ತುಮಕೂರು:
ನಗರದಲ್ಲಿ ಶನಿವಾರ ಐದು ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಸಭೆ ಆರಂಭವಾಗಿದೆ.
ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.
ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಪರಿಷತ್ ಚುನಾವಣೆಗೆ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಗುತ್ತದೆ.
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆ ಆರಂಭಕ್ಕೂ ಮುನ್ನ ಮಾತನಾಡಿ, ಸಭೆಯಲ್ಲಿ ಚುನಾವಣೆ ಸಿದ್ಧತೆಗಳ ಬಗ್ಗೆ ಚರ್ಚಿಸಲಾಗುತ್ತದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಕಡಿಮೆ. ಒಬ್ಬ ಭ್ರಷ್ಟ ಮುಖ್ಯಮಂತ್ರಿ ಹೋಗಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿ ಅಧಿಕಾರಕ್ಕೆ ಬರುತ್ತಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನೆರೆ ಸಂತ್ರಸ್ತರಿಗೆ ನೆರವಾಗಲು ಸತೀಶ್ ಜಾರಕಿಹೊಳಿ, ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಪಕ್ಷದ ವತಿಯಿಂದ ಸಮಿತಿ ರಚಿಸಲಾಗಿದೆ. ಈ ತಂಡ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವಾಗಲಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಪಾವಗಡ ಶಾಸಕ ವೆಂಕಟರವಣಪ್ಪ ಸೇರಿದಂತೆ ಜಿಲ್ಲೆ ಹಾಗೂ ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಇಡೀ ದಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.