ಶಶಿಕುಮಾರ ವೈ. ಬಿ
ವಿಶಾಲ ಬಯಲಿನೊಳು ಹರಡಿದೆ ಸಂತೆ,
ಸಂತೆಯೊಳಗಣ ಅಲೆದು ಬಸವಳಿಯೆ ಕೂತೆ.
ಬರೀ ಕೂಗಾಟ, ಧೂಳು, ಕಸ-ಕಡ್ಡಿ, ನಾತಗಳು.
ಇರುವರು ತರಹೇವಾರಿ ಜನ
ಮಾರಾಟಕ್ಕಿಟ್ಟಿರುವ ಸರಕುಗಳಂತೆಯೇ.
ತಾಜಾ ಮನದ ಸುಗುಣರು,
ಅಂತೆಯೇ ಎದೆ ಕೊಳೆತ ಪಿಸುಣರು.
ನೈಜತೆಗೆ ಕವಡೆಯ ಕಿಮ್ಮತ್ತಿಲ್ಲ,
ಇರುವುದೆಲ್ಲವೂ ಕೃತಕತೆಗೆ.
ಒಳಗೆ ಹುಳಿತು ಕೊಳೆತಿದ್ದರೂ
ಹೊರಗೆಲ್ಲ ಮೆರುಗಿನ ಅಲಂಕಾರ.
ಸ್ವಂತಿಕೆಗೆ ಮೈಯೊಡ್ಡಿದವು ಉಳಿಯಬೇಕಷ್ಟೇ, ಮೂಲೆಯಲ್ಲಿ,
ಇಲಿ ಹೆಗ್ಗಣಗಳ ಸಹವಾಸದಲ್ಲಿ.
ಎಳೆಸುತಿರುವೆ ಸುಮ್ಮನೆ ಕೂರಲು
ನಿರುಮ್ಮಳನಾಗಿ, ಎಲ್ಲಾದರೊಂದೆಡೆ.
ಬಿಡುವರೇ ಸಂತೆಯನ್ನು ಕೊಂಬ ಬಂದವರು?
ತಳ್ಳಾಡಿ, ನೂಕಾಡಿ, ಕೈತಿವಿದು, ಕಾಲ್ತುಳಿದು
ಹಿಂದಕ್ಕೆಳೆದು ಮುಂದೆ ನುಗ್ಗಲು
ಪಾಪ ಅವರಿಗದೇನೋ ತವಕ!
ಇದ ನೋಡಿದ್ದೇ ಆಯ್ತು ಈ ತನಕ.
ಭಯ ಕಾಡುತ್ತದೆ ಒಮ್ಮೊಮ್ಮೆ.
ಸಂತೆಯವರಂತೆಲ್ಲಾಗುತ್ತೇನೋ ಎಂದು,
ಇವರಂಟಿಸಿಕೊಂಡ ಕೆಸರು ಅದೆಲ್ಲಿ
ಮೈಗತ್ತಿ ಮುತ್ತುತ್ತದೋ ಎಂದು,
ಅವರ ಬೆವರು ಎಲ್ಲಿ ಸೋಂಕುತ್ತದೋ ಎಂದು,
ತೊಟ್ಟು ಬಂದ ಬಿಳಿ ಬಟ್ಟೆ ಕೊಳಕಾಗೀತೆಂದು,
ಸಂತೆಯೊಳು ಕಳೆದು ಹೋಗಿಬಿಟ್ಟೇನೆಂದು.