Friday, October 4, 2024
Google search engine
Homeತುಮಕೂರು ಲೈವ್ಸಂಕಷ್ಟದಲ್ಲಿ ಸಿಲುಕಿರುವ ಸಾಮಾನ್ಯ ರೈತರನ್ನು ಉಳಿಸುವರು ಯಾರು….

ಸಂಕಷ್ಟದಲ್ಲಿ ಸಿಲುಕಿರುವ ಸಾಮಾನ್ಯ ರೈತರನ್ನು ಉಳಿಸುವರು ಯಾರು….

ರಂಗ‌ನಕೆರೆ ಮಹೇಶ್


ದೇಶದ ರೈತರನ್ನು ನೀರಾವರಿ ಆಶ್ರಿತ, ಕೊಳವೆ ಬಾವಿ ಆಶ್ರಿತ ಹಾಗೂ ಮಳೆಯಾಶ್ರಿತ ರೈತರು ಎಂದು ಹಲವು ವಿಧಗಳಾಗಿ ವಿಂಗಡಿಸಬಹುದು.

ದೇಶದ ಬಹುಪಾಲು ರೈತರು ಅಂದರೆ ಶೇ 75 ರಷ್ಟು ರೈತರು ಮಳೆಯಾಶ್ರಿತ ಗುಂಪಿಗೆ ಸೇರುತ್ತಾರೆ.

ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರಿನ ವೇಳೆ ಬರುವ ಮಳೆ ಆಧಾರದ ಮೇಲೆ ಇವರ ಕೃಷಿ ಅವಲಂಬಿತವಾಗಿರುತ್ತದೆ. ಇವರದು ಒಣ ಬೇಸಾಯ ಕ್ರಮವಾಗಿದ್ದು ಮಳೆ ಬಂದರೆ ಮಾತ್ರ ಇವರು ಬದುಕಬಲ್ಲರು ಮತ್ತು ಇವರು ನಂಬಿದ ದನಕರುಗಳು ಬದುಕಬಲ್ಲವು. ಮಳೆ ಬಾರದೆ ಹೋದರೆ ಇವರ ಜೀವನ ತುಂಬಾ ದುಸ್ತರವಾಗುತ್ತದೆ.

ಕಳೆದ ನಾಲ್ಕೈದು ವರ್ಷಗಳ ಮಳೆಯ ಪ್ರಮಾಣವನ್ನೇ ಗಮನಿಸಿದರೆ ಪ್ರತಿ ವರ್ಷವೂ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಅಲ್ಲಲ್ಲಿ ತುಂತುರು ಮಳೆ ಬರುತ್ತದೆ.

ಇದನ್ನು ನಂಬಿದ ರೈತ ದುಬಾರಿ ಬೆಲೆಗೆ ಬೀಜ, ಗೊಬ್ಬರ ತಂದು ಭೂಮಿಗೆ ಬಿತ್ತಿ ಕೈಸುಟ್ಟುಕೊಳ್ಳುತ್ತಾನೆ. ಒಮ್ಮೊಮ್ಮೆ ಬಿತ್ತಿದ ಬೀಜವೂ ಹಿಂದಿರುಗದ ಸ್ಥಿತಿ ಬಂದೊದಗುತ್ತದೆ.

ಆದರೂ ಸಾಮಾನ್ಯ ವರ್ಗದ ರೈತರು ಸುಮ್ಮನಾಗುವುದಿಲ್ಲ. ಮತ್ತೆ ಹಿಂಗಾರು ಬೀಜ ಬಿತ್ತಲು ಅಣಿಯಾಗುತ್ತಾನೆ. ಅಲ್ಲೂ ಸಹ ಅಪೇಕ್ಷಿತ ಮಳೆ ಬಾರದೆ ರೈತರ ಒಕ್ಕಲು ಮಕ್ಕಳ ಮಳೆಗಳೆನಿಸಿದ ಉತ್ತರೆಯಂತಹವೇ ಕೈಕೊಡುತ್ತವೆ.

ಆತನ ಮೂರು ತಿಂಗಳ ಗಂಜಿ ಮತ್ತು ದನಕರುಗಳಿಗೆ ಮೂರು ತಿಂಗಳ ಮೇವು ಸಿಗಬಹುದೇನೋ ಎಂಬ ಭರವಸೆ ಪ್ರತಿ ವರ್ಷ ಸುಳ್ಳಾಗುತ್ತದೆ. ಹಾಗೇನಾದರೂ ಯಾವುದೋ ಒಂದು ಮಳೆ ಸುಮಾರು ಮೂರು ತಿಂಗಳ ಬೆಳೆಗಾಗುವಷ್ಟು ಒಂದೇ ದಿನ ಬಂದು ಹೋಗುತ್ತದೆ.

ಮಳೆಯಾಧಾರಿತ ಪ್ರದೇಶದ ರೈತರು ಪಾರಾಂಪರಗತವಾಗಿ ಒಕ್ಕಲುತನವನ್ನೆ ಅವಲಂಬಿಸಿದ್ದಾರೆ. ಇವರದು ಏನಿದ್ದರೂ ದೇವರು ಎಷ್ಟು ಕೊಡುತ್ತಾನೋ ಅಷ್ಟೇ ಸಾಕು ಎಂಬ ಗಟ್ಟಿ ತೀರ್ಮಾನವನ್ನು ಮಾಡಿರುತ್ತಾರೆ.

ಆದರೆ ನಮ್ಮಲ್ಲಿನ ಕೆಲವು ಸ್ಥಿತಿವಂತ ರೈತರಿಗಿರುವಂತೆ ಸಾಮಾನ್ಯ ವರ್ಗಕ್ಕೆ ಹೆಚ್ಚಿನ ಸಂಘಟನೆ, ಆಕಾಂಕ್ಷೆ, ಮುಂದುವರೆದ ಹೋರಾಟಗಳು ಇವರ ಕೈಲಾಗದು. ಆದರೆ ತಂಬಾಕು, ಕಬ್ಬು ಸೇರಿದಂತೆ ಇತರ ಬೆಳೆಗಳ ಹೋರಾಟಗಾರರು ಸಂಘಟಿತರಾಗಿ ಹೋರಾಟ ಮಾಡುತ್ತಾರೆ.

ಇನ್ನೂ ರಾಜ್ಯದ ಅಡಿಕೆ, ಕಾಫಿ ಬೆಳೆಗಾರರನ್ನೇ ನೋಡಿ ಅವರು ತಮಗಾದ ಅನ್ಯಾಯದ ವಿರುದ್ಧ ಹೋರಾಟ ಮಾಡಿ ತಮ್ಮ ಹಕ್ಕು ಪಡೆದು ಕೊಂಡಿದ್ದಾರೆ. ಅದರಲ್ಲೂ ಕಾಫಿ ಮತ್ತು ಅಡಿಕೆ ಬೆಳೆಗಾರರು ಹೆಚ್ಚಾಗಿ ಜನಪ್ರತಿನಿಧಿಗಳಿರುವುದರಿಂದ ಇವರ ಹೋರಾಟಕ್ಕೆ ಬೇಗನೆ ಸ್ಪಂದನೆ ದೊರೆಯುತ್ತದೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಅಡಿಕೆ, ಕಾಫಿ ಬೆಳೆಗಾರರಿಗೆ ಸರ್ಕಾರ ಸ್ಪಂದಿಸಿದ್ದು ತಪ್ಪೇನೂ ಅಲ್ಲ ಆದರೆ ಸಾಮಾನ್ಯ ರೈತ ವರ್ಗಕ್ಕೆ ಸರ್ಕಾರ ಮಾಡಿದ್ದೇನು ಎಂಬ ಪ್ರಶ್ನೆ ಮೂಡುತ್ತದೆ.

ಸಾಮಾನ್ಯ ರೈತ ವರ್ಗದವರಿಗೆ ಪ್ರತಿ ವರ್ಷ ಮಳೆ ಬಂದರಷ್ಟೆ ಜೀವನ ಉತ್ತಮವಾಗಿ ಸಾಗುತ್ತದೆ. ಒಂದು ವರ್ಷ ಮಳೆ ಕೈಕೊಟ್ಟರು ಸಾಕು ಇವರ ಜೀವನ ಕಷ್ಟಕರವಾಗುತ್ತದೆ. ಇನ್ನೂ ಇವರ ದನಕರುಗಳಿಗೂ ಮೇವಿಲ್ಲದೆ ಕಟುಕರಿಗೆ ಮಾರಾಟ ಮಾಡುವ ಸ್ಥಿತಿ ಬಂದೊದಗುತ್ತದೆ.

ಆದರೆ ಉಳಿದ ಕಾಫಿ, ಅಡಿಕೆ ಬೆಳೆಗಾರರು ಹಿಂದಿನ ವರ್ಷಗಳ ಹಣದಲ್ಲಿ ಹೇಗೋ ಜೀವನ ಸಾಗಿಸಿ ಬಿಡುತ್ತಾರೆ. ಇನ್ನೂ ಇವರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಇವರಿಗೆ ಸಲೀಸಾಗಿ ಸಾಲ ನೀಡುತ್ತವೆ.

ಆದರೆ ಸಾಮಾನ್ಯ ವರ್ಗದ ರೈತರಿಗೆ ಈ ಬ್ಯಾಂಕುಗಳು ಸಾಲ ನೀಡುವುದೇ ಇಲ್ಲ. ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳು, ಭೂ ಅಭಿವೃದ್ಧಿ ಬ್ಯಾಂಕುಗಳು, ಗ್ರಾಮಗಳ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಲ್ಪಸ್ವಲ್ಪ ಸಾಲ ನೀಡುತ್ತವೆ. ಆದರೆ ಈ ಬ್ಯಾಂಕುಗಳು ನೀಡಿರುವ ಸಾಲ ನೀಡಿ ಮರುಪಾವತಿಯಾಗದೆ ರೋಗಗ್ರಸ್ಥವಾಗಿವೆ.

ಇನ್ನೂ ರಾಷ್ಟ್ರೀಕೃತ ಬ್ಯಾಂಕುಗಳ ಮೊರೆ ಹೋಗಬೇಕು. ಸಾಮಾನ್ಯ ರೈತ ವರ್ಗಗಳ ಭಾರಿ ಬೇಡಿಕೆಗಳನ್ನು ಈಡೇರಿಸಲು ಸಮರ್ಥವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸರ್ಕಾರ ಸಹ ಪ್ರತಿ ವರ್ಷ ವಿವಿಧ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುತ್ತದೆ.

ಅವು ಎಷ್ಟರ ಮಟ್ಟಿಗೆ ಈ ರೈತರಿಗೆ ಲಭ್ಯವಾಗಿವೆ ಎಂಬುದನ್ನು ನೀವೇ ಮನಗಾಣಬೇಕು. ಇನ್ನೂ ಬೆಳೆ ವಿಮೆ ವಿಷಯದಲ್ಲಿ ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಗಳ ಹಗ್ಗ ಜಗ್ಗಾಟದಲ್ಲಿ ಗೋಜಲುಗಳಾಗಿ ಯೋಜನೆ ಹಳ್ಳ ಹಿಡಿಯುತ್ತದೆ.

ಪಾರಂಪರವಾದ ಒಕ್ಕಲುತನ ಹಲವು ಸಾಮಾನ್ಯ ವರ್ಗದ ರೈತರ ಅನುಭವದಂತೆ ನಿಜಕ್ಕೂ ನಷ್ಟದ ಬಾಬುತ್ತೆ. ಆಗಾದರೆ ಇವರ ಸಂಕಷ್ಟಕ್ಕೆ ಪರಿಹಾರವೇ ಇಲ್ಲವೇ..? ಬಹು ಸಂಖ್ಯೆಯಲ್ಲಿರುವ ಸಾಮಾನ್ಯ ವರ್ಗದ ರೈತರ ಕಷ್ಟಗಳ ಪರಿಹಾರ ಸರ್ಕಾರಕ್ಕೆ ಸ್ವಲ್ಪ ಕಷ್ಟವಾದರೂ ಇವರ ಬಗ್ಗೆ ಒಮ್ಮೆಯೂ ಮಾತನಾಡದಿರುವುದು ಮಾತ್ರ ದುರಂತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?