Publicstory
ಮಧುಗಿರಿ: ಮದ್ಯಪಾನ ಮಾಡಿ ಮುಖ್ಯಶಿಕ್ಷಕಿಗೆ ಚಪ್ಪಲಿ ತೋರಿಸಿ ಅಸಭ್ಯವಾಗಿ ವರ್ತಿಸಿದ ತಾಲ್ಲೂಕಿನ ಗೊಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಫಣೀಂದ್ರನಾಥ್ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ರೇವಣ್ಣ ಸಿದ್ದಪ್ಪ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಮಾನತುಗೊಂಡ ಶಿಕ್ಷಕ ಈ ಹಿಂದೆ ಗೌರಮ್ಮ ಎಂಬುವವರು ಮುಖ್ಯಶಿಕ್ಷಕರಾಗಿ ಪ್ರಭಾರ ವಹಿಸಿಕೊಳ್ಳುವಂತೆ ಬಿ.ಇ.ಒ ಆದೇಶಿಸಿದ್ದರು. ಆಗ ಮುಖ್ಯ ಶಿಕ್ಷಕರ ಪ್ರಭಾರ ಹೊಂದಿದ್ದ ಫಣೀಂದ್ರನಾಥ್ ತಮ್ಮ ಸ್ಥಾನವನ್ನು ಬಿಟ್ಟುಕೊಡದೆ ಬಿ.ಇ.ಒ ಆದೇಶವನ್ನು ದಿಕ್ಕರಿಸಿ ಮನ ಬಂದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ನಿಂದಿಸಿದ್ದ, ಈತನ ವರ್ತನೆಯ ಬಗ್ಗೆ ಶಾಲೆಯ ಶಿಕ್ಷಕರು ನಮಗೆ ಭಯದ ವಾತಾವರಣವಿದ್ದು ರಕ್ಷಣೆ ನೀಡುವಂತೆ ಲಿಖಿತವಾಗಿ ದೂರು ನೀಡಿದ್ದರು.
ಶಾಲೆಗೆ ಸರಿಯಾದ ಸಮಯಕ್ಕೆ ಬಾರದೆ ಹಾಜರಾತಿ ಪುಸ್ತಕವನ್ನು ಕಸಿದುಕೊಂಡು ಸಹಿ ಹಾಕುವ ಪರಿಪಾಠ ರೂಢಿಸಿಕೊಂಡಿದ್ದನು. ಮಕ್ಕಳಿಗೆ ಕಲಿಕೆ ಮಾಡಲು ಗೊಂದಿಹಳ್ಳಿ ಗ್ರಾಮ ಭೇಟಿ, ಮನೆ ಮನೆ ಎಂದು ಚಲನವಲನ ಪುಸ್ತಕದಲ್ಲಿ ನಮೂದಿಸಿ ನಾಪತ್ತೆಯಾಗಿದ್ದ.
ವಿಜ್ಞಾನ ಶಿಕ್ಷಕನಾಗಿದ್ದ ಫಣೀಂದ್ರನಾಥ 6 ಮತ್ತು 7 ತರಗತಿ ವಿದ್ಯಾರ್ಥಿಗಳಿಗೆ ಬೋಧಿಸಲು ನಿರಾಕರಿಸುತ್ತಿದ್ದ.
ಮುಖ್ಯಶಿಕ್ಷಕರಿಗೆ ಜಾತಿ ನಿಂದನೆ ಮಾಡಿ ಏಕ ವಚನದಲ್ಲಿ ಮಾತನಾಡಿ ಅನುಚಿತವಾಗಿ ವರ್ತಿಸುತ್ತಿದ್ದುದರ ಬಗ್ಗೆ ಬಿ.ಇ.ಒ ಗೆ ಇಡೀ ಶಾಲೆಯ ಶಿಕ್ಷಕರಲ್ಲದೆ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರುಗಳು , ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರೂ ಸಹ ದೂರು ನೀಡಿದ್ದರು. ಸಾಂದರ್ಭಿಕ ರಜೆ ಎಂದು ಹಾಜರಾತಿ ಪುಸ್ತಕದಲ್ಲಿ ಬರೆದಿದ್ದರೂ ಕೂಡ ದೌರ್ಜನ್ಯವೆಸಗಿ ಸಹಿ ಮಾಡಿದ್ದಾರೆ. ಪ್ರತಿದಿನ ತಡವಾಗಿ ಶಾಲೆಗೆ ಬರುವುದು. ಸಹಿಮಾಡಿ ಮನೆಗೆ ಹೋಗುವುದನ್ನೇ ಪ್ರತಿದಿನದ ಕಾಯಕ ಮಾಡಿಕೊಂಡಿದ್ದರು. ಇದರಿಂದಾಗಿ ಶಾಲೆಯ ವಾತಾವರಣ ಶೈಕ್ಷಣಿಕ ವಾಗಿ ಹಾಳಾಗಿರುತ್ತದೆ. ಈತನ ವರ್ತನೆಯಿಂದ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪರಿಸ್ಥಿತಿ ತಲುಪಿರುತ್ತದೆ ಎಂದು ಇಲಾಖಾಧಿಕಾರಿಗಳು ವರದಿ ಸಲ್ಲಿಸಿದ್ದರು. ಈ ಎಲ್ಲಾ ಆರೋಪಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳ ತ್ರಿಸದಸ್ಯ ತಂಡದೊಂದಿಗೆ ಶಾಲೆಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದು ಮೇಲ್ಕಂಡ ಆರೋಪಗಳ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ.