Saturday, June 22, 2024
Google search engine
Homeಸಾಹಿತ್ಯ ಸಂವಾದಅಂತರಾಳಶಂಭು ಹೆಗಡೆ ಎಂಬ ಕೃಷ್ಣನನ್ನು ಹುಡುಕುತ್ತಾ..

ಶಂಭು ಹೆಗಡೆ ಎಂಬ ಕೃಷ್ಣನನ್ನು ಹುಡುಕುತ್ತಾ..

ಜಿ ಎನ್ ಮೋಹನ್


ನಾನು ಅಲ್ಲಿಗೆ ಕಾಲಿಟ್ಟಾಗ ಕತ್ತಲು ನಿಧಾನವಾಗಿ ಊರಿಗೆ ಊರನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು. ಅಷ್ಟು ದೂರದಿಂದ ಬಂದಿದ್ದ ನಾನು ಆಸೆಯಿಂದಲೇ ಅವರ ಮನೆಯ ಬಾಗಿಲು ಬಡಿದೆ.

ಬಾಗಿಲು ತೆರೆಯಿತಾದರೂ ನನಗೆ ಬೇಕಾದವರು ಇರಲಿಲ್ಲ.

ನಾನು ಹಾಗೆ ಅಷ್ಟು ದೂರದಿಂದ ತಹತಹಿಸಿ ಬಂದದ್ದು ಕೃಷ್ಣನ ದರ್ಶನಕ್ಕಾಗಿ. ’ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ, ಕೃಷ್ಣಾ ಎನಬಾರದೆ’ ಎನ್ನುವ ಸಾಲುಗಳನ್ನ ಸದಾ ನೆಂಚಿಕೊಳ್ಳುತ್ತಲೇ ಬಂದ ನಾನು ನೇರವಾಗಿ ಆ ಕೃಷ್ಣನ ಮನೆಯ ಬಾಗಿಲಿಗೇ ಬಂದು ನಿಂತಿದ್ದೆ.

ಆದರೆ ಹಾಗೆ ನಾನು ಕೃಷ್ಣನನ್ನು ಹುಡುಕುತ್ತಾ ಬಂದದ್ದು ದ್ವಾರಕೆಗಲ್ಲ… ಕೆರೆಮನೆಗೆ.

ಕೃಷ್ಣ ಹೇಗಿದ್ದನೋ ನನಗಂತೂ ಗೊತ್ತಿಲ್ಲ. ನನಗೆ ಮಾತ್ರವಲ್ಲ, ಕೃಷ್ಣನ ಬಗ್ಗೆ ನೂರೆಂಟು ಹಾಡಿದವರಿಗೂ, ಕೃಷ್ಣನ ಭಜಿಸಿದವರಿಗೂ, ಕೃಷ್ಣನಿಗಾಗಿ ಹಪಹಪಿಸಿದವರಿಗೂ ಗೊತ್ತಿಲ್ಲ.

ಆದರೆ ’ಕೃಷ್ಣ ಹೇಗಿರುತ್ತಾನೆ’ ಎಂದು ಯಕ್ಷಗಾನ ಪ್ರಿಯರಿಗ್ಯಾರಿಗಾದರೂ ಕೇಳಿ ನೋಡಿ, ಅವರು ಒಂದಿಷ್ಟೂ ಅನುಮಾನವಿಲ್ಲದಂತೆ ’ಶಂಭುಹೆಗಡೆಯವರ ಹಾಗೆ’ ಎಂದು ಬಿಡುತ್ತಾರೆ.

ಕೃಷ್ಣ ಎಂದರೆ ಅದು ಶಂಭು ಹೆಗಡೆಯೇ ಎನ್ನುವ ಆ ಅಚ್ಚನ್ನು ಯಕ್ಷಗಾನ ಕಂಡವರ ಮನದಿಂದ ಬಹುಷಃ ಅಳಿಸಲು ಸಾಧ್ಯವೇ ಇಲ್ಲವೇನೋ.

ನಾನು ಗೆಳೆಯ ಶಿವಾನಂದ ಹೆಗಡೆಯನ್ನು ಭೇಟಿ ಮಾಡಲೆಂದು ಕಲಾಕ್ಷೇತ್ರದ ಚೌಕಿಗೆ ಹೆಜ್ಜೆ ಹಾಕಿದಾಗ ಆ ‘ಕೃಷ್ಣ’ನ ದರ್ಶನವಾಗಿಹೋಯ್ತು.

ಆಗ ತಾನೆ ಪ್ರಸಾಧನ ಮುಗಿಸಿಕೊಂಡಿದ್ದ ಶಂಭು ಹೆಗಡೆಯವರು ರಂಗಕ್ಕೆ ಇನ್ನೇನು ಹೆಜ್ಜೆಯಿಡಬೇಕು… ಆಗ ಕಿರೀಟವಿಲ್ಲದ ತಲೆಯನ್ನು ದಿಂಬಿಗೊರಗಿಸಿ ಕಣ್ಣು ಮುಚ್ಚಿದ್ದರು. ರಂಗಕ್ಕೆ ಇಳಿಯಲು ಶಂಭು ಹೆಗಡೆಯವರು ಸಜ್ಜಾಗುತ್ತಿದ್ದದ್ದೇ ಹಾಗೆ. ಅವರು ಇಹಪರಗಳಿಂದ ಒಂದರೆಕ್ಷಣ ದೂರವಾಗಿಬಿಡುತ್ತಿದ್ದರು.

ದುರ್ಯೋಧನನ ಬಳಿ ಕೃಷ್ಣ ಸಂಧಾನಕ್ಕಾಗಿ ಆಗಮಿಸುತ್ತಾನೆ. ಉರಿ ಉರಿಯುತ್ತಿದ್ದ ದುರ್ಯೋಧನ ಕೃಷ್ಣನನ್ನು ಕಟ್ಟಿಹಾಕುವಂತೆ ಆಜ್ಞಾಪಿಸುತ್ತಾನೆ. ಆಗ ನೋಡಬೇಕು ಶಂಭು ಹೆಗಡೆಯವರ ಅಭಿನಯ… ಮುಖದಲ್ಲಿ ನಗು ತುಳುಕಿಸುತ್ತಾ, ಎದುರಿಗಿರುವ ದುರ್ಯೋಧನನ ಮುಖ ಇನ್ನಷ್ಟು ಉರಿಯುವಂತೆ ಅವರು ಹೆಜ್ಜೆ ಹಾಕುತ್ತಿದ್ದ ಭಂಗಿಯನ್ನು ನಾನಿನ್ನೂ ಮರೆತಿಲ್ಲ.

ಅಂದು ರಂಗದ ಚೌಕಿಯಲ್ಲಿ ಕಂಡ ನಂತರ ಈ ಕೃಷ್ಣನನ್ನು ಮತ್ತೆ ಮತ್ತೆ ಭೇಟಿ ಮಾಡಿದ್ದೇನೆ.

ಮುಂಬೈಗೆ ಹೋಗುವ ದಾರಿಯಲ್ಲಿ ವೇಷದ ಹತ್ತೆಂಟು ದೊಡ್ಡ ಪೆಟ್ಟಿಗೆಗಳ ಸಮೇತ ಮಂಗಳೂರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ, ಗೆಳೆಯ ಎಸ್ ಎಂ ಹೆಗಡೆಯವರ ಮನೆಯಲ್ಲಿ ಊಟ ಮಾಡುತ್ತಿರುವಾಗ, ಸೋಮೇಶ್ವರದ ಕಡಲ ಬದಿಯಲ್ಲಿ ಯಕ್ಷಗಾನದ ಮಾತು ಮಥಿಸುತ್ತಿದ್ದಾಗ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಡತಗಳನ್ನು ಹೊತ್ತು ತಾವು ಹುಟ್ಟುಹಾಕಿದ ಯಕ್ಷಗಾನ ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಓಡಾಡುತ್ತಿದ್ದಾಗ…. ಹೀಗೆ.

ಶಂಭು ಹೆಗಡೆ ಅಂದರೆ ಸಾಕು ಯಕ್ಷಗಾನದ ನಡೆದಾಡುವ ದೇವರು ಎಂದೇ ಅರ್ಥ. ಸಜ್ಜನ ಯಕ್ಷಗಾನಕ್ಕೆ ಮತ್ತೊಂದು ಹೆಸರು ಎನ್ನುವಂತಿದ್ದರು.

ಶಂಭು ಹೆಗಡೆಯವರ ಬಗ್ಗೆ ನನ್ನ ಕುತೂಹಲಕ್ಕೆ ಇದ್ದ ಕಾರಣವೇ ಬೇರೆ. ಅವರು ಆ ಕಾಲಕ್ಕೇನೇ ಯಕ್ಷಗಾನದಲ್ಲಿ ಹೊಸ ಗಾಳಿ ಬೀಸಲು ಕಾರಣರಾಗಿದ್ದರು.

ದಕ್ಷಿಣ ಕನ್ನಡದಲ್ಲಿ ಶಿವರಾಮ ಕಾರಂತರು ಕಾಲಿಗೆ ಗೆಜ್ಜೆ ಕಟ್ಟಿ ನಿಂತಿದ್ದರೆ, ಉತ್ತರ ಕನ್ನಡದಲ್ಲಿ ಶಂಭು ಹೆಗಡೆಯವರು ಕುಣಿತಕ್ಕೆ ಹೊಸ ಹೆಜ್ಜೆ ವಿನ್ಯಾಸ ಮಾಡುತ್ತಿದ್ದರು.

60ರ ದಶಕದಲ್ಲಿಯೇ ಯಕ್ಷಗಾನಕ್ಕೆ ಹೊಸ ಹೆಜ್ಜೆಗಳನ್ನು ಬೆಸುಗೆ ಹಾಕಲು ಅವರು ದೆಹಲಿಯತ್ತ ಮುಖ ಮಾಡಿದ್ದರು. ದೆಹಲಿಯಲ್ಲಿ ಮಾಯಾರಾವ್ ಅವರ ’ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕೊರಿಯೋಗ್ರಾಫಿ’ಯಲ್ಲಿ ತಿಂಗಳುಗಟ್ಟಲೆ ಕೊರಿಯೋಗ್ರಫಿ ಕಲಿತು ಬಂದರು.

ನಾನು ಲಾಂಚನ್ನೇರಿ, ನದಿ ದಾಟಿ, ಇಡೀ ಸಂಜೆ ಹೊನ್ನಾವರದ ಪೇಟೆಯಲ್ಲಿ ಸುತ್ತುತ್ತಾ, ಕಡಲಿನ ಆರ್ಭಟಕ್ಕೆ ಕಿವಿಗೊಟ್ಟು, ಮೀನು ಅಂಗಡಿಗಳ ಏರು ದನಿಗೆ ಬೆರಗಾಗಿ ಮತ್ತೆ ಕೆರೆಮನೆಗೆ ಬಂದಾಗ ರಾತ್ರಿಯಾಗಿತ್ತು.

ಶಂಭು ಹೆಗಡೆಯವರು ಬಂದು ನನಗಾಗಿ ಕಾದು ಕುಳಿತಿದ್ದರು. ಚಂದಿರನನ್ನು ಸರಿಸಿ, ಸೂರ್ಯನನ್ನು ಬರಮಾಡಿಕೊಳ್ಳುವವರೆಗೆ ನಾವು ಮಾತನಾಡಿಯೇ ಸಿದ್ಧ ಎನ್ನುವಂತೆ ನಾವು ಕುಳಿತು ಬಿಟ್ಟೆವು.

’ಯಾವುದೇ ಕಲಾವಿದನಿಗೆ ಕನ್ನಡಿ ಮುಖ್ಯ’ ಎಂದರು. ನನ್ನ ಪ್ರಶ್ನಾರ್ಥಕ ಚಿಹ್ನೆಯ ಮುಖ ಅವರಿಗೆ ಕಂಡಿತೇನೋ, ’ಕನ್ನಡಿ ನೋಡಿದಾಗ ನಮ್ಮ ಆಕೃತಿ ಸ್ವಚ್ಛವಾಗಿ ಕಾಣುತ್ತದೆ. ಹಾಗೆಯೇ ನಾವು ಬೇರೆ ಕಲೆಗಳನ್ನು ನೋಡುತ್ತಾ ನಮ್ಮ ಕಲೆ ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಯಕ್ಷಗಾನದ ಕಲಾವಿದರು ಇತರೆ ರಂಗಭೂಮಿಯನ್ನು ಜಾಸ್ತಿ ಅಧ್ಯಯನ ಮಾಡುವುದಿಲ್ಲ. ಯಕ್ಷಗಾನ ಎಷ್ಟು ಮುಖ್ಯ ಎನ್ನುವುದು ಗೊತ್ತಾಗಬೇಕಾದರೆ ನಾವು ಬೇರೆ ಕಲೆಗಳನ್ನು ಅರ್ಥ ಮಾಡಿಕೊಳ್ಳಲೇಬೇಕು ಎಂದರು.

ಬಹುಷಃ ದೆಹಲಿಯಲ್ಲಿನ ಅಧ್ಯಯನ, ಇತರೆ ಕಲೆಗಳ ಬಗ್ಗೆ ಇದ್ದ ಆಸಕ್ತಿಯಿಂದಲೇ ಇರಬೇಕು ಶಂಭು ಹೆಗಡೆಯವರು ಸದಾ ಹೊಸತರ ಹುಡುಕಾಟ ನಡೆಸುತ್ತಲೇ ಇದ್ದರು.

ಯಕ್ಷಗಾನಕ್ಕೆ ಒಂದು ಹೊಸರೀತಿಯ ರಂಗಮಂಟಪ ಕೊಟ್ಟಿದ್ದೇ ಇವರು. ಯಕ್ಷಗಾನ ನೋಡಲು ಜನ ಹೆಚ್ಚಾದಂತೆ ಕಂಬಗಳೇ ಅಡ್ಡಿಯಾಗುತ್ತಾ ಹೋಯಿತು. ಯಕ್ಷಗಾನ ಆಡುವವರಿಗೂ, ನೋಡುವವರಿಗೂ ಇಬ್ಬರಿಗೂ ಅಡ್ಡಿ. ಆಗಲೇ ಶಂಭು ಹೆಗಡೆಯವರು ಅರ್ಧ ಚಂದ್ರಾಕೃತಿಯ ರಂಗಮಂಟಪ ವಿನ್ಯಾಸ ಮಾಡಿದ್ದು.

ಸಂತೋಷ ಆದರೆ ಮಾತ್ರ ಕುಣಿತ ಎನ್ನುವ ಕಾಲವೂ ಇತ್ತು. ಕರುಣಾ ರಸಕ್ಕೆ ನೃತ್ಯವೇ ಇರಲಿಲ್ಲ. ಆಗ ಶಂಭು ಹೆಗಡೆ ಒಂದು ಹೆಜ್ಜೆ ಮುಂದೆ ಬಂದರು. ’ರಸ, ಕುಣಿತಕ್ಕಾಗಿ ಇರುವುದಿಲ್ಲ, ನೃತ್ಯದಲ್ಲಿ ರಸ ಹೊರಹಾಕುವುದು ಮುಖ್ಯ’ ಎಂದವರೇ ಶೋಕ ಹಾಗು ಕರುಣ ರಸಕ್ಕೂ ನೃತ್ಯವನ್ನು ಸಂಯೋಜಿಸಿದರು.

ಯಕ್ಷಗಾನದಲ್ಲಿ ಇನ್ನೊಂದು ಸಮಸ್ಯೆ ಇತ್ತು. ಯಕ್ಷಗಾನದ ಕೆಟ್ಟ ಮತ್ತು ಒಳ್ಳೆಯ ಪಾತ್ರವನ್ನು ಅದರ ಕಿರೀಟಗಳೇ ತಿಳಿಸಿಬಿಡುತ್ತವೆ. ಆದರೆ ಅತ್ತ ಒಳ್ಳೆಯದೂ ಅಲ್ಲದ, ಇತ್ತ ಕೆಟ್ಟದೂ ಅಲ್ಲದ ಅರೆ ರಾಕ್ಷಸ ಪಾತ್ರಗಳಿಗೆ ಕಿರೀಟ, ವೇಷ ಇರಲಿಲ್ಲ. ಆಗ ಶಂಭು ಹೆಗಡೆ ಒಳ್ಳೆಯ, ಕೆಟ್ಟ ಎರಡೂ ಗುಣಗಳನ್ನೂ ಮಿಶ್ರಣ ಮಾಡಿದ ಕಿರೀಟ ವಿನ್ಯಾಸ ಮಾಡಿಕೊಟ್ಟರು.

ನಾನು ’ಅಭಿನಯ ದರ್ಪಣ’ವನ್ನು ಮೆಚ್ಚುವವನು. ಯಾಕೆಂದರೆ ಅದರಲ್ಲಿ ಪರಂಪರೆಯ ಜೊತೆ ಪ್ರಯೋಗಕ್ಕೂ ಅವಕಾಶವಿದೆ. ಪರಂಪರೆಗೆ ಜೋತು ಬೀಳಬಾರದು, ಹೊಸದಕ್ಕೆ ತೆರೆದುಕೊಳ್ಳಬೇಕು’ ಎಂದ ತಕ್ಷಣ ನನಗೆ ಯಕ್ಷಗಾನಕ್ಕೆ ಆಧುನಿಕ ವಿಷಯಗಳನ್ನು ಬೆಸುಗೆ ಹಾಕಲು ನಡೆಯುತ್ತಿದ್ದ ಪ್ರಯತ್ನ ನೆನಪಾಯಿತು.

’ಯಕ್ಷಗಾನ ಇವತ್ತಿನ ಜರೂರಿಗೆ ಸ್ಪಂದಿಸುವ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತಿರುವುದರ ಬಗ್ಗೆ ನಿಮಗೇನನ್ನಿಸುತ್ತದೆ’ ಎಂದೆ.

’ಸಾಮಾಜಿಕ ವಿಷಯಗಳು ಖಂಡಿತಾ ಬೇಕು, ಆದರೆ ನೇರವಾಗಿ ಬೇಡ ಎನ್ನುವ ನಿಲುವು ನನ್ನದು. ವಸ್ತುವಿನ ಚೌಕಟ್ಟಿನೊಳಗೆ ಏನು ಇದೆ, ಅದನ್ನು ಹುಡುಕಬೇಕು. ಮರ ಕಡಿಯಬಾರದು ಅಂತ ಅರಣ್ಯಾಧಿಕಾರಿ ಹೇಳಿದ ಹಾಗೆ ಹೇಳಿದರೆ ಏನು ಪ್ರಯೋಜನ? ಬದಲಿಗೆ ಪ್ರಕೃತಿಯನ್ನು ಪ್ರೀತಿಸುವ ಗುಣವನ್ನು ಜಾಗೃತಿಗೊಳಿಸಬೇಕು. ’ಖಾಂಡವ ದಹನ’ ಕಥೆ ನೋಡಿ. ಅಲ್ಲಿ ಪರಿಸರ ನಾಶಮಾಡಬೇಡಿ ಎನ್ನುವುದಿಲ್ಲ. ನಾಶ ಮಾಡಿದ್ದರಿಂದ ಏನಾಯಿತು ಎನ್ನುವ ವಿವರಣೆ ಇದೆ. ಪುರಾಣದಲ್ಲಿಯೆ ಇಂದಿನ ಸಮಸ್ಯೆಗೆ ಸ್ಪಂದಿಸುವ, ವ್ಯವಸ್ಥೆಗೆ ಟ್ರೀಟ್ ಮೆಂಟ್ ಕೊಡುವ ವಸ್ತುಗಳಿವೆ. ಅದನ್ನು ಹುಡುಕುವ ನೋಟ ಇರಬೇಕು’ ಎಂದರು.

ಯಕ್ಷಗಾನದಲ್ಲಿ ಸಿನಿಮಾ ಹಾಡು, ಡ್ಯಾನ್ಸ್ ಎಲ್ಲಾ ಇಣುಕಿ ಹೋಗುತ್ತಿರುವ ಸಂದರ್ಭದಲ್ಲಿ ಶಂಭು ಹೆಗಡೆಯವರ ’ಶುದ್ಧ ಯಕ್ಷಗಾನ’ ಏನಾಗುತ್ತಿದೆ ಎಂದು ಕೇಳುವ ಬಯಕೆಯಾಯಿತು.

ಶಂಭು ಹೆಗಡೆ ಮುಖ ಚಿಕ್ಕದು ಮಾಡಿಕೊಂಡರು. ‘ಮೋಹನ್, ಬರೀ ಹಾಡು, ಡ್ಯಾನ್ಸ್ ಅಲ್ಲ, ಯಕ್ಷಗಾನದ ಹೆಣ್ಣು ಪಾತ್ರಧಾರಿಗಳು ರವಿಕೆ ಹರಿದುಕೊಂಡು ವೇದಿಕೆಗೆ ಬರುತ್ತಾರೆ. ಸಂಭಾಷಣೆಯಲ್ಲಿ ಡಬಲ್ ಮೀನಿಂಗ್ ಕಾಣಿಸಿಕೊಂಡಿದೆ’ ಎಂದರು.

ಬೆಳಕು ಮೂಡಲು ಲೋಕ ಸಜ್ಜಾಯಿತು ಎನ್ನುವಂತೆ ಹಕ್ಕಿಗಳು ಚಿಲಿಪಿಲಿ ಎನ್ನತೊಡಗಿದವು.

’ಇಲ್ಲ ಕಾನೂನಿನಿಂದ ಇದನ್ನೆಲ್ಲಾ ನಿಯಂತ್ರಣ ಮಾಡಲಾಗುವುದಿಲ್ಲ. ಹೆಚ್ಚು ಜನ ಪ್ರೇಕ್ಷಕರನ್ನು ಸೆಳೆಯಬೇಕು ಎನ್ನುವುದಕ್ಕೆ ಕೆಟ್ಟ ಕ್ರೌರ್ಯ ಮತ್ತು ಅತಿಯಾದ ಲೈಂಗಿಕ ಪ್ರದರ್ಶನವೇ ಶಾರ್ಟ್ ಕಟ್. ಆದರೆ ನಮ್ಮಂತಹ ಹಲವಾರು ಮೇಳಗಳಾದರೂ ಶ್ರೇಷ್ಠ ಅಭಿರುಚಿ ಉಳಿಸಬೇಕು. ವ್ಯವಸಾಯ ಮೇಳಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡೋಣ. ಸಿನಿಮಾದಲ್ಲೂ ಆರ್ಟ್, ಕಮರ್ಷಿಯಲ್ ಅಂತ ಇಲ್ಲವೇ? ಒಳ್ಳೆ ಅಭಿರುಚಿ ಇರುವ ಪ್ರೇಕ್ಷಕರು ಇರುವವರೆಗೂ ಒಳ್ಳೆಯ ಯಕ್ಷಗಾನ ಸಹ ಸಾಯುವುದಿಲ್ಲ.’

ಅಷ್ಟರಲ್ಲಾಗಲೇ ಬೆಳಕು ನಮ್ಮ ಅಂಗೈಯೊಳಗೆ ಬಂದು ಕುಳಿತಿತ್ತು.

’ಬನ್ನಿ ಹೀಗೆ, ಎರಡು ಹೆಜ್ಜೆ ಹಾಕೋಣ’ ಎಂದವರೇ ಅಲ್ಲೇ ಕೆರೆಮನೆ ಸರ್ಕಲ್ ನಲ್ಲಿದ್ದ ತುಪ್ಪದ ದೋಸೆ ಹೋಟೆಲ್ ಗೆ ಕರೆದುಕೊಂಡು ಹೋದರು.

ನಾನು ಮಂಗಳೂರಿಗೆ ಹೋಗಲೇಬೇಕಿತ್ತು. ಅವರಿಗೆ ಭಟ್ಕಳದಲ್ಲಿ ಕೆಲಸವಿತ್ತು. ಹಾಗಾಗಿ ನಾವಿಬ್ಬರೂ ಅಲ್ಲೆ ಹಾದುಹೋಗುತ್ತಿದ್ದ ಮೆಟಡಾರ್ ವ್ಯಾನ್ ಗೆ ಕೈ ಅಡ್ಡ ಹಾಕಿದೆವು.

ವ್ಯಾನ್ ಏರಿದ್ದೇ ತಡ, ಅಶ್ಲೀಲ ಹಾಡೊಂದು ರಪ್ಪನೆ ಕಿವಿಗೆ ರಾಚಿತು.
ನಾನು ಶಂಭು ಹೆಗಡೆಯವರ ಕಡೆ ನೋಡಿದೆ. ಕಣ್ಣು, ಕಿವಿ ಎಲ್ಲವೂ ಅಶ್ಲೀಲವಾಗುತ್ತಿರುವುದನ್ನು ಕಂಡು ತಬ್ಬಿಬ್ಬಾಗಿದ್ದ ಆ ಕೃಷ್ಣ ವಿಷಾದದ ನಗೆ ಮೂಡಿಸಿದರು.

——-
ಅಮ್ಮ ವಿಜಯಮ್ಮ ನನಗೆ ಶಂಭು ಹೆಗಡೆ ಅವರ ಸಂದರ್ಶನ ಮಾಡಿಕೊಡು ಎಂದರು. ಆಗ ಅವರು ‘ಸಂಕುಲ’ದ ಸಂಪಾದಕರು.
ಕನ್ನಡ ಕಂಡ ಒಂದು ಒಳ್ಳೆಯ ಸಾಹಿತ್ಯ, ಸಾಂಸ್ಕೃತಿಕ ಡೈಜೆಸ್ಟ್ ಅದು.

ಅಮ್ಮನಿಗೆ ಇಲ್ಲ ಎಂದವರುಂಟೆ ?. ಮಂಗಳೂರಿನಲ್ಲಿದ್ದ ನಾನು ಹೊನ್ನಾವರ ತಲುಪಿದೆ. ಅಲ್ಲಿಂದ ಮುಂದಿನ ಕಥೆ ಇದು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?