ಜಿ ಎನ್ ಮೋಹನ್
ಯೋಗರಾಜ್ ಭಟ್ ತಕ್ಷಣ ನನ್ನ ಮುಖ ನೋಡಿದರು.
ಅದರಲ್ಲಿ ಆಶ್ಚರ್ಯ ಕುಣಿಯುತ್ತಿತ್ತು
ನಾನು ಇಷ್ಟೇ ಬಾಯಿ ಬಿಟ್ಟಿದ್ದೆ.
‘ತಿಳುವಳ್ಳಿಯಲ್ಲಿದ್ರಲ್ಲಾ., ಅಲ್ಲಿಂದಲೇ ತಿಳುವಳಿಕೆ ಬಂತಾ’ ಅಂತ
ಸಾವರಿಸಿಕೊಂಡವರೇ, ‘ಥ್ಯಾಂಕ್ಸ್ ನನಗೆ ತಿಳುವಳಿಕೆ ಇದೆ ಅಂತ ಅದ್ಕೊಂಡವರು ನೀವೊಬ್ರೆ’ ಅಂದರು.
‘ಇವನಿಗೆ ತಿಳುವಳಿಕೇನೇ ಇಲ್ಲ ಅಂತಲೇ ಎಲ್ಲರೂ ನನ್ನನ್ನ ಬ್ರಾಂಡ್ ಮಾಡಿಬಿಟ್ಟಿದ್ರು. ಸ್ಕೂಲ್ ಗೆ ಸೇರಿಸಿದ ಮೊದಲ ದಿನಾನೇ ಎಲ್ಲರೂ ಪ್ರೇಯರ್ ಹೇಳ್ತಿರೋವಾಗ ನಾನು ಮೇಲೆ ವಿಮಾನ ಹೋಗಿದ್ದು ನೋಡಿ ಹೋಯ್ ಅಂತ ಕಿರುಚಿದ್ದೆ. ಎಲ್ಲರೂ ಪ್ರೇಯರ್ ಬಿಟ್ಟು ನನ್ನನ್ನ ನೋಡ್ತಾ ನಿಂತುಕೊಂಡ್ರು. ಅಲ್ಲಿಂದಲೇ ಈ ಪಟ್ಟ ಶುರುವಾಯ್ತು’ ಅಂದರು.
‘ಈಟಿವಿ’ಯ ಸುದ್ದಿ ವಿಭಾಗದ ಮುಖ್ಯಸ್ಥನಾಗಿ ಹೈದ್ರಾಬಾದ್ ನ ರಾಮೋಜಿ ಫಿಲಂ ಸಿಟಿ ಯಲ್ಲಿ ಕುಳಿತಿದ್ದ ನನಗೆ ಕನ್ನಡವೇ ಕೈಗೆ ಸಿಗದ ವಸ್ತುವಾಗಿ ಹೋಗಿತ್ತು. ಕನ್ನಡ ಮಾತನಾಡುವವರು ಸಿಕ್ಕರೆ ಸಾಕಪ್ಪಾ ಎಂಟು ಹಪಾಹಪಿಸುತ್ತಿರುವಾಗಲೇ ಭಟ್ಟರ ‘ಗಾಳಿಪಟ’ ಅಲ್ಲಿಗೂ ಹಾರುತ್ತಾ ಬಂತು. ನಾನು ಸೀದಾ ರಾಮೋಜಿರಾಯರ ಬಳಿ ಹೋಗಿ ನಾನು ‘ಗಾಳಿಪಟ’ ನೋಡಬೇಕು ಅಂದೆ. ವಿವರಿಸಿ ಹೇಳಿ ಅವರ ಮುಖದ ಮೇಲೆ ಮೂಡಿದ ಸುಕ್ಕುಗಳನ್ನೆಲ್ಲಾ ಕಡಿಮೆ ಮಾಡಿದೆ.
ನನ್ನ ಡಿಮ್ಯಾಂಡ್ ಇದ್ದದ್ದು ಆಷ್ಟೇ ಫಿಲಂ ಸಿಟಿಯ ಬಸ್ ಕೊಡಿ ಇಲ್ಲಿರೋ ಕನ್ನಡದವರನ್ನೆಲ್ಲ ತುಂಬಿಕೊಂಡು ಸಿನೆಮಾಗೆ ಕರಕೊಂಡು ಹೋಗ್ತೀನಿ ಅಂತ. ಯಸ್ ಅಂದರು. ನಮ್ಮ ಫಿಲಂ ಸಿಟಿಯಲ್ಲಿದ್ದ ಅಷ್ಟೂ ಪಡ್ಡೆಗಳನ್ನು ಕಟ್ಟಿಕೊಂಡು ಮಲ್ಟಿಪ್ಲೆಕ್ಸ್ ಹುಡುಕುತ್ತಾ ಹೋಗಿದ್ದೆ.
ಈ ನೆನಪು ಇನ್ನೂ ಹಸಿರಾಗಿತ್ತು. ಅಷ್ಟೇ ಅಲ್ಲ ಅದು ಮರೆತು ಹೋಗುವ ಅನುಭವವೂ ಅಲ್ಲ.
‘ಮುಂಗಾರು ಮಳೆ’, ‘ಗಾಳಿಪಟ’ವನ್ನು ಕನ್ನಡದವರು ಮಾತ್ರವೇ ಅಲ್ಲದೆ ಎಲ್ಲಾ ಭಾಷಿಕರು ದಂಡು ಕಟ್ಟಿಕೊಂಡು ಎಲ್ಲೆಡೆ ನನ್ನಂತೆಯೇ ನೋಡಿದ್ದರು. ಇದು ಅಚ್ಚರಿಗೆ ಕಾರಣವಾಗಿತ್ತು. ಅಷ್ಟೇ ಅಲ್ಲ ಕನ್ನಡ ಸಿನೆಮಾಕ್ಕೆ ಹೊಸ ಬ್ರಾಂಡ್ ಅಂಬಾಸಡರ್ ಉದಯವಾಗಿತ್ತು.
ಇದೆಲ್ಲಾ ತಲೆಯಲ್ಲಿಟ್ಟುಕೊಂಡು ಯೋಗರಾಜ ಭಟ್ಟರ ಅಂತರಾಳಕ್ಕೆ ಇಳಿದುಬಿಡಬೇಕು ಎಂದು ಹಾಕಿದ ಮೊದಲ ಪ್ರಶ್ನೆಗೇ ಅವರು ಪಕ ಪಕ ನಕ್ಕುಬಿಟ್ಟಿದ್ದರು. ಇವನು ನನ್ನ ಸೀರಿಯಸ್ಸಾಗಿ ತೆಗೆದುಕೊಂಡುಬಿಟ್ಟಿದ್ದಾನೆ ಅಂತ
ಅದಕ್ಕೆ ಕಾರಣವೂ ಇತ್ತು. ಇವರು ಮಾತಾಡೋದು ಅರ್ಥವೇ ಆಗಲ್ಲ ಎನ್ನುವುದರಿಂದ ಹಿಡಿದು ‘ಹುಚ್ಚು ಭಟ್ರು’ ಅನ್ನೋ ಬೆಂಗಳೂರಿಗರ ಹಣೆಪಟ್ಟಿಯೂ ಸೇರಿ ಊರಲ್ಲಿ ಮರಕ್ಕೆ ಕಟ್ಟಿ ಹಾಕಿ ಒದೆಯುವವರೆಗೆ ಇವರ ಚರಿತ್ರೆ ಘನವಾದದ್ದನ್ನು ಸಾರಿತ್ತು.
ಭಟ್ರೇ ಅದೇನದು ಮರಕ್ಕೆ ಕಟ್ಟಿಹಾಕಿದ್ದು ಅಂದೆ.
‘ಅಯ್ಯೋ ಅದೇನು ಕೇಳ್ತೀರಿ. ನಾನು ಮನುಷ್ಯನೇ ಅಲ್ಲ ಅನ್ನೋ ತೀರ್ಮಾನಕ್ಕೆ ಎಲ್ಲಾ ಬಂದುಬಿಟ್ಟರು. ಟೀಚರ್ ಶಾಲೆಯಿಂದ ನನ್ನನ್ನ ಎಳಕೊಂಡು ಬಂದು ಇವನನ್ನ ಸಂಭಾಳಿಸೋಕೆ ಆಗಲ್ಲ ಇವನನ್ನ ಶಾಲೆಗೆ ಕಳಿಸಬೇಡಿ ಅಂತ ಬಿಕ್ಕಿ ಬಿಕ್ಕಿ ಅತ್ತರು. ಅವರು ನಿಲ್ಲಿಸಿದ ಮೇಲೆ ಅಮ್ಮನ ಜೋರು ಅಳು ಶುರುವಾಯ್ತು.
ಟೀಚರ್ ಗಾಬರಿಯೆದ್ದು ಯಾಕೆ ಅಂದ್ರು. ಆಗ ಅಮ್ಮ ‘ಮನೇನಲ್ಲೂ ಇವನನ್ನ ಸಂಭಾಳಿಸೋಕೆ ಅಗಲ್ಲಮ್ಮ ಅದಕ್ಕೇ ಸ್ಕೂಲ್ ಗೆ ಹಾಕಿದ್ದೇವೆ’ ಅಂತ ಅಳ್ತಿದ್ದರು. ನನ್ನದು ಅಂತ ರೆಕಾರ್ಡ್ ಅಂತ ಹೆಮ್ಮೆಯಿಂದ ನನ್ನತ್ತ ನೋಡಿದರು.
ಅಪ್ಪನ ಊರು ಮಂದರ್ತಿ, ಅಮ್ಮನ ಊರು ಉಡುಪಿ ಬಳಿ ಪೆರಂಪಳ್ಳಿ.
ಆದರೂ ಯೋಗರಾಜ ಭಟ್ಟರಿಗೆ ನಾನು ಹಾನಗಲ್ ನ ತಿಳುವಳ್ಳಿಯವನು ಅಂತ ಹೇಳಿಕೊಳ್ಳೋದಕ್ಕೆ ಇನ್ನಿಲ್ಲದ ಅಭಿಮಾನ.
‘ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಕನ್ನಡ ನೆಟ್ಟಗೆ ಮಾತನಾಡಲು ನಾಲಿಗೆ ತಿದ್ದಿಕೊಂಡದ್ದು, ಎಲ್ಲಾ ಹುಚ್ಚಾಟ ಮಾಡಿದ್ದು ತಿಳುವಳ್ಳಿಯಲ್ಲಿ. ಅಲ್ಲಿ ನಮ್ಮಪ್ಪ ಹೋಟೆಲ್ ನಡೆಸ್ತಿದ್ದರು. ಒಂದು ವಿಶ್ವವಿದ್ಯಾಲಯ ಕಲಿಸುವ ಎಲ್ಲವನ್ನೂ ನಾನು ಆ ಹೋಟೆಲ್ ನಲ್ಲಿಯೇ ಕಲಿತೆ’ ಎಂದರು.
ತಕ್ಷಣ ನೆನಪಿಗೆ ಬಂದದ್ದು ಭಟ್ಟರೇ ಡಿಸೈನ್ ಮಾಡಿದ ಪ್ಯಾಂಟು.
ಹೋಟೆಲ್ ನಲ್ಲಿ ಸಪ್ಲೈ ಮಾಡೋವಾಗ ಅಡುಗೆ ಮಾಡೋವಾಗ ಮೈ ಮೇಲೆ ಸಿಕ್ಕಿದ್ದೆಲ್ಲಾ ಚೆಲ್ಲಿ ಅದನ್ನ ಒಗೆಯಲು ಎಲ್ಲರೂ ಗೊಣಗಾಡ್ತಿದ್ರಂತೆ. ಆಗ ಭಟ್ರು ಈ ಸಹವಾಸಾನೇ ಬೇಡ ಅಂತ ಶಾಮಿಯಾನಾವನ್ನೇ ಹರಿದು ಅದರಲ್ಲಿ ಪ್ಯಾಂಟ್ ಹೊಲಿದು ಹಾಕ್ಕೊಂಡಿದ್ರು.
ಅಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಊರಲ್ಲಿ ಜಾತ್ರೆ ಆದಾಗ ಜ್ಯೂಸು ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಮೇಲಿಂದ ಮೇಲೆ ಮಾಡಬೇಕಲ್ಲ ಅಂತ ಭಟ್ರು ಒಂದು ಪ್ಲಾನ್ ಮಾಡಿದ್ರು. ನೀರಿನ ಟ್ಯಾಂಕ್ ಗೇ ರಸ್ನಾ ಪೌಡರ್, ಸಕ್ಕರೆ ಹಾಕಿ ನಲ್ಲಿ ಆನ್ ಮಾಡಿದ್ರೆ ಜ್ಯೂಸು ಬರೋ ಹಾಗೆ ಮಾಡಿದ್ರು.
‘ಅದು ಸರಿ, ಮರಕ್ಕೆ ನಿಮ್ಮನ್ನ ಕಟ್ಟಿ ಹಾಕಿದ್ದು ಯಾಕೆ?’ ಅಂತ ವಿಕ್ರಮನನ್ನ ಬೆನ್ನು ಹತ್ತಿದ ಬೇತಾಳದಂತೆ ನಾನು ಭಟ್ಟರನ್ನು ಎಳೆದುಕೊಂಡು ಟ್ರ್ಯಾಕ್ ಗೆ ತಂದೆ.
‘ಅಯ್ಯೋ ಅದೇನು ಕೇಳ್ತೀರಿ, ಭಾನುವಾರ ಬೆಳಗ್ಗೆ ಆಗ್ತಿದಂಗೆ ಅಪ್ಪ ನನ್ನನ್ನ ಮನೆಯ ಅಂಗಳದಲ್ಲಿದ್ದ ಮರಕ್ಕೆ ಕಟ್ಟಿ ಹಾಕಿ ನಾಲ್ಕು ಬಿಡ್ತಾ ಇದ್ರೂ. ಆಮೇಲೆ ಊರಿನಲ್ಲಿ ಎಲ್ಲರಿಗೂ ಅವನನ್ನ ಮರಕ್ಕೆ ಕಟ್ಟಿ ಹಾಕಿದೀನಿ ಹೋಗಿ ಒದೀರಿ ಅಂತ ಬೇರೆ ಹೇಳಿಕೊಂಡು ಬರ್ತಿದ್ರು.
ಊರಿನವರು ಇಲ್ಲ ಅವನು ಇವತ್ತು ಏನೂ ಮಾಡಿಲ್ಲವಲ್ಲ ಅಂದ್ರೆ ಇವತ್ತು ಮಾಡಿಲ್ಲ ಆದ್ರೆ ನಾಳೆ ಮಾಡೋನೇ ಅದ್ರಿಂದ ಇವತ್ತೇ ಒದೀರಿ ಅಂತ ಕುಮ್ಮಕ್ಕು ಕೊಡ್ತಾ ಇದ್ರೂ’ ಅಂತ ಗಹಗಹಿಸಿ ನಕ್ಕರು. ನಾನೂ ಸುಮಾರು ಹೊತ್ತು ಕಂಪನಿ ಕೊಟ್ಟೆ.
‘ಮುಂಗಾರು ಮಳೆ’ಯ16 ಪ್ರಿಂಟ್ ರೆಡಿ ಮಾಡಿಕೊಂಡು ಕುಳಿತಿದ್ದ ಭಟ್ಟರಿಗೆ ಆರ್ಡರ್ ಬಂದಿದ್ದು ಬರೋಬ್ಬರಿ136 ಪ್ರಿಂಟ್ ಗೆ.
ಯೋಗರಾಜ ಭಟ್ಟರಿಗೆ ಸಿನೆಮಾ ಅನ್ನೋದು ಅವರ 10 ರ ಜೊತೆಗಿನ ಹನ್ನೊಂದನೆಯ ಜರ್ನಿ ಅಷ್ಟೇ.. ಎಂ ಎ ಓದಬೇಕು ಅಂತ ಮೈಸೂರಿಗೆ ಹೋದರು, ಎಲ್ ಎಲ್ ಬಿ ಮಾಡೋದಕ್ಕೆ ಸೇರಿಕೊಂಡರು, ಮೈಸೂರಿನಲ್ಲಿದ್ದಾಗ ಫ್ರೆಂಡ್ ನ ಸಹವಾಸದಲ್ಲಿ ಸುಮಾರು ಸಿನೆಮಾ ನೋಡಿದ್ರು ಕಥೆ, ಕವಿತೆ ಬರೆದ್ರು. ಕಥೆ ಓದಿದೋರು ನೀನು ಡೈರೆಕ್ಟರ್ ಆಗಿಬಿಡು ಅಂದ್ರು. ‘ವೈ ನಾಟ್’ ಅಂತ ಭಟ್ರು ಅದೂ ಆದರು ಅನ್ನೋದು ಇವರ ಸಿನೆಮಾ ಜರ್ನಿಯ ಸಿಂಗಲ್ ಲೈನ್ ಸ್ಟೋರಿ.
‘ಸಿನೆಮಾಗೆ ಸಹಾಯಕ ನಿರ್ದೇಶಕ ಆಗಿ ಎಂಟ್ರಿ ಕೊಟ್ಟ ಮೇಲೂ ಫೀಡಿಂಗ್ ಬಾಟಲ್, ಸೊಳ್ಳೆ ಬ್ಯಾಟ್ ಮಾರ್ತಿದ್ದೆ’ ಅಂತ ನನ್ನತ್ತ ತಿರುಗಿ ಸಿನೆಮಾ ಫೀಲ್ಡ್ ಗೆ ಕನ್ನಡಿ ಹಿಡಿದರು.
‘ಎಷ್ಟೆಲ್ಲಾ ಕಥೆ ಇದೆ ನಿಮ್ಮ ಲೈಫ್ ನಲ್ಲಿ’ ಅಂದೆ. ಮತ್ತೆ ಭಟ್ರು ನನ್ನನ್ನು ಅಪರೂಪದ ಪ್ರಾಣಿ ಎನ್ನುವಂತೆ ನೋಡುತ್ತಾ ‘ನೀವು ಮಾತ್ರ ಹಾಗಂದಿದ್ದು. ಆದ್ರೆ ಜನ ಇವನ ಸಿನೆಮಾದಲ್ಲಿ ಕಥೇನೇ ಇರಲ್ಲ ಅಂತ ಗೊಣಗ್ತಾರೆ’ ಅಂದರು. ಮುಖದಲ್ಲಿ ಮಂದಹಾಸವಿತ್ತು.
‘ಉಪ್ಪು ಹುಳಿ ಸರಿಯಾಗಿದ್ರೆ ಏನು ಬೇಕಾದರೂ ತಿನ್ನಬಹುದು. ಸಿನೆಮಾ ಸಹಾ ಅಷ್ಟೇ. ಉಪ್ಪು ಹುಳಿ ಸರಿ ಇದ್ರೆ ಕ್ಲಿಕ್ ಆಗೇ ಆಗುತ್ತೆ. ಕೆಲವು ಅಡುಗೆಗೆ ಉಪ್ಪು ಹಿಡಿಯಲ್ಲ, ಇನ್ನು ಕೆಲವಕ್ಕೆ ಖಾರ. ಹಾಗಾಗಿ ಅದನ್ನ ಗುರುತಿಸಿ ಸರಿಯಾಗಿ ಅಡುಗೆ ಮಾಡೋದಿದೆಯಲ್ಲ ಅದೇ ಸಕ್ಸಸ್ ಸೂತ್ರ’ ಅಂದರು.
ಇವರು ಸಿನೆಮಾಗಳು, ಅಡುಗೆಗಳು, ಪಾಕಗಳು… ಅಂತೆಲ್ಲ ಮಾತನಾಡುತ್ತಿದ್ದಾಗ ನನ್ನ ತಲೆಯಲ್ಲಿ ಗಿರ್ ಅಂತ ಸುತ್ತುತ್ತಾ ಇದ್ದದ್ದು ಎರಡು ಅಡುಗೆ ಮನೆಯ ವಿಷಯಗಳು. ಒಂದು ತೆಂಗಿನಕಾಯಿ ಇನ್ನೊಂದು ಇಡ್ಲಿ.
ನಾನು ಆ ಎರಡರ ಬಗ್ಗೆ ಹೇಳಿದ್ದೇ ತಡ ಯೋಗರಾಜ್ ಭಟ್ರಿಗೆ ನೆನಪಿನ ಯಾನಕ್ಕೆ ಒಂದು ದೋಣಿ ರೆಡಿ ಮಾಡಿಕೊಟ್ಟಂತಾಯ್ತು.
ಹೌದು ನಾನು ನನ್ನ ಹೆಂಡತಿಗೆ ಇಟ್ಟಿದ್ದ ಅಡ್ಡ ಹೆಸರೇ ‘ತೆಂಗಿನಕಾಯಿ’ ಅಂತ.
ನನಗೆ ಇಡ್ಲಿ ಸಖತ್ ಇಷ್ಟ ಇತ್ತು.
ಒಂದು ಸಲಕ್ಕೆ 12 ಇಡ್ಲಿ, ಚಟ್ನಿ, ಮೊಸರು ಎಲ್ಲಾ ಒಂದೇ ಸಲಕ್ಕೆ ಕಲಸಿ ಆಹಾ ಪರಮ ಸುಖ ಅನುಭವಿಸುತ್ತಿದ್ದೆ ಅಂತ ತಮ್ಮ ಲೋಕದಲ್ಲಿ ಲೀನವಾದರು.
ಮತ್ತೆ ಭಟ್ಟರನ್ಯಾಕೆ ಇವತ್ತಿನ ಸಿನೆಮಾಗಳು, ಜಯಂತ ಕಾಯ್ಕಿಣಿ ಹಾಡುಗಳು, ಗಾಳಿಪಟಗಳು, ಪಂಚರಂಗಿಗಳು, ವಾಸ್ತು ಪ್ರಕಾರಗಳು, ನಿಮ್ಮ ಕಥೆಗಳು, ಕವನಗಳು ಅಂತೆಲ್ಲಾ ವಾಸ್ತವಕ್ಕೆ ಎಳೆದುಕೊಂಡು ಬರಬೇಕು ಅಂತ ಅವರನ್ನ ಅವರ ಇಡ್ಲಿ ಲೋಕದಲ್ಲಿಯೇ ಕೈಬಿಟ್ಟೆ.