ಬಸ್ಸು ಸಂಚಾರ ಅಂತರ ನಿಗದಿಪಡಿಸಲು ಸೂಚನೆ
ಕಚೇರಿ ಹಾಗೂ ಶಾಲಾ ಸಮಯದಂತಹ ಫೀಕ್ ಅವರ್ನಲ್ಲಿ ಬಸ್ಸುಗಳ ಸಂಚಾರ ಅಂತರದ ಸಮಯ ನಿಗದಿಪಡಿಸಿ ಹಾಗೂ ಜಿಲ್ಲೆಯಲ್ಲಿರುವ ಸಂಚಾರ ದಟ್ಟನೆಗೆ ತಕ್ಕಂತೆ ಬಸ್ಸುಗಳ ಟ್ರಿಪ್ ಗಳನ್ನು ರೂಪಿಸಬೇಕೆಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಸುರಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಧುಗಿರಿ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಸಂಚಾರ ಸಮಯದಲ್ಲಿ ಅಂತರವಿರಬೇಕು. ಈ ಬಸ್ಸುಗಳು ಮಾರ್ಗ ಮಧ್ಯದಲ್ಲಿ ಬರುವ ಹಳ್ಳಿಗಳ ಜನರನ್ನು ಹಾಗೂ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುವುದಿಲ್ಲ ಎಂಬ ದೂರುಗಳಿವೆ. ಹಾಗಾಗಿ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ಗಳನ್ನು ಓಡಿಸಲಾಗುವುದು ಎಂದು ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಗುಬ್ಬಿ, ಹುಳಿಯಾರು, ಮಧುಗಿರಿ ಹಾಗೂ ಪಾವಗಡ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಸಮಯದಲ್ಲಿ ಕೆಎಸ್ ಆರ್ ಟಿ ಸಿ ಬಸ್ಗಳನ್ನು ಓಡಿಸಬೇಕು. ಬಸ್‌ಗಳ ವೇಳಾಪಟ್ಟಿಯ ಸಮಯವನ್ನು ಬದಲಾಯಿಸಿ ಬಸ್ಸುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಎಲ್ಲಾ ಹಳ್ಳಿಗಳಿಗೂ ಬಸ್ ಸಂಪರ್ಕ ಕಲ್ಪಿಸಿ ಜಾತ್ರೆ, ಮಕ್ಕಳು ಶಾಲೆಗೆ ಹೋಗುವ ಸಮಯ, ಗಾರ್ಮೆಂಟ್ಸ್ಗಳಿಗೆ ಕಾರ್ಮಿಕರು, ತೆರಳುವ ಸಮಯ, ರಜಾ ಮುಗಿದ ನಂತರದ ದಿನಗಳಲ್ಲಿ ಹೆಚ್ಚಿನ ಬಸ್ ಓಡಿಸಬೇಕು.
ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹೆಚ್ಚಿನದಾಗಿ ಆಟೋ, ಗೂಡ್ಸ್ ಆಟೋ ಸೇರಿದಂತೆ ಸ್ಥಳೀಯವಾಗಿ ಸಿಗುವ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂತಹವರಿಗೆ ಬಸ್ ಪಾಸ್ ಗಳನ್ನು ವಿತರಿಸಿ ಅವರು ಕೆಲಸಕ್ಕೆ ತೆರಳುವ ಸಮಯಗಳಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಕೆಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಸೂಚಿಸಿದರು.