ತುಮಕೂರ್ ಲೈವ್

ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ರಾಷ್ಟ್ರಪತಿಗಳು ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾಧರಣಿ ನಡೆಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಶಾಸಕ ರಫೀಕ್ ಅಹಮದ್ ಮಾತನಾಡಿ, ಇತ್ತೀಚೆಗೆ ಬಿಡುಗಡೆಯಾಗಿರುವ ಆಡಿಯೋದಲ್ಲಿರುವ ಧ್ವನಿ ತನ್ನದೇ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹಾಗಾಗಿ ಕೂಡಲೇ ರಾಷ್ಟ್ರಪತಿಗಳು ಯಡಿಯೂರಪ್ಪ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಪಿತೂರಿ ನಡೆಸಿರುವುದು ಆಡಿಯೋ ಬಹಿರಂಗದಿಂದ ಬಯಲಾಗಿದೆ. ಯಡಿಯೂರಪ್ಪ ಹೇಳಿರುವಂತೆ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲೇ ಶಾಸಕರ ರಾಜಿನಾಮೆ ಕೊಡಿಸಿ ಮುಂಬೈನಲ್ಲಿ ಇಳಿದುಕೊಳ್ಳಲು ಕಾರಣ ಎಂದು ಹೇಳಿದ್ದಾರೆ. ಇದು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವುದಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಷಫಿ ಅಹಮದ್, ಮಾಜಿ ಶಾಸಕ ಆರ್. ನಾರಾಯಣ, ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮುಖಂಡರಾದ ನಿರಂಜನ್, ತುಮಕೂರು ನಗರ ಪಾಲಿಕೆಯ ಉಪಮೇಯರ್ ಇತರರು ಉಪಸ್ಥಿತರಿದ್ದರು.

Comment here