ತುಮಕೂರು:
ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಕೆಲಸಗಳನ್ನು ವಿನಾ ಕಾರಣ ಮುಂದೂಡದೆ ಕಾಲ ಪರಿಮಿತಿಯಲ್ಲಿ ಮಾಡಿಕೊಟ್ಟಲ್ಲಿ ಸಾಮಾನ್ಯ ಜನ ಇಲಾಖೆಗೆ ಅಲೆಯುವುದು ತಪ್ಪುತ್ತದೆ ಎಂದು ಎಂದು ಎಸಿಪಿ ಇನ್ ಸ್ಪೆಕ್ಟರ್ ಎಚ್.ಸುನಿಲ್ ಕುಮಾರ್ ತಿಳಿಸಿದರು.
ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಜನ ಬುದ್ಧಿವಂತರಾಗಿದ್ದಾರೆ. ವಿನಾಕಾರಣ ಅಧಿಕಾರಿಗಳು ಜನ ಸಾಮಾನ್ಯರ ಕೆಲಸ ಕಾರ್ಯ ವಿಳಂಬ ಮಾಡಿದರೆ, ಕೆಲಸ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟರೆ ಎಸಿಬಿಗೆ ದೂರು ನೀಡುವುದನ್ನು ಕಲಿತಿದ್ದಾರೆ. ಇದರೊಂದಿಗೆ ಎಸಿಪಿ ಇಲಾಖೆ ಸಾರ್ವಜನಿಕರಿಗೆ ಹತ್ತಿರವಾಗಿ ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತಿದೆ. ಇಂತಹ ವೇಳೆ ಸಾರ್ವಜನಿಕರಿಗೆ ತೊಂದರೆ ನೀಡಿ ಎಸಿಬಿ ಬಲೆಗೆ ಬಿದ್ದು ನಿಮ್ಮ ಉದ್ಯೋಗ ನೀವೇ ಹಾಳು ಮಾಡಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳದಿರಿ ಎಂದು ಅಧಿಕಾರಿಗಳಿಗೆ ತಿಳುವಳಿಕೆ ನೀಡಿದರು.
ಯಾವುದೇ ಸರ್ಕಾರಿ ಇಲಾಖೆಯಲ್ಲಿ ಜನ ಸಾಮಾನ್ಯರ ಕೆಲಸ ನಿರ್ವಹಿಸಲು ವಿನಾಕಾರಣ ಅಲೆದಾಡಿಸಿ ವಿಳಂಬ ಮಾಡಿದ್ದಲ್ಲಿ ಅಂತಹ ವೇಳೆ ಭ್ರಷ್ಟಾಚಾರದ ನಿಗ್ರಹದಳಕ್ಕೆ(ಎಸಿಬಿ) ಸಾರ್ವಜನಿಕರು ಧೈರ್ಯವಾಗಿ ದೂರು ನೀಡಬಹುದಾಗಿದೆ. ಎಸಿಬಿ ಇಲಾಖೆ ಜನ ಸಾಮಾನ್ಯರಿಗಾಗಿ ಇದ್ದು, ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂಧಿಸಲಿದೆ ಎಂದು ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಂದಾಯ ಇಲಾಖೆಯಲ್ಲಿ ಖಾತೆ ಬದಲಾವಣೆ ಹಾಗೂ ಮನೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಐದು ಅರ್ಜಿಗಳು ಸಾರ್ವಜನಿಕರಿಂದ ನೀಡಲಾಯಿತು. ಬಹುತೇಕ ಅರ್ಜಿಗಳು ಕಂದಾಯ ಇಲಾಖೆ ಸಂಬಂಧಿಸಿದ ಬಹಳ ವರ್ಷಗಳಿಂದ ಖಾತೆ ಬದಲಾವಣೆಯಾಗಿಲ್ಲ ಎಂಬುದರ ಬಗ್ಗೆ ದೂರುಗಳು ಇದ್ದವು.
ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಆದರೆ ತಹಶೀಲ್ದಾರ್ ಸ್ಥಳೀಯವಾಗಿ ಇದ್ದುಕೊಂಡು ಸಭೆಗೆ ಬಂದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂತು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್, ಆರೋಗ್ಯ ಇಲಾಖೆಯ ಡಾ. ವಿಜಯ್ ಕುಮಾರ್, ಉಪನೊಂದಣಾಧಿಕಾರಿ ಪರಮಶಿವಮೂರ್ತಿ, ಎಇಇ ರಂಗಪ್ಪ ಇತರರು ಇದ್ದರು.