Publicstory.in
ತುಮಕೂರು: ಪರಸ್ಪರ ಅಪನಂಬಿಕೆ, ಒಗ್ಗಟ್ಟು ಇಲ್ಲದೇ ಜರಡಿಯಂತಾಗಿರುವ ತುಮಕೂರು ಜಿಲ್ಲಾ ಬಿಜೆಪಿ ಘಟಕಕ್ಕೆ ಮಾಜಿ ಶಾಸಕ, ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಸುರೇಶಗೌಡ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ವರಿಷ್ಠರು ಹೊಸ ಸಂದೇಶ ರವಾನಿಸಿದ್ದಾರೆ.
ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಶಾಸಕ ಜ್ಯೋತಿ ಗಣೇಶ ಅವಧಿ ಮುಗಿದಿದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸಾರಥಿ ಕೂರಿಸಲು ಬಿಜೆಪಿ ರಾಜ್ಯ ವರಿಷ್ಠರು ಅಲೆದುತೂಗಿ ನೋಡುವ ಕೆಲಸ ಮಾಡುತ್ತಿದ್ದರು.
ಸಂಸದ ಜಿ.ಎಸ್.ಬಸವರಾಜ್ ಅವರಿಂದ ಸ್ವಲ್ಪ ಅಂತರ ಕಾಪಾಡಿಕೊಳ್ಳುತ್ತಿರುವ ಹೆಬ್ಬಾಕ ರವಿ ಅವರು ಸ್ಥಾನದ ಮೇಲೆ ಕಣ್ಣಿಟ್ಟಿದ್ದರು, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಇನ್ನೂ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ವಯಸ್ಸಿನ ಕಾರಣದಿಂದ ಅವಕಾಶ ಇರಲಿಲ್ಲ.
ಹಿಂದುಳಿದವರಿಗೆ ಸ್ಥಾನ ಸಿಗಬಹುದೆಂಬ ನಿರೀಕ್ಷೆಯೂ ಇತ್ತು. ಅದರ ಲೆಕ್ಕಾಚಾರವನ್ನು ಬಿಜೆಪಿಯ ಗರ್ಭಗುಡಿಯ ಮುಖಂಡರು ಬದಲಿಸಿದಂತೆ ಕಾಣುತ್ತಿದೆ.
ಜ್ಯೋತಿ ಗಣೇಶ್ ಅವರ ಹಿಂದಿನ ಅವಧಿಯಲ್ಲಿ ಸುರೇಶಗೌಡರೇ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು. ಯಡಿಯೂರಪ್ಪ ಅವರು ಕೆಜೆಪಿಯಿಂದ ಬಿಜೆಪಿಗೆ ಬಂದು ಮತ್ತೇ ತಮ್ಮ ಸ್ಥಾನ ಭದ್ರಪಡಿಸಿಕೊಂಡ ಬಳಿಕ ಜ್ಯೋತಿ ಗಣೇಶ್ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಇದರಿಂದಾಗಿ ಜಿಲ್ಲಾ ಬಿಜೆಪಿ ಮಾನಸಿಕವಾಗಿ, ದೈಹಿಕವಾಗಿ ಎರಡೂ ಹೋಳಾಗಿದ್ದರೂ ಒಂದೇ ಎಂಬಂತೆ ತೋರಿಸಿಕೊಳ್ಳುತ್ತಿದ್ದರು.
ಮಾಜಿ ಸಚಿವ ಎಸ್,ಶಿವಣ್ಣ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರು. ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸಹ ಇದರ ಹಿಂದೆ ಇದ್ದರು. ಏನ್ನೆಲ್ಲ ಆದರೂ ಜ್ಯೋತಿಗಣೇಶ್ ಅವರನ್ನು ಯಡಿಯೂರಪ್ಪ ಬದಲಾವಣೆ ಮಾಡಲಿಲ್ಲ.
ನಂತರ ವಿಧಾನಸಭೆ ಚುನಾವಣೆಯಲ್ಲಿ ಜ್ಯೋತಿ ಗಣೇಶ್ ಗೆಲುವು ಸಾಧಿಸಿ ಶಾಸಕರೂ ಆದರು. ಮಿತಭಾಷೆಯ ಜ್ಯೋತಿಗಣೇಶ್ ಎಲ್ಲರನ್ನೂ ಸಂಭಾಳಿಸಿಕೊಂಡು ಹೋದರು. ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಾಗಿರಲಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಖಾಡದಲ್ಲಿದ್ದರೂ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯ ಹಿಂದೆ ನಿಂತ ಪರಿಣಾಮ ಅವರು ಸೋಲುವಂತಾಯಿತು.
ಚುನಾವಣೆಯ ನಂತರ ಒಕ್ಕಲಿಗ ಅಧಿಕಾರಿಗಳು, ಮುಖಂಡರನ್ನು ಕಡೆಗಣಿಸುವ ಕೆಲಸ ಬಿಜೆಪಿಯಲ್ಲಿ ನಡೆಯುತ್ತಿದೆ ಎಂಬ ದೊಡ್ಡ ಆರೋಪಗಳು ಕೇಳಿಬಂದಿದ್ದವು.
ಇದರ ನಡುವೆಯೇ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಿತ್ತು.
ಸಭೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಕೆಂಗಣ್ಣಿನ ಬಿರುನೋಟ ನಡೆದದ್ದು, ಬಿಜೆಪಿಯೊಳಗೆ ಗುಟ್ಟಾಗಿ ಏನು ಉಳಿದಿರಲಿಲ್ಲ.
ಇದಾದ ಬಳಿಕ ಮೂರು-ನಾಲ್ಕು ಮಂದಿ ಹೆಸರನ್ನು ರಾಜ್ಯ ಕೋರ್ ಕಮಿಟಿಗೆ ಕಳುಹಿಸಲಾಗಿತ್ತು.
ಸುರೇಶಗೌಡರೇ ಏಕೆ?
ಸುರೇಶಗೌಡರನ್ನು ಮತ್ತೇ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡುವ ಹಿಂದೆ ಎರಡು ಕಾರಣಗಳಿವೆ ಎನ್ನುತ್ತಾರೆ ಬಿಜೆಪಿಯ ಹಿರಿಯ ನಾಯಕರು.
ಸುರೇಶಗೌಡರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾಗ ಜಿಲ್ಲೆಯಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಒದಗಿಸಲು ಮಾಡಿದ ರಾಜಕೀಯ ನಿಪುಣತೆ. ಇನ್ನೊಂದು, ಜಿಲ್ಲೆಯಲ್ಲಿರುವ ಬಹುಸಂಖ್ಯಾತ ಒಕ್ಕಲಿಗರನ್ನು ತೃಪ್ತಿ ಪಡಿಸುವ ಕೆಲಸ.
ಕ್ಷೇತ್ರದಲ್ಲಿ ಅಗಾಧ ಎನ್ನುವಂತ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಇಡೀ ದೇಶವೇ ಗ್ರಾಮಾಂತರ ಕ್ಷೇತ್ರದತ್ತ ತಿರುಗುವಂತೆ ಮಾಡಿದರೂ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಬಿಜೆಪಿಯ ಇಬ್ಬರು ಪ್ರಮುಖ ನಾಯಕರು ಕೆಲಸ ಮಾಡಿದ್ದು ಈಗ ಯಡಿಯೂರಪ್ಪ ಅವರಿಗೂ ಗೊತ್ತಾಗಿದೆ. ಸುರೇಶಗೌಡರ ಸೋಲುವಂತೆ ಮಾಡಿದ ಒಣ ರಾಜಕೀಯಕ್ಕೆ ಜಿಲ್ಲೆಯ ಒಕ್ಕಲಿಗರ ನಡುವೆಯೂ ಪಕ್ಷದ ಬಗ್ಗೆ ಮುನಿಸಿದೆ. ಇದನ್ನು ನೀಗಿಸಲು ಮತ್ತೇ ಪಕ್ಷವನ್ನು ಮತ್ತಷ್ಟು ಗಟ್ಟಿಪಡಿಸಲು ಸುರೇಶಗೌಡ ಅವರನ್ನು ರಾಜಕಾರಣಿಯೇ ಬೇಕಿತ್ತು ಎನ್ನುತ್ತಾರೆ ರಾಜ್ಯಕೋರ್ ಕಮಿಟಿಯ ಸದಸ್ಯರೊಬ್ಬರು.
ಸುರೇಶಗೌಡ ಅವರು ಅಧ್ಯಕ್ಷರಾಗಿದ್ದಾಗ ಜೆಡಿಎಸ್ ನ ಹಿಂದುಳಿದ ಮುಖಂಡರಾಗಿದ್ದ ವೈ.ಎಚ್.ಹುಚ್ಚಯ್ಯ, ಎಂ.ಆರ್. ಹುಲಿನಾಯ್ಕರ್ ಮುಂತಾವರನ್ನು ಕರೆತಂದರು. ಶಿರಾ ತಾಲ್ಲೂಕಿನಲ್ಲೂ ಸಾಕಷ್ಟು ಮುಖಂಡರನ್ನು ಕರೆತಂದರು. ತುರುವೇಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿದ್ದ ಮಸಾಲ ಜಯರಾಂ ಅವರನ್ನು ಕರೆತಂದು, ಅಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದರು.
ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿ ಬಲ ಕಳೆದುಕೊಳ್ಳುವ ಎಲ್ಲ ಮುನ್ಸೂಚನೆಗಳು ಜಿಲ್ಲೆಯಲ್ಲಿ ಈಗಾಗಲೇ ಕಾಣುತ್ತಿದೆ. ಬಲ ಉಳಿಸಿಕೊಳ್ಳುವ, ಮತ್ತಷ್ಟು ವಿಸ್ತರಿಸುವ ಕೆಲಸ ಸುರೇಶಗೌಡರ ಹೆಗಲೇರಿದೆ.
ಸೋಲಿನ ನಡುವೆ ಪಕ್ಷ ಮುನ್ನೆಡೆಸುವ ಜವಾಬ್ದಾರಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬದನ್ನು ಕಾದುನೋಡಬೇಕಾಗಿದೆ.
ಅವರೊಂದಿಗೆ ಮುನಿಸಿಕೊಂಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಈಗ ಅವರ ಅಣ್ಣನಂತೆ ಅವರ ಹಿಂದೆ ನಿಂತಿದ್ದಾರೆ. ಸ್ವಲ್ಪ ದೂರವಾದಂತೆ ಕಾಣುತ್ತಿದ್ದ ಸಂಸದ ಜಿ.ಎಸ್.ಬಸವರಾಜ್ ಸಹ ಅವರೊಂದಿಗೆ ಸ್ನೇಹದ ಕೈ ಚಾಚಿದ್ದಾರೆ. ಈಗ ಬಣಗಳೆಲ್ಲ ಒಂದಾದಂತೆ ಕಾಣುತ್ತಿವೆ. ಇಂತಹ ಸಂದರ್ಭದಲ್ಲಿ ಪಕ್ಷದ ಚುಕ್ಕಾಣಿ ವಹಿಸಿಕೊಳ್ಳುತ್ತಿದ್ದಾರೆ.