ತುಮಕೂರು: ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಎಚ್ಎಂಎಸ್ ಪಾಲಿಟೆಕ್ನಿಕ್ ಮುಂಭಾಗ ದ ಇನ್ನೊಂದು ಬದಿಯಲ್ಲಿ ಉದ್ದಕ್ಕೂ ಹೊಸದಾಗಿ ಫುಟ್ಪಾತ್ ನಿರ್ಮಿಸಲಾಗಿದೆ. ಅಮೃತ್ ಯೋಜನೆಯಡಿ ಸುಮಾರು ಅರವತ್ತು ಎಪ್ಪತ್ತು ಲಕ್ಷ ರೂಗಳನ್ನು ವೆಚ್ಚ ಮಾಡಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ಕಾಮಗಾರಿ ಮುಕ್ತಾಯಗೊಂಡು ಇನ್ನೂ ಸಹ 3 – 4 ದಿನಗಳು ಸಹ ಕಳೆದಿಲ್ಲ. ಆದರೆ ಅಷ್ಟರೊಳಗೆ ಈ ಫುಟ್ಪಾತ್ ಉದ್ದಕ್ಕೂ ಅಂಗಡಿ ಮಳಿಗೆಗಳವರು ಅಕ್ರಮವಾಗಿ ಇಳಿಜಾರು ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದಕ್ಕಾಗಿ ಹೊಸದಾಗಿ ನಿರ್ಮಿಸಿರುವ ಫುಟ್ಪಾತ್ ಅನ್ನು ಅಗೆದು ಹಾಳು ಮಾಡಲಾಗಿದೆ. ಜೊತೆಗೆ ಇಳಿಜಾರು ನಿರ್ಮಾಣಕ್ಕಾಗಿ ರಸ್ತೆಯ ಟಾರ್ ಜಾಗವನ್ನು ಒತ್ತುವರಿ ಮಾಡಲಾಗಿದೆ.
ಈ ಅಕ್ರಮ ನಡೆಸಲು ರಜಾ ದಿನವಾದ ಎರಡನೇ ಶನಿವಾರ ವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಭಾನುವಾರವೂ ರಜಾ ದಿನ ಇರುವುದರಿಂದ ನಿರಾತಂಕವಾಗಿ ದಿಡೀರನೆ ಫುಟ್ಪಾತ್ ಒಡೆದು ಮನಬಂದಂತೆ ಇಳಿಜಾರು ಗಳನ್ನು ನಿರ್ಮಾಣ ಮಾಡಲಾಗಿದೆ.
ಈ ರೀತಿ ಯದ್ವಾತದ್ವಾ ಇಳಿಜಾರು ನಿರ್ಮಿಸಲು ಅನುಮತಿ ಕೊಟ್ಟವರು ಯಾರು? ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಿರುವ ಫುಟ್ಪಾತ್ ಹಾಳಾಗಲಿಲ್ಲವೇ? ತಕ್ಷಣವೇ ತುಮಕೂರಿನ ಶಾಸಕರು, ಮಹಾನಗರಪಾಲಿಕೆಯ ಸದಸ್ಯರುಗಳು ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಫುಟ್ಪಾತ್ ಅನ್ನು ಸರಿಪಡಿಸಬೇಕು ಹಾಗೂ ಸರ್ಕಾರಿ ಸ್ವತ್ತಾದ ಇದನ್ನು ಹಾಳುಗೆಡವಿದ ವ್ಯಕ್ತಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ಒತ್ತಾಯಿಸಿದ್ದಾರೆ.