ಜಿ ಎನ್ ಮೋಹನ್
ಅದು ಸರಿ 10:10 ಯಾಕೆ ಅಂತ ಕೇಳಿದೆ
ಅವನು ಅವಾಕ್ಕಾಗಿ ಹೋದ
ಆ ಪ್ರಶ್ನೆ ಖಂಡಿತಾ ಅವನು ನಿರೀಕ್ಷಿಸಿರಲಿಲ್ಲ
ಬರುವ ಪ್ರಶ್ನೆ ಏನಿರಬಹುದು ಎಂದು ಆತ ಮೊದಲೇ ಲೆಕ್ಕ ಮಾಡಿ ಇಟ್ಟುಕೊಂಡಿದ್ದ
ಹಾಗಾಗಿ ಉತ್ತರಗಳೂ
ಆದರೆ ಇದು ಅವನಿಗೆ ಖಂಡಿತಾ ಅನಿರೀಕ್ಷಿತ
ಹಾಗಾಗಿ ತಬ್ಬಿಬ್ಬಾಗಿ ನನ್ನ ಮುಖ ನೋಡಿದ
ಏನೋ ಒಂದು ಉತ್ತರ ಕೊಟ್ಟು ಪಾರಾಗುವ ಪ್ರಶ್ನೆಯೂ ಅದಾಗಿರಲಿಲ್ಲ
ಹಾಗಾಗಿ ‘ಒಂದು ನಿಮಿಷ ತಾಳಿ’ ಎಂದವನೇ ಎಲ್ಲೆಲ್ಲಿಗೋ ನಂಬರ್ ತಿರುಗಿಸತೊಡಗಿದ
ಅದು ಒಂದು ಪತ್ರಿಕಾ ಗೋಷ್ಠಿ
ಟೈಟಾನ್ ವಾಚ್ ಕಂಪನಿ ‘ರಂಗೋಲಿ’ ಅನ್ನುವ ತನ್ನ ಹೊಸ ಸೀರೀಸ್ ಬಿಡುಗಡೆ ಮಾಡಲು ಸಜ್ಜಾಗಿತ್ತು
ಅದಕ್ಕಾಗಿ ಆ ಕಂಪನಿ ಕರೆದಿದ್ದ ಗೋಷ್ಠಿ ಅದು
ನಾನು ‘ರಂಗೋಲಿ’ ಅನ್ನೋ ಹೆಸರು ಏಕೆ ಇಟ್ಟಿರಿ,
ಯಾಕೆ ಅಷ್ಟೊಂದು ರೇಟು
ಯಾವಾಗ ಮಾರ್ಕೆಟ್ ಗೆ ಬಿಡ್ತೀರಿ
ರಿಪೇರಿಗೆ ಬಂದರೆ ಎಲ್ಲಿ ಹೋಗ್ಬೇಕು ಅನ್ನೋ ಪ್ರಶ್ನೆ ಕೇಳಲಿಲ್ಲ
ನಾನು ಕೇಳಿದ್ದು-
ಯಾಕೆ ಎಲ್ಲಾ ವಾಚ್ ನಲ್ಲೂ ಮುಳ್ಳುಗಳು 10:10 ಮಾತ್ರ ತೋರಿಸುತ್ತೆ
ನೀವು ಅಂಗಡೀನಲ್ಲಿ ಇಡೋ ಡಿಸ್ಪ್ಲೇ ಪೀಸ್ ನಲ್ಲಿ
ಕೊಡೋ ಜಾಹೀರಾತಲ್ಲಿ
ಈಗ ನಮ್ಮೆದುರು ನೀವು ಇಟ್ಟಿರೋ ಸೆಟ್ ನಲ್ಲಿ ಕೂಡಾ.. ಅಂದೆ
ಬಹುಷಃ ಆತನೂ ಆಗ ಅದನ್ನು ಮನವರಿಕೆ ಮಾಡಿಕೊಂಡನೋ ಏನೋ
ಉತ್ತರ ಹುಡುಕಲಾರಂಭಿಸಿದ
ಅದಕ್ಕೂ ಸಾಕಷ್ಟು ಮುಂಚೆ ಹೀಗೆ ಒಂದು ಪ್ರಶ್ನೆ ಕೇಳಿದ್ದೆ
ವಾಚ್ ಅಂಗಡಿಯವರಿಗಲ್ಲ
‘ವಾಚ್ ಡಾಗ್’ ಅನಿಸಿಕೊಂಡಿದ್ದ ದೂರದರ್ಶನದ ಮುಂದೆ
ಯಾವುದೋ ಕಾರಣಕ್ಕಾಗಿ ದೂರದರ್ಶನದ ನಿರ್ದೇಶಕರು ದೆಹಲಿಯಿಂದ ಇಲ್ಲಿಗೆ ಬಂದಿದ್ದರು
ಅದು ಇನ್ನೂ ಖಾಸಗಿ ಚಾನಲ್ ಗಳನ್ನು ಕಾಣದ ಕಾಲ
ದೂರದರ್ಶನ ಒಂದೇ ಮನರಂಜನೆಗೆ ಕಿಟಕಿ
ಆದರೆ ಎಲ್ಲಾ ಧಾರಾವಾಹಿಗಳು 13 ವಾರಕ್ಕೆ ಮುಗಿದು ಹೋಗುತ್ತಿದ್ದವು
ನನಗೆ ಅದೇ ಕುತೂಹಲ- ಸಾವಿರಲಿ ನೋವಿರಲಿ, ನಲಿವಿರಲಿ ಒಲವಿರಲಿ
ಅದು ಹೇಗಪ್ಪಾ ಸರಿಯಾಗಿ 13 ವಾರವನ್ನೇ ಆಯ್ಕೊಂಡು ಅಡ್ಜಸ್ಟ್ ಆಗಿಬಿಡುತ್ತೆ ಅಂತ
ಹಾಗಾಗಿ ದೆಹಲಿಯಿಂದ ನಿರ್ದೇಶಕರು ಬಂದು ಪತ್ರಿಕಾ ಗೋಷ್ಟಿ ಮುಗಿಸಿದಾಗ ಈ ಪ್ರಶ್ನೆ ಹಾಕಿಬಿಟ್ಟಿದ್ದೆ
ಅವರೋ ದೂರದರ್ಶನದ ಒಳಗಿನ ನೂರೆಂಟು ಕಷ್ಟ ಕೋಟಲೆ ಬಗ್ಗೆ
ಸರ್ಕಾರಿ ಪರ ನಿಲುವಿನ ಬಗ್ಗೆ,
ಇಲ್ಲಾ ಪ್ರಸಾರ ಭಾರತಿ ಬಗ್ಗೆ ಪ್ರಶ್ನೆ ಬರುತ್ತೇನೋ ಅಂದುಕೊಂಡಿದ್ದರು
ನಾನು ಯಾಕೆ ನಿಮ್ಮ ಎಲ್ಲಾ ಧಾರಾವಾಹಿಗಳೂ 13 ಎಪಿಸೋಡ್ ನಲ್ಲಿ ಮುಗಿದು ಹೋಗಿಬಿಡುತ್ತೆ ಅಂತ ಕೇಳಿದ್ದೆ
ಥೇಟ್ ವಾಚ್ ಕಂಪನಿಯವನ ಥರವೇ ನಿರ್ದೇಶಕರೂ ಮುಖ ಮಾಡಿದ್ದರು
ವಾಚ್ ಕಂಪೆನಿಯವನು ಅಲ್ಲಿ ಇಲ್ಲಿ ಫೋನ್ ತಿರುಗಿಸಿ ಆದ ಮೇಲೆ ಹೇಳಿದ
ನೋಡಿ ವಾಚ್ ನಲ್ಲಿ 10 10 ಸಮಯ ಇದ್ರೆ ಬೊಂಬಾಟ್ ಆಗಿರುತ್ತೆ
ಏಕೆ ಅಂದ್ರೆ ಮುಳ್ಳುಗಳೆರಡೂ 10 10 ರಲ್ಲಿದ್ದಾಗ ಮಾತ್ರ ನಮ್ಮ ಕಂಪನಿ ಲೋಗೋ ಚೆನ್ನಾಗಿ ಕಾಣುತ್ತೆ
ಡೇಟು ಸರಿಯಾಗಿ ಕಾಣಿಸುತ್ತೆ
ನನಗೋ ಪ್ರಶ್ನೆಗಳು ಮುಗಿದಿರಲಿಲ್ಲ
ಸರಿ 8 20 ಕ್ಕೆ ಸೆಟ್ ಮಾಡಿದ್ರೂ ಹಾಗೇ ಇರುತ್ತಲ್ಲ
ನಿಮ್ಮ ಲೋಗೋ, ಡೇಟು ಎಲ್ಲಾ ಅಂದೆ
ಅವನು ಮತ್ತೆ ಫೋನ್ ತಿರುಗಿಸಲು ಆರಂಭಿಸಿದ
ಆಮೇಲೆ ಅವನ ಮುಖ ಎಷ್ಟು ಹಸನ್ಮುಖವಾಗಿ ಹೋಯಿತು ಎಂದರೆ
32 ಹಲ್ಲೂ ಕಿರಿದು ಹೇಳಿದ
ಸಮಯ 10 10 ಕ್ಕೆ ಇಟ್ಟರೆ ಅದು ನಗುಮುಖದ ಥರಾ ಕಾಣುತ್ತೆ ಹ್ಯಾಪಿ ಫೀಲಿಂಗ್ ಕೊಡುತ್ತೆ
8 20ಕ್ಕೆ ಇಟ್ಟರೆ ಅದು ದುಃಖದ ಮುಖದ ಥರಾ ಕಾಣುತ್ತೆ
ಅಷ್ಟೇ ಅಲ್ಲ ಸರಿಯಾಗಿ ನೋಡಿ ಅದು
V ಅಂದ್ರೆ Victory ಸಿಂಬಲ್ ಥರಾ ಕಾಣಲ್ವಾ..? ಅಂದಿದ್ದ
ದೂರದರ್ಶನದ ನಿರ್ದೇಶಕರೇನೂ ಯಾರಿಗೂ ಫೋನ್ ತಿರುಗಿಸಲಿಲ್ಲ
ನನಗೇ ಕೇಳಿದರು- ಒಂದು ತಿಂಗಳಿಗೆ ಎಷ್ಟು ವಾರ?
ನಾನೋ ಇದೇನಪ್ಪ ಪ್ರಶ್ನೆಗೆ ಪ್ರಶ್ನೆನೇ ಉತ್ತರ ಅಂದುಕೊಂಡು
ನನಗೆ ಗೊತ್ತಿರೋ ಗಣಿತ ತಿರುವಾಕಿ 4 ಅಂದೆ
ಹಾಗಾದ್ರೆ 13 ಅಂದ್ರೆ ಎಷ್ಟು ತಿಂಗಳಾಯಿತು ಎಂದರು
4×3=12
ಮೂರು ತಿಂಗಳು ಅಂದೆ
ಅದೇ ಕಾರಣ
ಸರ್ಕಾರಿ ವ್ಯವಹಾರದಲ್ಲಿ ಒಂದು ವರ್ಷ ಅಂದ್ರೆ 4 ಕ್ವಾರ್ಟರ್
ಒಂದು ಕ್ವಾರ್ಟ್ರ್ ಅಂದ್ರೆ 3 ತಿಂಗಳು
ನಾವು ಇಡೀ ಯೋಜನೇ ತಯಾರಿಸೋದೇ ಮೂರು ತಿಂಗಳ ನಾಲ್ಕು ಅವಧಿಗೆ
ಹಾಗಾಗಿ ಎಂತಹ ಕಥೆಯಾದರೂ, ಚರಿತ್ರೆ ಪುರಾಣವಾದರೂ ಮೂರು ತಿಂಗಳಿಗೆ ಮುಕ್ತಾಯ ಎಂದರು
ಎರಡೂ ಗೋಷ್ಠಿಗಳಿಂದ ಆಚೆ ಎದ್ದು ಬಂದ ನಾನು ಈಗ ಟೈಟಾನ್ ವಾಚ್ ನಂತೆ, ದೂರದರ್ಶನ ಸೀರಿಯಲ್ ನಂತೆ ಆಗಿ ಹೋಗಿದ್ದೇನೆ
ಏನೇ ಇರಲಿ, ಎಂತಹ ಅಳುವ ಕಡಲನ್ನು ಈಜುತ್ತಿದ್ದರೂ
ನಗೆಯ ಹಾಯಿ ದೋಣಿ ಏರಿದವನಂತೆ ಇರಬೇಕು ಅನ್ನುವುದು ಮನದಟ್ಟಾಗಿ ಹೋಗಿದೆ
ನಾನು ಸದಾ10 10 ರ ಮುಳ್ಳಿನಂತೆ ..
ಎಲ್ಲರಿಗೂ ನನ್ನ ಇರುವು ಗೊತ್ತಾಗುವಂತೆ
ಬಿದ್ದು ಹೋದ ಬದುಕಿದ್ದರೂ ನಗು ಮುಖ ಹೊತ್ತು
ಸದಾ ಎರಡು ಬೆರಳೆತ್ತಿ ವಿಕ್ಟರಿ ಸೈನ್ ತೋರಿಸಿತ್ತಾ ಬದುಕುತ್ತಿದ್ದೇನೆ
ಅಷ್ಟೇ ಅಲ್ಲ
ನನ್ನ ನೋವು, ನಲಿವು, ಸುಖ ದುಃಖ ಹಾಡು ಪಾಡು ಎಲ್ಲವನ್ನೂ
13 ವಾರಕ್ಕೆ ಅಂದರೆ ಸರಿಯಾಗಿ ಮೂರು ತಿಂಗಳಿಗೆ
ಮುದುರಿ ಸುತ್ತಿಡುತ್ತೇನೆ
ನನ್ನ ಎಂತಹ ಗೋಳಿದ್ದರೂ, ಕಥೆ ಇದ್ದರೂ, ರಂಗಿನಾಟವಿದ್ದರೂ
ಯಸ್, ಮೂರು ತಿಂಗಳು ಅಥವಾ 13 ಎಪಿಸೋಡ್ ಗಳು ಮಾತ್ರ
ಆಮೇಲೆ ಹೊಸದೇ ಕಥೆ.. ಹೊಸದೇ ಹಾಡು.. ಹೊಸದೇ ಪಾಡು