ಜಿ.ಎನ್.ಮೋಹನ್
ಬಾಗಿಲು ತೆಗೆದದ್ದೇ ತಡ ಇದ್ದ ಸಂಭ್ರಮವೆಲ್ಲ ಸಡನ್ನಾಗಿ ಜಾರಿ ಹೋಯಿತು.
ಅವಳು ಮಾತಿಲ್ಲದೇ ನಿಂತಳು. ಅವಳ ಕಣ್ಣುಗಳಲ್ಲಿ ‘ಷಾಕ್’ ಮನೆ ಮಾಡಿ ನಿಂತಿತ್ತು. ಅದು ಖಂಡಿತ ಕಣ್ಣೀರಲ್ಲ. ಅದಕ್ಕೂ ಮೀರಿದ್ದು.
ಕಣ್ಣೀರನ್ನು ಎದುರಿಸಿ ನಿಲ್ಲಬಹುದೇನೋ ಆದರೆ ಷಾಕ್ ಗಳನ್ನು ನೇರ ನೇರ ಕಣ್ಣಲ್ಲಿ ಕಣ್ಣಿಟ್ಟು ಎದುರಿಸಲು ಸಾಧ್ಯವೇ ಇಲ್ಲ ಎಂದು ನನಗೆ ಆ ಕ್ಷಣ ಅರಿವಾಗಿ ಹೋಯಿತು.
ಆದದ್ದು ಇಷ್ಟೇ: ಕಿವಿ ಚುಚ್ಚಿಸಿಕೊಂಡು, ಒಂದು ಚೆಂದದ ಕಿವಿ ಓಲೆ ಹಾಕಿಕೊಂಡು, ಹೊಸ ಜನರೇಷನ್ ಬಣ್ಣಗಳನ್ನು ಹೊದ್ದುಕೊಳ್ಳಬೇಕು ಎನ್ನುವುದು ನನ್ನ ಬಹುದಿನದ ಆಸೆ.
ಆದರೆ ಎರಡು ಜನರೇಷನ್ ನಡುವಿನ ಕೊಂಡಿಯಂತೆ ನಿಲ್ಲುವುದು ಅರಗಿಸಿಕೊಳ್ಳುವುದೇ ಕಷ್ಟವಾಗಿ ಹೋಗಿತ್ತು. ಅತ್ತ ಆ ಜನರೇಷನ್ ಗೂ ಸಲ್ಲದ ಇತ್ತ ಈ ಜನರೇಷನ್ ನವನೂ ಆಗದವನ ಎಡಬಿಡಂಗಿ ಕಥೆಗೆ ನಾನು ಸಾಕ್ಷಿಯಾಗಿ ಹೋಗಿದ್ದೆ.
ನಾನು ಕೆಲಸ ಮಾಡಿದ್ದು ಅದಮ್ಯ ಉತ್ಸಾಹಿಗಳ ಮಧ್ಯೆ. ಅದೇ ತಾನೆ ಜಗತ್ತಿಗೆ ಕಣ್ಣು ಬಿಡುತ್ತಿದ್ದ, ಸಾವಿರಾರು ಕನಸು ಹೊಂದಿದ್ದ ಉತ್ಸಾಹದ ಬುಗ್ಗೆಯಾಗಿದ್ದವರ ಮಧ್ಯೆ. ಇದೇ ಕಾರಣಕ್ಕೆ ಇರಬೇಕು ನಾನು ಅವರಿಗೆ ಕೊಟ್ಟಿದ್ದಕ್ಕಿಂತ ಹೆಚ್ಚು ಪಡೆದುಕೊಂಡುಬಿಟ್ಟಿದ್ದೆ. ನನ್ನ ಮನಸ್ಸು ಯಂಗ್ ಯಂಗ್ ಆಗಿ ಹೋಗಿತ್ತು.
ಹಾಗಾಗಿಯೇ ಮನಸ್ಸು ಎನ್ನುವುದು ದೇಹದಿಂದ ಬಿಡಿಸಿಕೊಂಡು ಫ್ರೆಶ್ ಆಗಿಯೇ ಉಳಿದಿತ್ತು. ಸಾಗರಕ್ಕೆ ಸಾವಿರಾರು ಬಂಡೆ ಉರುಳಿಸಿ ಸೇತುವೆ ಕಟ್ಟುವ ಹನುಮ ಉತ್ಸಾಹ ಈಗಲೂ ನನಗೆ ಇತ್ತು.
ಆದರೆ ಆ ಪುಟ್ಟ ಹುಡುಗಿ ಷಾಕ್ ಆಗಿ ಹೋಗಿದ್ದಳು. ಅವಳ ಒಂದು ನಂಬಿಕೆ ಕುಸಿದು ಹೋಗಿತ್ತು. ಅವಳ ಆಧರಿಸಿದ್ದ ನಂಬಿಕೆಯ ಆ ಆಲದ ಮರಕ್ಕೆ ಬೃಹತ್ ಕೊಡಲಿ ಪೆಟ್ಟು ಬಿದ್ದಿತ್ತು.
ಆ ಹುಡುಗಿ ಕಿವಿ ಚುಚ್ಚಿಸಿಕೊಳ್ಳುವುದು ಬೇಡ ಎಂದು ಹೇಳುತ್ತಾ ಬಂದಿದ್ದಳು. ಅವಳು ಬೇಡ ಎನ್ನುವುದು.. ಉಹುಂ ನಾನು ಮಾಡಿಯೇ ಸೈ ಎನ್ನುವುದು ನಡೆದುಕೊಂಡೇ ಬಂದಿತ್ತು.
ನಾನೇನೂ ಅವಳಿಗೆ ಅವಳ ಮಾತು ಕೇಳುತ್ತೇನೆ ಎಂಬ ಭರವಸೆಯನ್ನೇನೂ ಕೊಟ್ಟಿರಲಿಲ್ಲ. ಆದರೆ ಅವಳ ಒಳಗೆ ಮಾತ್ರ ಈತ ನನ್ನ ಒಂದು ಮಾತನ್ನು ತಳ್ಳಿಕೊಂಡು ಹೋಗಿಬಿಡಬಹುದು ಎಂಬ ಒಂದು ಸಣ್ಣ ಗುಮಾನಿಯೂ ಇರಲಿಲ್ಲ.
ಆದರೆ ಅದು ಆಗಿ ಹೋಯಿತು. ಅವಳು ಅಂದುಕೊಂಡಿದ್ದ ಒಂದು ವಿಶ್ವಾಸಕ್ಕೆ ಕೊಡಲಿ ಪೆಟ್ಟು. ಆ ಪುಟ್ಟ ಹೃದಯ ತಲ್ಲಣಿಸಿ ಹೋಗಿತ್ತು. ಕಣ್ಣು ‘ಷಾಕ್’ಗೆ ಮಾತು ಕೊಟ್ಟಿತ್ತು. ನಂಬಿಕೆ ಎಂಬುದು ಒಂದು ಸೇತುವೆ ಅಲ್ಲವೇ?
ಬದುಕು ಎಂಬುದು ವಿಶ್ವಾಸದ ಒಂದು ಮೊತ್ತ ಎಂದೇ ಅಂದುಕೊಂಡಿದ್ದ ಆ ಎಳೆಯ ಜೀವ ಮಾತುಗಳ ಬಟ್ಟಲನ್ನು ಖಾಲಿ ಮಾಡಿದಂತೆ ನಿಂತುಬಿಟ್ಟಿತ್ತು. ಮಾತುಗಳ ಆಗರವೇ ಆಗಿದ್ದ ಆ ಹುಡುಗಿ ಆ ಕ್ಷಣದಲ್ಲಿ ಮಾತು ಕಳೆದುಕೊಂಡುಬಿಟ್ಟಿದ್ದಳು. ಅವಳು ಅಂದುಕೊಂಡಿದ್ದ ಮಾತೊಂದು ಕುಸಿದುಹೋಗಿತ್ತು.
ಇಲ್ಲ ಅವ ನಾನು ಹೇಳದೆ ನನ್ನನ್ನು ಕೇಳದೆ ಎಂಬ ನಂಬಿಕೆಯೊಂದು ಅವಳ ಕಣ್ಣೆದುರಲ್ಲೇ ನುಚ್ಚುನೂರಾಗಿ ಹೋಗಿತ್ತು. ಆಕೆ ಮೌನದ ಪರದೆ ಹೊಕ್ಕುಬಿಟ್ಟಳು.
‘ಬಾಳಿಗೊಂದು ನಂಬಿಕೆ’ ಎಂಬ ಪುಸ್ತಕ ಬರೆದ ಆ ಅವರಿಗೆ ನನ್ನ ನಮಸ್ಕಾರ ಒಂದಿರಲಿ.
ಬಾಳಿಗೊಂದು ನಂಬಿಕೆ ಬೇಕೇನೋ? ಪುಟ್ಟ ಪುಟ್ಟ ನಂಬಿಕೆಗಳೆಂಬ ತೆಪ್ಪಗಳೇ ಎಂತಹ ಕಷ್ಟದ ಕಡಲನ್ನಾದರೂ ದಾಟಿಸಿಬಿಡುತ್ತವೆ. ಕಾಳಿಯಲ್ಲಿ, ಹರಿದ್ವಾರದಲ್ಲಿ, ನಮ್ಮ ಊರಿನಲ್ಲಿ, ಕಡಲು, ನದಿ, ಕೆರೆಯಲ್ಲಿ ಒಂದು ಪುಟ್ಟ ಕಾಗದದ ದೋಣಿಯಲ್ಲಿ ಆ ಬೆಳಕಿನ ಜ್ಯೋತಿಯನ್ನು ಹರಿಯ ಬಿಡುತ್ತಾರಲ್ಲ, ಅದು ಬಾಗುತ್ತ ಬಳುಕುತ್ತ ಇನ್ನೇನು ಮುಳುಗಿಯೇ ಬಿಟ್ಟೆ ಎನ್ನುತ್ತಾ ಆದರೂ ಬಚಾವಾಗುತ್ತಾ ಸಾಗುತ್ತಲೇ ಇರುವುದನ್ನು ನೋಡುವಾಗಲೆಲ್ಲ ಎಷ್ಟು ಅಚ್ಚರಿಗೊಳ್ಳುತ್ತೇನೆ.
ಆ ಹಣತೆಗೂ, ಆ ಗಾಳಿಗೂ, ಆ ನೀರಿಗೂ ಒಂದು ನಂಬಿಕೆಯ ಎಳೆ ಇರಬೇಕಲ್ಲವೇ?
‘ದೀಪವೂ ನಿನ್ನದೆ, ಗಾಳಿಯೂ ನಿನ್ನದೆ, ಆರದಿರಲಿ ಬೆಳಕು’ ಎನ್ನುವ ಹಾಡು ತೇಲಿ ಬಂದಾಗಲೆಲ್ಲ ನನ್ನೊಳಗೆ ಅದು ಒದ್ದು ಎದ್ದು ನಿಂತಾಗಲೆಲ್ಲಾ ಅನಿಸುತ್ತದೆ ಹೌದಲ್ಲ, ಬೆಳಗುವ ದೀಪ, ಆರಿಸುವ ಆ ಗಾಳಿ ಎರಡೂ ನನ್ನ ಕೈಯಲ್ಲೇ ಇದೆ. ದೀಪ ಬೇಕೋ ಇಲ್ಲ, ಆರಿಸಿದ ನಂತರದ ಆ ಕತ್ತಲ ಬದುಕು ಬೇಕೋ ಎಂದು ನಿರ್ಧಾರ ಮಾಡುವುದು ಮಾತ್ರ ನನ್ನ ಕೈಯಲ್ಲಿ.
ಈ ನಿರ್ಧಾರದ ಸೂತ್ರ ಒಂದು ಹೆಜ್ಜೆ ತಪ್ಪಿದರೆ ಸಾಕು ದೀಪಕ್ಕೆ ವಿದಾಯ. ಒಂದೊಂದು ನಂಬಿಕೆಯೂ ನನಗೆ ಈ ದೀಪದಂತೆಯೇ ಕಾಣುತ್ತದೆ. ಅದನ್ನು ಆರಿಸುವ ಗಾಳಿ ನನ್ನ ಬಳಿ ಇದೆ ಎಂಬುದು ಯಾಕೆ ಕಾಣುವುದಿಲ್ಲ?
ಆಕೆಗೂ ಅಷ್ಟೇ. ಎಷ್ಟು ಗಾಢ ನಂಬಿಕೆ ಇತ್ತು. ‘ಒಲಿದಮೇಲುಂಟೆ ನಾ ನೀ’ ಎಂಬ ನಂಬಿಕೆ. ಆದರೆ ರಾತ್ರೋ ರಾತ್ರಿ, ಬಹುಶಃ ಎದ್ದು ನಡೆದು ಹೋದ ಆ ನಳನಂತೆ, ಇದ್ದರೂ ತೊರೆದು ಹೋದ ಸಿದ್ದಾರ್ಥನಂತೆ ದಿಢೀರನೇ ಆ ನಾ ಈ ನೀ ಬೇರೆಬೇರೆಯೇ ಎಂಬುದು ಗೊತ್ತಾದಾಗ ಕುಸಿದ ಆ ನಂಬಿಕೆಗೆ ಜಗತ್ತಿನ ಯಾವ ಮೂಲೆಯಲ್ಲಿ ಮದ್ದು ಸಿಗಬಹುದು?
‘ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ’ ಎನ್ನುತ್ತಾರೆ. ಆತ ನೆಮ್ಮದಿಯ ಆ ನಿದ್ದೆಯ ನಡುವೆ ಒಂದು ನಂಬಿಕೆಯನ್ನು ಒದ್ದು ಎದ್ದು ಹೋದದ್ದು ಯಾಕೆ ಮುಖ್ಯವಾಯಿತು ಜಗತ್ತಿಗೆ?
‘ಸಂಬಂಜ ಅನ್ನೋದು ದೊಡ್ಡದು ಕನಾ….’ ಅನ್ನುವಾಗ ಸಂಬಂಜ ಮಾತ್ರವಲ್ಲ, ನಂಬಿಕೆ ಅನ್ನುವುದು ಸಹಾ ಅನ್ನುತ್ತದೆ ಮನಸ್ಸು. ನಂಬಿಕೆ ಎಂಬುದರ ತಳಪಾಯದ ಇಟ್ಟಿಗೆಗಳು ಒಂದೊಂದೆ ಕುಸಿಯುತ್ತಾ ಹೋದಂತೆ ನಾನು ಅನುಭವಿಸಿದ ಷಾಕ್ ನನ್ನೊಳಗೆ ಇನ್ನೂ ಇದೆ.
ಜಗತ್ತು ಎಷ್ಟೇ ಬದಲಾಗಿದೆ ಎಂದು ಅನ್ನಿಸಿದರೂ ಸಂಬಂಧಗಳು ಕೆಡಲಿಲ್ಲ ಎನ್ನುವ ದೊಡ್ಡ ನಂಬಿಕೆ ಹೊಂದಿದ್ದವನು ನಾನು.
ಈಗ ಬರುತ್ತೇನೆ ಎಂದು ಎಲ್ಲಿಗೋ ನಡೆದು ಹೋದವರು, ಮಗ್ಗುಲಲ್ಲಿಯೇ ಇದ್ದು ಇನ್ನೊಂದು ಮಜಲಿಗೆ ಏರಲು ಏಣಿ ಹಾಕಿದವರು, ಹುಷಾರಿಲ್ಲ ಎಂದು ಕಣ್ಣೀರಿಟ್ಟು ಎದುರು ಪಾಳಯಕ್ಕೆ ಹಾರಿಕೊಂಡವರು, ಎಲ್ಲರೂ ನಂಬಿಕೆ ಎಂಬುದರಲ್ಲಿ ನಂಬಿಕೆ ಬೇಡ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಒಂದು ಸಲ ಹೀಗಾಯಿತು. ಆತ ಕನಸುಗಣ್ಣಿನ ಹುಡುಗ. ಫ್ರೆಶ್ಯಾಗಿ ಕ್ಯಾಂಪಸ್ಸಿನಿಂದ ಆಚೆ ಕಾಲಿಟ್ಟದ್ದ. ನನಗೆ ಗೊತ್ತಿರುವ, ನಾನು ಗೌರವಿಸುವ, ನಾನು ನಂಬಿಕೆ ಇರಿಸಿದವರ ಕೈಯಡಿ ಅರಳಿದವ. ಹೀಗಾಗಿ ನನ್ನೊಳಗೂ ನಡೆದು ಬಂದ. ನನ್ನ ಜೊತೆ ಜೊತೆಯೇ ಹೆಜ್ಜೆ ಹಾಕಿದ.
ನನ್ನೊಳಗೊಂದು ಅದಮ್ಯ ನಂಬಿಕೆ ಕುಡಿಯೊಡೆದಿತ್ತು. ಇಲ್ಲ ಈತ ಎಲ್ಲರಂತಲ್ಲ, ನನ್ನೊಡನೆ ಮಾತನಾಡದೆ ಸಂಬಂಧ ಹರಿದುಕೊಂಡು ಹೋಗುವವನಲ್ಲ ಅಂತ.
ಆದರೆ ಆತ ಹಾಗೇ ಹೋಗಲಿಲ್ಲ. ನನಗೆ ಫೋನ್ ಮಾಡಿದ. ನೂರೆಂಟು ಮಾತಾಡಿದ. ಸೀದಾ ಎದುರು ಪಾಳಯಕ್ಕೆ ನಡೆದು ಹೋದ. ಆತ ಅಲ್ಲಿ ಮೊಬೈಲ್ ಗುಂಡಿ ಒತ್ತಿ ನಾನು ಮಾತಾಡಿದ್ದನ್ನೆಲ್ಲ ಅವರೆದುರು ಬಿಚ್ಚಿಟ್ಟು ಕೇಳಿಸುತ್ತಿದ್ದ. ಆತನ ಮೊಬೈಲ್ ನನಗೆ ಗೊತ್ತಿಲ್ಲದಂತೆಯೇ ನಾನು ಮಾತಾಡಿದ್ದನ್ನೆಲ್ಲ ರಿಕಾರ್ಡ್ ಮಾಡಿಕೊಂಡಿತ್ತು. ನಾನು ಟ್ರ್ಯಾಪ್ ಆಗಿ ಹೋಗಿದ್ದೆ. ನಂಬಿಕೆ ಎನ್ನುವುದು ತಲೆ ಎತ್ತಲಾಗದಂತೆ ಕುಸಿದು ಹೋಗಿತ್ತು.
ಆದರೆ ನನಗೆ ಇನ್ನೂ ನಂಬಿಕೆ ಇದೆ. ಏಕೆಂದರೆ ಆ ಅರ್ಭುತನ ಮುಂದೆ ಹೋಗಿ ಆ ಪುಣ್ಯಕೋಟಿ ನಿಂತಿತಲ್ಲ ಅಂತ.
ಅರ್ಭುತನಿಗೆಲ್ಲಿತ್ತು ಆ ನಂಬಿಕೆ. ತಿನ್ನಬೇಕು, ಕೊಲ್ಲಬೇಕು, ಹೀರಬೇಕು ಎಂದೇ ಹಾರಲು ಸಜ್ಜಾಗುತ್ತಿದ್ದಾಗ ‘ಒಂದು ನಿಮಿಷ ಮಗುವಿಗೆ ಹಾಲು ಊಡಿಸಿ ಬರುವೆ’ ಎಂದಾಗ ಆ ಅರ್ಭುತ ಎಂಬ ಹುಲಿರಾಯನಿಗೆ ಎಲ್ಲಿತ್ತು ನಂಬಿಕೆ.
ಆದರೆ ಆ ಪುಣ್ಯಕೋಟಿ ಬಂದೇ ಬಂತಲ್ಲಾ. ಹುಲಿರಾಯ ಬೆಟ್ಟದ ಮೇಲಿಂದ ಜಿಗಿದು ತನ್ನ ಪ್ರಾಣ ಬಿಟ್ಟನಲ್ಲಾ. ಈ ಕಥೆ ಇನ್ನೂ ಜನರ ನಾಲಿಗೆಯಲ್ಲಿದೆಯಲ್ಲಾ. ಆ ಕಾರಣಕ್ಕೇ ನನಗೆ ಇನ್ನೂ ನಂಬಿಕೆ, ನಂಬಿಕೆ ಎನ್ನುವುದರ ಮೇಲೆ.
‘ಯೂ ಟೂ ಬ್ರೂಟಸ್?’ ಎಂದು ಜೂಲಿಯಸ್ ಸೀಸರ್ ಉದ್ಗಾರ ತೆಗೆದಾಗ ತಾನು ಬದುಕಿನ ಯಾತ್ರೆ ಮುಗಿಸುತ್ತಿದ್ದೇನೆ ಎಂಬ ನೋವಿಗಿಂತ ತನ್ನ ಒಂದು ಮಹಾನ್ ನಂಬಿಕೆಯೊಂದು ಕುಸಿದು ಹೋಯಿತಲ್ಲ ಎಂಬುದು ಎಂತಹ ಷಾಕ್ ನೀಡಿರಬೇಕು.
ಇತ್ತೀಚೆಗೆ ಏಷ್ಯಾನೆಟ್ ನಲ್ಲಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ಜೇಬು ಇರುವವರೆಗೂ ಜೇಬುಗಳ್ಳರು ಇರುತ್ತಾರೆ ಅನ್ನುವುದನ್ನು ತಮಾಷೆಯಾಗಿ ಹೇಳುತ್ತಿದ್ದರು.
ನನಗೆ ಆಗ ಅನಿಸಿತು ‘ನಂಬಿಕೆ ಎನ್ನುವುದು ಇರುವವರೆಗೂ ಬ್ರೂಟಸ್ ಗಳೂ ಇರುತ್ತಾರೆ’ ಅಂತ.