೆನಪಿಸಿದಂದು ಮಗಳ ಜನ್ಮ ಸಾರ್ಥಕವಂತೆ. ನಂತರ ‘ವಿ’ ನನ್ನ ತಂದೆಯ ಹೆಸರಿನ ಮೊದಲ ಅಕ್ಷರ, ಅವರು ಧೈರ್ಯ ಮತ್ತು ಸಾಹಸದ ಪ್ರತೀಕ, ಅವಳ ತಾತನ ಈ ಗುಣಗಳು ಇವಳಲ್ಲಿರಲೆಂದು , ತದನಂತರದ್ದೆ ‘ಧ’ ನನ್ನ ಹೆಸರಿನ ಪ್ರಾರಂಭಿಕ ಅಕ್ಷರ. ಅಲ್ಲದೇ ಯಾವಾಗ ಒಬ್ಬ ತಂದೆ,ತನ್ನ ಮಗಳಲ್ಲಿ ತನ್ನ ತಾಯಿಯನ್ನು ಕಾಣುತ್ತಾನೋ ಅಂದಿಗೆ ಆ ಮಗಳ ಜನ್ಮ ಸಾರ್ಥಕವಂತೆ. ಹೀಗೆ ಇವೆಲ್ಲ ಗುಣಗಳು ಅಲ್ಪಸ್ವಲ್ಪವಾದರೂ ಅವಳಲ್ಲಿ ಮೈಗೂಡಲೆಂದು ಪರಿಪರಿಯಾಗಿ ಆಲೋಚಿಸಿ ಹೆಸರಿಟ್ಟದ್ದಾಯಿತು.

ಅವಳು ಮಾತು ಕಲಿತಾಗಿಂದ ಅವಳ ಕೆಲವು ಪ್ರಶ್ನೆಗಳಿಗೆ ಉತ್ತರವಿಲ್ಲ.ಅವಳು ತಿರುಗಿ ಕೇಳುವ ಪ್ರಶ್ನೆಗಳು ನಮ್ಮನ್ನೇ ಯೋಚನೆಗೀಡು ಮಾಡಿ ಬಿಡುತ್ತವೆ.ಇಲ್ಲಿಗೆ ಸರಿಯಾಗಿ ನಾಲ್ಕು ವರ್ಷದ ಹಿಂದೆ, ಆಗ ಅವಳಿಗಿನ್ನು ಎರಡು ವರ್ಷ.

ಶ್ರೀ ರಾಮ ನವಮಿಯ ದಿನ ಸಂಪ್ರದಾಯದಂತೆ ನನ್ನಪ್ಪನ ಸಮಾಧಿಗೆ ಪೂಜೆ ಸಲ್ಲಿಸಲು ತೋಟಕ್ಕೆ ಕರೆದುಕೊಂಡು ಹೋಗಿದ್ದೆವು. ಇದು ತಾತನ ಗುಂಡಿಯಮ್ಮ ತಾತನಿಗೆ ಕೈ ಮುಗಿಯೆಂದಾಗ ಅಲ್ಲಿ ನಿಂತಿದ್ದ ಅವಳು ಅವಳಮ್ಮನಿಗೆ ಒಂದು ಕುತೂಹಲಕಾರಿ ಪ್ರಶ್ನೆಯಿತ್ತಳು.

ಅಮ್ಮ ತಾತ ಎಲ್ಲಯ್ತೇ? ಕಾಣುಸ್ತಿಲ್ಲ ಅಂದಳು, ತಾತ ಗುಂಡಿ ಒಳಗಡೆ ಇದೆ ಎಂದಳು ಅವರಮ್ಮ. ಮತ್ತೆ ಕರೀ ಮಾತಾಡಸ್ತೀನಿ ತಾತನ್ನ ಎಂದಳು ಮಗಳು.ಅಮ್ಮ ಪೂಜೆಯಲ್ಲಿ ಬ್ಯೂಸಿಯಾದಾಗ, ನನ್ನಪ್ಪ ಜೀವಂತವಿರುವಾಗ ಪಕ್ಕದ ತೋಟದ ಅಪ್ಪನ ಒಡನಾಡಿಯಾಗಿದ್ದ ವ್ಯಕ್ತಿಯೊಬ್ಬರು ಪೂಜಾ ಕಾರ್ಯಕ್ರಮ ಪಾಲ್ಗೊಂಡು,ನನ್ನ ಮಗಳನ್ನು ಹತ್ತಿರ ಕರೆದು ನಿಮ್ಮ ತಾತ ಕರೆದರೆ ಬರೋದಿಲ್ಲ ಅಂದರು.

ಏಕೆ ಬರೋದಿಲ್ಲಾ? ಎಂಬುದು ನನ್ನ ಮಗಳ ಪ್ರಶ್ನೆ. ನಿಮ್ಮ ತಾತ ಸತ್ತು ಹೋಗಿದೆ ಅದಕ್ಕೆ ಬರುವುದಿಲ್ಲವೆಂಬುದು ಅವಜ್ಜನ ಉತ್ತರ. ಇವಳು ಮುಂದುವರೆದು ಏಕೆ ಸತ್ತೋಯ್ತು? ಅದಕ್ಕವಜ್ಜ ವಯಸ್ಸಾಗಿತ್ತು ಅದಕ್ಕೆ ಸತ್ತೋಯ್ತು ಎಂದಾಗ.

ಈ ನನ್ನ ಪುಟಾಣಿ ಮಗಳು ಸೊಂಟದ ಮೇಲೆ ಎರಡೂ ಕೈಗಳನ್ನು ಇಟ್ಟುಕೊಂಡು, ಅವಜ್ಜನನ್ನೇ ದೃಷ್ಟಿಸಿ ನೋಡುತ್ತಾ ಮತ್ತೇ ನಿಂಗೆ ಬಿಳಿಕೂದ್ಲಾಗಿ ನಿಂಗೂ ವಯಸ್ಸಾಗಿದೆ ನೀನು ಸತ್ತೇ ಹೋಗಿಲ್ಲ ಅಂದು ಬಿಟ್ಟಳು. ವಯಸ್ಸಿಗೆ ಮೀರಿದ ಪ್ರಶ್ನೆ ಕೇಳಿ, ನೆರೆದಿದ್ದವರನ್ನೆಲ್ಲಾ ನಿಬ್ಬೆರಗಾಗಿಸಿ, ಈ ಪ್ರಶ್ನೆ ಈ ವಯಸ್ಸಿಗೆ ಹೇಗೆ ಮೂಡಲು ಸಾಧ್ಯವೆಂದು? ಚಿಂತಿಸುವಷ್ಟು ನಮ್ಮನ್ನು ತಬ್ಬಿಬ್ಬುಗೊಳಿಸಿದ್ದಳು .

ಆವಜ್ಜ ನಮ್ಮಮ್ಮನ ಕಡೆ ತಿರುಗಿ ನೋಡ್ಡೋ ನಿನ್ ಮೊಮ್ಮಗಳನ್ನ?! ಅಂದವನೇ ಮೌನಕ್ಕೆ ಜಾರಿದ. ಅವಳ ತೊದಲು ಭಾಷೆಯಲ್ಲಿ ಅಪ್ಪಾ.. ವಿ(ಈ)ಜಾಡೋಕೆ ಕರ್ಕೊಂಡು ಹೋಗಪ್ಪ ಅಂತ ಕೇಳ್ತಿದ್ದವಳನ್ನ, ಒಂದೊಮ್ಮೆ ಸ್ನೇಹಿತರ ಕುಟುಂಬದ ಜೊತೆ ಬೀಚ್ ನ ನೀರಿನಲ್ಲಿ ಆಟವಾಡಿಸಲು ಕರೆದುಕೊಂಡು ಹೋಗಿದ್ದೆ.

ನೀರಿಗಿಳಿದ ಇವಳು ಸಮುದ್ರದ ಸ್ವಾಭಾವಿಕ ನೀರಿನ ಗುಣ ಉಪ್ಪಿನಾಂಶದಿಂದ ಕೂಡಿರುತ್ತದೆಂದು ಇನ್ನೂ ಅರಿಯದ ವಯಸ್ಸಲ್ಲಿ, ಸಮುದ್ರದ ಅಲೆಯಿಂದ ಸಹಜವಾಗಿ ಚೆಲ್ಲುವಿಕೆಯಿಂದ, ನೀರು ಕಣ್ಣಿಗೆ ರಾಚಿ ಕಣ್ಣಿನ ಉರಿಯೊಂದಿಗೆ ಬಾಯೆಲ್ಲಾ ಉಪ್ಪುಪ್ಪು ಎನಿಸಿದ ತಕ್ಷಣ ಅವಳು ಕೇಳಿದ ಮುಗ್ಧ ಪ್ರಶ್ನೆ” ಯಾರಪ್ಪಾ ಈ ನೀರಿಗೆ ಇಷ್ಟೊಂದು ಉಪ್ಪು ಹಾಕ್ಕ್ದೋರು ಅಂತ”?

ಹೀಗೆ ಅವಳಾಗೇ ಕೇಳುವ ಈ ತರಹದ ಪ್ರಶ್ನೆ ಒಂದೆಡೆಯಾದರೆ, ನಾವೇ ಕೇಳುವ ಪ್ರಶ್ನೆಗೆ ಆಶ್ಚರ್ಯಚಕಿತಗೊಳಿಸುವ ಸಿದ್ಧ ಉತ್ತರ ಅವಳ ಮನಸ್ಸಲ್ಲಿ ಆ ತಕ್ಷಣಕ್ಕೆ ಹೊಳೆಯುವುದನ್ನು ಗಮನಿಸಿರುವ ಮನೆ ಮಂದಿಗೆಲ್ಲ ಅವಳನ್ನು ಮಾತಿಗೆಳೆದು ಮಜ ತೆಗೆದುಕೊಳ್ಳವುದು ನಿತ್ಯದ ಸಂಭ್ರಮ.

ಮಗಳು ಜಾನಕಿ ಸೀರಿಯಲ್ ನ ಟೈಟಲ್ ಬಂದಾಕ್ಷಣ ನಾನು ಹಾಡಿನ ಪಲ್ಲವಿಯನ್ನ ಗುನುಗುತ್ತಿದ್ದರೆ, ಅಪ್ಪಾ ಮಗಳು ಜಾನಕಿ ಅನ್ಬೇಡಾ… ಮಗಳು ಸುವಿಧ ಅನ್ನು ನಂಗಿಷ್ಟ ಅಂದು ಅಪ್ಪ- ಮಗಳ ಸಂಬಂಧವನ್ನ ಇನ್ನಷ್ಟು ಗಟ್ಟಿಗೊಳಿಸಿದವಳು.

ಇನ್ನೊಂದು ದಿನ ಅವಳ ದೊಡ್ಡಪ್ಪ ಯಾಕಮ್ಮಾ ನನ್ನ ಹಬ್ಬಕ್ಕೆ ಊಟಕ್ಕೆ ನಿಮ್ಮನೆಗೆ ನೀನ್ ಕರಿಲಿಲ್ಲ ಅಂತ ತಮಾಷೆಗೆ ಕೇಳುದ್ರೇ ಇವಳು ಸೀರಿಯಸ್ ಆಗಿ ನಮ್ಮಪ್ಪ ಆವತ್ತು ಹೇಳ್ಲಿಲ್ವಾ ಹಬ್ಬಕ್ಕೆ ಬಾ ಅಂತ ನಿಂಗೆ ಕಿವಿ ಕೇಳ್ಸಲಿಲ್ವಾ ? ಎರಡು ಸಾರಿ ಹೇಳ್ಬೇಕಾ? ಮತ್ತೆ ನಾನ್ ಬೇರೆ ಕರಿಬೇಕಂತೆ, ಅಂತ ಅನವಶ್ಯಕ ಕರೆ ಸಾಧುವಲ್ಲವೆಂದು ಮುಗ್ಧ ಮಾತುಗಳಲ್ಲೇ ಹೊರ ಹಾಕಿದವಳು.

ತಾನೇ ಮುದ್ದಾಗಿ ಬರೆದು ಹೋಂವರ್ಕ ಮುಗಿಸಿದ್ದಾಗ, ಅವರ ಮಿಸ್ ಹೇ.. ಸುವಿಧ ಈ ಹೋಂವರ್ಕ ಯಾರೇ ಬರೆದುಕೊಟ್ಟಿದ್ದು ಅಂತ ಕೇಳಿದ್ದಕ್ಕೆ , ನಾನೇ ಬರೆದಿದ್ರು ಆ ಮಿಸ್ ನೀನ್ ಬರ್ಕೋಟ್ಟಿದ್ದೀಯಾ ಅಂತಾರೆ ಹೋಗಪ್ಪೋ ಅಂದವಳು, ಅವತ್ತಿಂದ ಇವತ್ತಿನನವರೆಗೂ ನಾವೇ ಬರೆದುಕೊಡಲು ಮುಂದಾದರೆ ‘ಬೇಡ ಸುಮ್ಕಿರಪ್ಪ ಆ ಮಿಸ್ ಯಾರೋ ಬರ್ಕೋಟ್ಟವರೇ ಅಂತಾರೆ ನಾನೇ ಬರಿತೀನಿ ಅನ್ನೊ ಸ್ವಾಭಿಮಾನ.

ಯಾರ್ಗೋ ಅವರ ಮಿಸ್ ಬೈದದಕ್ಕೆ ಉಳಿದವರೆಲ್ಲ ಅಳ್ತಿದ್ದಾಗ, ನಿಂಗ್ ಅಳು ಬರ್ತೀಲ್ವೇನೆ ಸುವಿಧ ಅಂದರೆ ಸುಮ್ ಸುಮ್ಕೇ ಯಾಕ್ ಅಳ್ಬೇಕು ಅಂದಿದ್ದಳಂತೆ ಅದಕ್ಕವರು ಅವರಮ್ಮಂಗೆ ನಿಮ್ಮ ಮಗಳಿಗೆ ಏನ್ ಧೈರ್ಯ ಅಂತ ಮೆಚ್ಚುಗೆ ವ್ಯಕ್ತಪಡಿಸಿರಂತೆ.

ಇರುವುದನ್ನ ಮುಕ್ತವಾಗಿ ಹೇಳಿಬಿಡುವ ಸ್ವಾಭಾವಿಕ ನೆಡೆಯವಳು. ಏನಾದ್ರೂ ಬೇಕಾದ್ರೇ, ಎಲ್ಲಿಗಾದ್ರೂ ಕರ್ಕೊಂಡು ಅಂತ ಪುಸಲಾಯಿಸೋಕೆ ಅಪ್ಪನ ಬಗ್ಗೆ ಇರೋ ಹಾಡುಗಳನ್ನ ಅಪ್ಪ ಐ ಲವ್ ಯು ಪ್ಪಾ.. ಪರಪಂಚ ನೀನೆ ಪರಪಂಚ ನೀನೆ.. ಅಂತಾ ನನ್ನನ್ನೇ ನೋಡ್ತಾ ಗುನುಗುತ್ತಾ ಅಪ್ಪನ್ನ ಒಲಿಸಿಕೊಂಡು ಮನಸ್ಸ್ ಸಂತೋಷ ಪಡಿಸುವ ಚಾಲಾಕಿ.

ರಾತ್ರಿ ಮಲುಗುವಾಗ ಬೇಗ ಮಲಗು ಇಲ್ಲ ಅಂದ್ರೇ ಆಚೆಗೆ ಗೊಗ್ಗಯ್ಯ ಬಂದವನೇ, ಒಳಗಡೆ ಬಂದು ನಿನ್ನ ಹಿಡ್ಕೋಂಡು ಹೋಗ್ತಾನೇ ಅಂದ್ರೇ, ಅಪ್ಪಾ ನೀನು ಭಲೇ ಭಲೇ ಆಡ್ತೀಯಲ್ಲಾ (ದುರ್ಯೋಧನನ ಪಾತ್ರ ಮಾಡುವಾಗ) ಆವಾಗ ಕೈಯಲ್ಲಿ ಏನೋ ಹಿಡ್ಕೋಂಡಿರ್ತಿಯಲ್ಲ ಅದು ಏನು ಹೇಳು ಅಂದ್ಲು, ‘ಗದೆ’ ಕಣಮ್ಮ ಅದು ಅಂದ್ರೆ.

ಅದನ್ನ ತೋರ್ಸಪ್ಪಾ ಗೊಗ್ಗಯ್ಯ ಒಡೊಗ್ತಾನೇ! ಅಂದು,ನೀವು ಸುಳ್ಳು ಸುಳ್ಳು ಹೇಳುದ್ರೇ ನಾ ನಂಬೋಳಲ್ಲ ಅನ್ನೋದನ್ನ ಪರೋಕ್ಷವಾಗಿ ಸಾಬೀತುಪಡಿಸಿದ್ದಳು. ಹೀಗೆ ಮುಗ್ಧ ಉತ್ತರಗಳೊಂದಿಗೆ ಮನೆ ಮಂದಿಯನ್ನೆಲ್ಲ ತನಗರಿವಿಲ್ಲದೇ ನಗೆಗಡಲಲ್ಲಿ ತೇಲಿಸುತ್ತಾ, ಮನೆ ತುಂಬಾ ಮುಗ್ಧ ಮಾತುಗಳಿಂದ ಸದಾ ಆನಂದ ತುಂಬುತ್ತಿರುವುದು ಮಾತ್ರ ಇಂದಿಗೂ ಈ ನನ್ನ ಮುದ್ದಿನ ಮಗಳೆ.

ಅದಕ್ಕೆ ಹೇಳೋದು…. ಮಗಳೆಂದರೆ ವರ್ತಮಾನ,ಮಗಳೆಂದರೆ ಭವಿಷ್ಯ, ಮಗಳೆಂದರೆ ಬೆಲೆ ಕಟ್ಟಲಾಗದ ದೇವರ ಸೃಷ್ಟಿ. ಮಗಳೆಂದರೆ ಇಷ್ಟೆಲ್ಲಾ ಇದ್ದರೂ ಏಕೆ ಈಗಿನವರಿಗೆಲ್ಲಾ ಭಾರ ಎನಿಸುತ್ತಿದ್ದಾಳೆ? ಹೆಣ್ಣು ಭ್ರೂಣ ಹತ್ಯೆಯನ್ನು ಈಗಲೂ ಕಾಣುತ್ತಿದ್ದೇವೆ? ವಂಶಾಭಿವೃದ್ದಿಗೆ ಗಂಡು ಬೇಕು ನಿಜ, ಆದರೆ ಅದು ಹೆಣ್ಣಿಲ್ಲದೇ ಹೇಗೆ ಸಹಜ ವಂಶಾಭಿವೃದ್ದಿ ಸಾಧ್ಯ? ಅದೇನೇ ಇರಲಿ ತಂದೆಯ ನಿಜವಾದ ಅಪತ್ಬಾಂಧವಳು ಮಗಳು.

ಅದಕ್ಕೆ ಮಗಳು ಭಾರ ಅಲ್ಲ; Tension ಅಲ್ಲವೇ ಅಲ್ಲ; Ten sons ಗೆ ಸಮ. ಮಗಳು ಮನೆಯ ಲಕ್ಷ್ಮೀ, ಸಮೃದ್ಧಿ, ಕಾರುಣ್ಯ.ಮಗಳಿಗೆ ಗೌರವ ಕೊಡಿ,ಮುದ್ದಿಸಿ,ಮಮತೆಯಿಂದ ಪ್ರೀತಿಸಿ. ಒಬ್ಬ ಮಗಳು ಸಾವಿರ ನಕ್ಷತ್ರಕ್ಕೆ ಸಮ. ನನ್ನ ಮುದ್ದಿನ ಮಗಳಿಗೆ 6 ವರ್ಷ ತುಂಬಿದ ಈ ದಿನದಂದು ಕರೋನಾದ ಭೀಕರತೆ ಇನ್ನೂ ಕಡಿಮೆಯಾಗದಿರುವ ನೋವಿದೆ.

ನಮಗೂ ಸಂಕಟ ತಂದಿಟ್ಟಿದೆ.ಕಾರಣ ಕಳೆದ ವರ್ಷ ಈ ಸಮಯದಲ್ಲಿ ಅವಳೇ ಹೇಳಿದ್ದಳು ಕರೋನಾ ಮುಗಿದ ಮೇಲೆ ಕೇಕ್ ಕಟ್ ಮಾಡ್ಸಪ್ಪಾ ಅಂತ.ಆದರೆ ಈ ವರ್ಷವೂ ಕೂಡ ಭಯದ ವಾತಾವರಣದಲ್ಲೆ ಅವಳ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಬೇಕಿದೆ. ನನ್ನ ಮುದ್ದಿನ ಮಗಳ ಭವಿಷ್ಯ ನನ್ನಿಷ್ಟ- ಅವಳಿಷ್ಟಗಳು ಮೇಳೈಸಿಕೊಂಡು ಬೆಳೆಯುವಂತ ವ್ಯಕ್ತಿತ್ವ, ಅವಳ ಬಗ್ಗೆ ಕಂಡ ಕನಸುಗಳು ನನಸಾಗುವಂತ ಸಕಲ ಸೌಭಾಗ್ಯವ ಆ ಭಗವಂತ ಕರುಣಿಸಲಿ.. ಹ್ಯಾಪಿ ಬರ್ತಡೇ ಮಗಳೇ, ಪ್ರೀತಿಯ ಅಮ್ಮು……

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?