Publicstory. in
ತುರುವೇಕೆರೆ: ತಾಲ್ಲೂಕಿನ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ 15 ವರ್ಷಗಳ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಮಾದರಿ ಅಭಿವೃದ್ದಿ ಕೆಲಸ ಕಾರ್ಯಗಳ ಆಗಿರುವುದನ್ನು ತಾಲ್ಲೂಕಿನ ಜನತೆ ಇಂದಿಗೂ ಮೆಲುಕು ಹಾಕುತ್ತಾರೆಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೋಳಾಲ ಗಂಗಾಧರ್ ತಿರುಗೇಟು ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲ್ಲೂಕಿನ ರಾಜಕೀಯದಲ್ಲಿ ಇದುವರೆಗಿನ ಯಾವೊಬ್ಬ ಶಾಸಕರು ಮಾಡದ ಅಭಿವೃದ್ಧಿ ಕಾರ್ಯವನ್ನು ಕೃಷ್ಣಪ್ಪರು ಮಾಡಿದ್ದಾರೆ. ಕೃಷ್ಣಪ್ಪರ ಬಗ್ಗೆ ಬಿಜೆಪಿಯ ಕೆಲವು ಮುಖಂಡರು ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದರು.
ಹಾಲಿ ಶಾಸಕರು ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಲ್ಲೆಗೆ ಮುಂದಾಗಿರುವುದು ಖಂಡನೀಯ. ಹಲ್ಲೆ ನಡೆಸಿದವನು ತಮ್ಮ ಪಕ್ಷದ ಕಾರ್ಯಕರ್ತನಲ್ಲ. ತಾನು ಅವನಿಗೆ ಬೆಂಬಲ ನೀಡಿಲ್ಲವೆಂಬುದನ್ನು ಹಾಲಿ ಶಾಸಕರು ತಮ್ಮ ಆತ್ಮಸಾಕ್ಷಿಯನ್ನು ಒತ್ತೆಯಿಟ್ಟು ಸಾರ್ವಜನಿಕವಾಗಿ ಹೇಳಲಿ.
ಅದು ಬಿಟ್ಟು ತಮ್ಮ ಪಕ್ಷದ ಬೆಂಬಲಿಗರಿಂದ ಹೇಳಿಕೆ ಕೊಡಿಸುವುದು ಯಾವ ನ್ಯಾಯ. ಖುದ್ದಾಗಿ ಶಾಸಕರೇ ಬಹಿರಂಗವಾಗಿ ಸತ್ಯಾಂಶವನ್ನು ಹೇಳಲಿ ಎಂದು ಕೋಳಾಲ ಗಂಗಾಧರ್ ಆಗ್ರಹಿಸಿದರು.
ಮಾಜಿ ಶಾಸಕರು ತಮ್ಮ ಅಸ್ಥಿತ್ವ ತೋರಿಸಿಕೊಳ್ಳಲು ಪ್ರತಿಭಟನೆ ಮಾಡಿದ್ದಲ್ಲ. ತಮ್ಮ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಲು ಮತ್ತು ಮುಂಬರುವ ದಿನಗಳಲ್ಲಿ ಹಾಲಿ ಶಾಸಕರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದಿದ್ದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಂದೇಶ ರವಾನಿಸಲು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಮುನಿಯೂರು ರಸ್ತೆ ನಿರ್ಮಾಣದ ಹಿಂದೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ಕೊಡುಗೆ ಇದೆ. 2017 ರಲ್ಲೇ ಕೃಷ್ಣಪ್ಪರು ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಅದು ನ್ಯಾಯಾಲಯಕ್ಕೆ ಹೋಗಿದ್ದರಿಂದ ಕಾಮಗಾರಿ ತಡವಾಯಿತು. ಈ ರಸ್ತೆ ನಿರ್ಮಾಣದಲ್ಲಿ ಹಾಲಿ ಶಾಸಕರ ಪಾತ್ರ ಏನೇನೂ ಇಲ್ಲ ಎಂದು ಕೋಳಾಲ ಗಂಗಾಧರ್ ಸ್ಪಷ್ಟಪಡಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜೈಗಿರಿ ಸುಂದರ್, ಕೊಂಡಜ್ಜಿ ಚೇತನ್, ಕೊಡಗೀಹಳ್ಳಿ ಪಾಲಣ್ಣ, ರಾಮೇಗೌಡ, ಚೇತನ್, ಅಕ್ಷಯ್, ಶಿವು ಇದ್ದರು.