ಎಂ.ಎನ್.ಭರತ್
ಚಿಕ್ಕನಾಯಕನಹಳ್ಳಿ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಶಾಲಾ ಕಾಲೇಜು ರಿ ಓಪನ್ ಆಗದೆ ಸಂಬಳ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಖಾಸಗಿ ಶಾಲೆ ಶಿಕ್ಷಕರ ಪಾಡು ಹೇಳತೀರದಾಗಿದೆ.
ಜೀವನ ನಡೆಸುವುದು ಬಹಳ ಕಷ್ಟವಾಗಿದ್ಧು, ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಕೂಲಿ ಕೆಲಸದ ಹುಡುಕಿದರೂ ಜನರು ಕೂಲಿಗೂ ಕರೆಯುತ್ತಿಲ್ಲ ಎಂದು ತಾಲ್ಲೂಕಿನ ಶಿಕ್ಷಕರೊಬ್ಬರು ಕಣ್ಣೀರಾದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 23 ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಇನ್ನಿತರ ಶಾಲೆಗಳ ನೂರಾರು ಶಿಕ್ಷಕರು ಕಳೆದ ನಾಲ್ಕು ತಿಂಗಳುಗಳಿಂದ ಸಂಬಳ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಾರಂಭವಾಗಿದ್ದರೂ ಸಹ ಪೋಷಕರು ಮಕ್ಕಳನ್ನು ದಾಖಲಿಸಲು ಕಾಯ್ದು ನೋಡುವ ತಂತ್ರ ಅನುಭವಿಸುತ್ತಿರುವುದರಿಂದ ಆಡಳಿತ ಮಂಡಳಿ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ ಎನ್ನುತ್ತಾರೆ ಶಿಕ್ಷಕರು.
ಕೆಲವು ಶಾಲಾ ಕಾಲೇಜುಗಳು ಆರ್ಥಿಕವಾಗಿ ಗಟ್ಟಿ ಇದ್ದರೂ ಸಂಬಳ ನೀಡುತ್ತಿಲ್ಲ ಎನ್ನುತ್ತಾರೆ.
ಖಾಸಗಿ ಶಾಲಾ ಆಡಳಿತ ಮಂಡಳಿ ನೀಡುವ ಅಲ್ಪ ಸಂಬಳದಲ್ಲಿ ಸಂಸಾರ ನಡೆಸುತ್ತಿದ್ದ ತಾಲ್ಲೂಕಿನ ನೂರಾರು ಶಿಕ್ಷಕರು ಇಂದು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ನಿತ್ಯದ ಅವಶ್ಯಕ ವಸ್ತುಗಳನ್ನು ಖರೀದಿಸಲು ಹಿಂದು ಮುಂದು ನೋಡುವಂತಾಗಿದೆ ಇವರ ಪಾಡು ಮತ್ತು ಶಿಕ್ಷಕರ ಕುಟುಂಬಗಳು ಕೋರೋಣ ಕಾಟದಿಂದ ನಲುಗುತ್ತಿದ್ದು ದಿಕ್ಕು ತೋಚದ ಸ್ಥಿತಿಗೆ ತಲುಪಿದೆ.
ನೆರವು ಅಗತ್ಯ …
ಇತ್ತ ಬೇಡಲು ಸಿದ್ಧವಿಲ್ಲದೆ ಬೇರೆ ಕೆಲಸಗಳು ಸಿಗದೆ ಮನೆಯಲ್ಲಿನ ದಿನದ ಖರ್ಚುಗಳಿಗೆ ಹಣವಿಲ್ಲದೆ ಖಾಸಗಿ ಶಿಕ್ಷಕರು ಪರದಾಡುವಂತಾಗಿದೆ. ಸಮಸ್ಯೆ ಹೇಳಿದರೆ ಸಮಾಜ ಕೀಳಾಗಿ ನೋಡುತ್ತದೆ ಎಂಬ ಭಯ ಒಂದು ಕಡೆ ಕಾಡುತ್ತಿದ್ಧರೆ ಬೇರೆ ವೃತ್ತಿ ಮಾಡಲು ಉದ್ಯೋಗ ಅವಕಾಶಗಳೇ ಇಲ್ಲವಾಗಿದೆ.
ಇನ್ನೂ ಕೆಲ ಖಾಸಗಿ ಶಿಕ್ಷಕರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.
ಸರ್ಕಾರ ಎಲ್ಲಾ ವರ್ಗಕ್ಕೆ ಕೊರೊನ ಅನುದಾನದಲ್ಲಿ ನೀಡಿರುವ ಅಲ್ಪ ಸಹಾಯವನ್ನು ಶಿಕ್ಷಕರಿಗೂ ನೀಡಬೇಕು ಎಂಬುದು ಹಲವರ ಮನವಿಯಾಗಿದೆ.
ವಿದ್ಯಾರ್ಥಿಗಳ ದಾಖಲಾತಿಯಾಗದೆ ಆಡಳಿತ ಮಂಡಳಿ ವೇತನ ನೀಡುವುದಿಲ್ಲ ಮತ್ತು ಶಾಲೆ ಪ್ರಾರಂಭವಾಗದೆ ಕೆಲಸ ಕಳೆದುಕೊಳ್ಳುವ ಭಯ ಇನ್ನೊಂದು ಕಡೆ ಕಾಡುತ್ತಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಖಾಸಗಿ ಶಾಲಾ
ಶಿಕ್ಷಕರೊಬ್ಬರು ತಮ್ಮ ಆಳಲನ್ನು ತೋಡಿಕೊಂಡರು.