ತುಮಕೂರು ಲೈವ್

ಮುಷ್ಕರಕ್ಕೆ ಬೆಂಬಲ; ತುಮಕೂರಿನಲ್ಲಿ ಕಾರ್ಮಿಕರ ಪ್ರತಿಭಟನೆ, ಬ್ಯಾಂಕ್ ಸ್ಥಬ್ದ

ತುಮಕೂರು: ದೇಶದ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಿಸಬೇಕು. ಇಂತಹ ನೀತಿಗಳಿಂದ ಕೆಲಸ ಕಳೆದುಕೊಳ್ಳುತ್ತಿರುವ ಕಾರ್ಮಿಕರ, ಉದ್ಯಮಗಳ ರಕ್ಷಣೆಗೆ ಕೇಂದ್ರ ಸರ್ಕಾರ ಬರಬೇಕು. ಉದ್ಯೋಗ ಸೃಷ್ಟಿಗೆ ಪೂರಕ ನೀತಿ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿನ್ನೆಲೆಯಲ್ಲಿ ತುಮಕೂರಿನ ಟೌನ್ ಹಾಲ್ ನಲ್ಲಿ ಸಮಾವೇಶಗೊಂಡು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ರೈತ-ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರ ಜನವಿರೋಧಿ ನೀತಿಗಳಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಏರಿಕೆ ನೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ ಮಾಡಬೇಕು. ರೈತರ ಆತ್ಮಹತ್ಯೆಗಳನ್ನು ತಡೆಯಬೇಕು. ರೈತರ ಸಾಲ ಮನ್ನಾ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಯೋಜನೆ ಬಲಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಜಾರಿಗೊಳಿಸಬೇಕು. ತುಮಕೂರು ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ರೂಪಿಸಬೇಕು, ಗುತ್ತಿಗೆ ಪದ್ದತಿ ನಿಯಂತ್ರಣ, ಖಾತ್ರಿ ಪಿಂಚಣಿ, ಕಾರ್ಮಿಕರ ವಿರೋಧಿ ನೀತಿಗಳನ್ನು ಕೈಬಿಡಬೇಕು. ಸಾರ್ವಜನಿಕ ಉದ್ದಿಮೆಗಳ ರಕ್ಷಣೆ, ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಮುಷ್ಕರಕ್ಕೆ ರೈತಪರ ಸಂಘಟನೆಗಳು ಸೇರಿದಂತೆ 200ಕ್ಕೂ ಹೆಚ್ಚು ಸಂಘಟನೆಗಳು ಗ್ರಾಮೀಣ ಭಾರತ್ ಬಂದ್ ನಡೆಸುತ್ತಿದ್ದು ಗ್ರಾಮಾಂತರ ಪ್ರದೇಶದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ.

ಮುಷ್ಕರದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಬಸ್ ಸಂಚಾರ ಎಂದಿಗಿಂತ ಕಡಿಮೆ ಇದೆ. ಮುಷ್ಕರದಲ್ಲಿ ಕೆಎಸ್ ಆರ್ ಟಿಸಿ ನೌಕರರು ಭಾಗವಹಿಸದಂತೆ ಸರ್ಕಾರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತಿದೆ. ದ್ವಿಚಕ್ರವಾಹನ, ಆಟೋ ಸಂಚಾರ ಎಂದಿನಂತೆಯೇ ಇದೆ. ಶಾಲಾ ಕಾಲೇಜುಗಳು ರಜೆ ಘೋಷಿಸಿಲ್ಲ. ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ಬಹುತೇಕ ಬ್ಯಾಂಕ್ ವಹಿವಾಟು ಸ್ಥಬ್ದವಾಗಿದೆ. ಬ್ಯಾಂಕುಗಳು ಅರ್ಧ ಬಾಗಿಲು ಮುಚ್ಚಿವೆ. ಗ್ರಾಹಕರು ಕಂಡುಬರುತ್ತಿಲ್ಲ.

ಪ್ರತಿಭಟನೆಯಲ್ಲಿ ಐಎನ್ ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯ, ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ 200ಕ್ಕೂ ಹೆಚ್ಚು ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ನೀಡಿವೆ.

ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ. ಜಾತ್ಯತೀತ ಜನತಾ ದಳ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದೆ.

Comment here