ಜಿ.ಎನ್.ಮೋಹನ್
‘ಹಸ್ತ ಲಾ ವಿಕ್ಟೋರಿಯಾ ಸಿಯಂಪ್ರೆ’-
ಕ್ಯೂಬನ್ನರಲಿ ಕ್ಯೂಬನ್ನನಾಗಿ ಹೋಗಲು ಈ ನಾಲ್ಕು ಪದಗಳು ಸಾಕು.
ಕ್ಯೂಬಾದ ಎದೆಬಡಿತಗಳಲ್ಲಿ ಇದೂ ಒಂದು. ಕ್ಯೂಬಾದ ಗೋಡೆಗಳ ಮೇಲೆ, ಮನೆಯೊಳಗೆ, ಎಲ್ಲೆಡೆ ಇದೇ ನಾಲ್ಕು ಶಬ್ದ.
ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯನ್ನು, ದೇಶವನ್ನು ಅಗಲುವಾಗ ಬರೆದ ಪತ್ರದ ಕೊನೆಯ ಸಾಲು ಇದು.
ಆದರೆ, ಈ ಸಾಲು ಈಗ ಕ್ಯೂಬಾದ ಅತ್ಯಂತ ಬೆಲೆಯುಳ್ಳ ಸಾಲಾಗಿದೆ.
ಕ್ಯೂಬಾದಲ್ಲಿ ಫಿಡೆಲ್ ರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕ್ರಾಂತಿ ನಡೆಸಿದ ಚೆಗೆವಾರ ದಿಢೀರನೆ ಕ್ಯೂಬಾವನ್ನು ಅಗಲಿ ಬೊಲಿವಿಯಾಗೆ ತೆರಳುವ ಮುನ್ನ ಬರೆದ ಪತ್ರ ಇದು.
‘ಜಯ ಸಿಕ್ಕುವವರೆಗೆ, ಎಂದೆಂದಿಗೂ ನಿಮ್ಮವನೇ’ – ಈ ಸಾಲನ್ನು ಈಗ ಕ್ಯೂಬಾ ತನ್ನ ನಾಲಿಗೆಯ ತುದಿಯಲ್ಲಿರಿಸಿಕೊಂಡಿದೆ.
ಕ್ರಾಂತಿಗಾಗಿ ನಡೆದ ದೀರ್ಘ ಹೋರಾಟ, ಕ್ರಾಂತಿಯ ಮರುಕ್ಷಣದಿಂದಲೇ ಆರಂಭವಾದ ಅಮೆರಿಕದ ಮುನಿಸು, ದಿಗ್ಭಂಧನ, ‘ಬೇ ಆಫ್ ಪಿಗ್ಸ್’ ನಲ್ಲಿ ಜರುಗಿದ ಯುದ್ಧ, ಸದಾ ನೆತ್ತಿಯ ಮೇಲೆ ಹಾರುವ ಸಿಐಎ ವಿಮಾನಗಳು, ಸೋವಿಯತ್ ದೇಶದ ಕುಸಿತ..
ಕ್ಯೂಬನ್ನರು ಸದಾ ಹೋರಾಟಗಾರರು. ಆ ಕಾರಣಕ್ಕಾಗಿಯೇ ಜಯ ಸಿಕ್ಕುವವರೆಗೆ ಎಂಬ ಮಾತು ಕ್ಯೂಬನ್ನರಿಗೆ ಅತ್ಯಂತ ಪ್ರಿಯ.
’ಚೆ’ ಅಂದೊಮ್ಮೆ ಫಿಡೆಲ್ ಗೆ ಬರೆದ ಪತ್ರ ಇನ್ನೂ ಹೋರಾಟ ನಡೆಸುತ್ತಿರುವ ಕ್ಯೂಬಾದ ಜನತೆಗೆ ಮತ್ತೆ ಮತ್ತೆ ಸ್ಫೂರ್ತಿ ತುಂಬುವ ಚೇತನವಾಗಿದೆ.
‘ನೀವು ನನ್ನಲ್ಲಿಟ್ಟ ಅಗಾಧ ನಂಬಿಕೆಯನ್ನು ಹೊಸ ಯುದ್ಧಭೂಮಿಗಳಿಗೆ ಕೊಂಡೊಯ್ಯುತ್ತೇನೆ’ ಎಂದ ‘ಚೆ’, ಫಿಡೆಲ್ ರಿಂದ ದೂರ ಹೋದರು…
‘ಈ ಜಗತ್ತಿನ ಬೇರೆ ಭಾಗಗಳಲ್ಲಿ ನನ್ನ ಅಲ್ಪಸೇವೆಯ ಅಗತ್ಯವಿದೆ.
ಅದು ನನ್ನಿಂದ ಸಾಧ್ಯ. ನಿಮಗೆ ಆ ಅವಕಾಶವಿಲ್ಲ. ಏಕೆಂದರೆ ನಿಮ್ಮ
ಬೆನ್ನ ಮೇಲೆ ಈಗ ಕ್ಯೂಬಾದ ಜವಾಬ್ದಾರಿ ಇದೆ. ಆ ಕಾರಣಕ್ಕಾಗಿಯೇ
ಈಗ ಅಗಲುವ ಸಮಯ. ನನ್ನನ್ನು ಮಗನಂತೆ ನೋಡಿಕೊಂಡ ಕ್ಯೂಬಾದ ಜನತೆಯನ್ನು ಅಗಲುತ್ತಿದ್ದೇನೆ, ಇದು ನನಗೆ ನೋವು ತರುತ್ತಿದೆ… ಹಸ್ತ ಲಾ ವಿಕ್ಟೋರಿಯಾ ಸಯಂಪ್ರೆ -‘ಚೆ’
ಉತ್ಸವದ ಮೆರವಣಿಗೆಯಲ್ಲಿ ಸುರಿದ ಹಾಡುಗಳು, ಎಲ್ಲೆಲ್ಲೂ ಮೊಳಗಿದ ಘೋಷಣೆಯ ಅರ್ಥ ಏನು ಎಂದು ಆಗ ಗೊತ್ತಾಗಿರಲಿಲ್ಲ. ಆದರೆ ನಡುರಾತ್ರಿ ಮನೆಗೆ ಬಂದ ನಾನು ರೂಮಿನೊಳಗೆ ತಲೆಗೆ ಹೊಕ್ಕಿದ್ದ ಪದಗಳನ್ನೇ ಗುಣಗುಣಿಸುತ್ತಿದ್ದಾಗ ಬಾಗಿಲು ತಟ್ಟಿದ ಶಬ್ದವಾಯಿತು.
ತೆರೆದಾಗ ಗುಸ್ತೋ, ಓಲಿವಾ ಇಬ್ಬರೂ ನಿಂತಿದ್ದರು. ಕಣ್ಣಲ್ಲಿ ಮಿಂಚು. ಕೈಕುಲುಕಿ ಹೇಳಿದರು. ‘ಹಸ್ತ ಲಾ ವಿಕ್ಟೋರಿಯಾ ಸಿಯಂಪ್ರೆ’
ನಾನು ಗುಣಗುಣಿಸುತ್ತಿದ್ದ ಪದಗಳಿಗೆ ಅರ್ಥ ವಿವರಿಸಲು ಯತ್ನಿಸಿದರು. ‘ಇಂಗ್ಲಿಸ್’ ಕೈಕೊಟ್ಟಿತು. ತಮ್ಮ ಬಳಿ ಇದ್ದ ಪುಸ್ತಕಗಳ ಪುಟ ತಿರುವಿ ತೋರಿಸಿದರು. ಏನು ಗೊತ್ತಾಗಲಿಲ್ಲ. ಆದರೆ ‘ಚೆ’ ಚಿತ್ರ ಕಂಡಿತು.
ಉತ್ಸವದ ಸಂಕಿರಣಗಳಲ್ಲಿ, ಭಾಷಣಗಳಲ್ಲಿ, ಮೆಚ್ಚುಗೆಯನ್ನು ವ್ಯಕ್ತಪಡಿಸುವಾಗ ಹೀಗೆ ಮತ್ತೆ ಮೇಲಿಂದ ಮೇಲೆ ಕೇಳಿ ಬಂದ ಮತ್ತೊಂದು ಘೋಷಣೆ ‘ಪೇಟ್ರಿಯಾ ಓ ಮ್ಯೂರ್ಟೆ’ ‘ಸೋಷಿಯಲಿಸ್ಮೋ ಓ ಮ್ಯೂರ್ಟೆ’
ಈ ಎರಡೂ ಕ್ಯೂಬಾದ ಸೂರ್ಯ-ಚಂದ್ರರು.
ಕ್ರಾಂತಿಯ ನಂತರ ಕ್ಯೂಬಾ ಮೈ ಕೊಡವಿ ಎದ್ದು ನಿಲ್ಲಲು ಸಜ್ಜಾಗುತ್ತಿದ್ದಾಗ ಅಮೆರಿಕ ಸಂಕೋಲೆಯನ್ನು ತೊಡಿಸಲು ಆರಂಭಿಸಿತು.
‘ಸಕ್ಕರೆ ಬೇಡ, ಏನೂ ಬೇಡ’ ಎಂಬ ರಾಗ ತೆಗೆಯಿತು. ಕ್ಯೂಬಾ ಜಗ್ಗದಿದ್ದಾಗ ಬಾಂಬ್ ಎಸೆತ ಆರಂಭವಾಯಿತು. ಕ್ಯೂಬಾ ಕಂಗೆಡದೆ ಅಮೆರಿಕವನ್ನು ಬಗ್ಗುಬಡಿಯಲು ಶಸ್ತ್ರಾಸ್ತ್ರಗಳನ್ನು ಕೊಡುವ ದೇಶಗಳನ್ನು ಹುಡುಕಿ ಹೊರಟಿತು.
ಫ್ರೆಂಚ್ ನೌಕೆಯೊಂದರಲ್ಲಿ ಬಂದ ಶಸ್ತ್ರಾಸ್ತ್ರಗಳನ್ನು ಹವಾನಾದ ಬಂದರಿನಲ್ಲಿ ಇಳಿಸುತ್ತಿದ್ದಾಗ ದಿಢೀರ್ ಬಾಂಬ್ ಸ್ಫೋಟವಾಯಿತು. ನೂರಕ್ಕೂ ಹೆಚ್ಚು ಜನ ಛಿದ್ರವಾದರು.
ಇಡೀ ಕ್ಯೂಬಾ ಮಮ್ಮುಲಮರುಗಿತು. ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಜನಸಾಗರದ ಸತ್ತವರಿಗಾಗಿ ಶೋಕ ಮೆರವಣಿಗೆ ನಡೆಸಿತು.
ನೋವಿನಿಂದ ಭಾರವಾಗಿದ್ದ ಹೃದಯವನ್ನು ಹೊತ್ತ ಫಿಡೆಲ್ ಕ್ಯಾಸ್ಟ್ರೋ ಅಮೆರಿಕದ ಸಿಐಎ- ಪೆಂಟಗನ್ ಈ ದಾಳಿ ನಡೆಸಿದೆ ಎಂದು ಜನರಿಗೆ ತಿಳಿಸಿ ಹೇಳಿದರಲ್ಲದೆ ‘ತಾಯ್ನಾಡು ಇಲ್ಲವೇ ಸಾವು’- ‘ಪೇಟ್ರಿಯಾ ಓ ಮ್ಯೂರ್ಟೆ’ ಎಂದು ಘೋಷಿಸಿದರು.
ಅದೇ ಮುಂದೆ ಪ್ರಸಿದ್ಧ ಘೋಷಣೆಯಾಯಿತು.
ಕ್ಯೂಬಾ ಬದಲಾವಣೆಯ ಹರಿಕಾರನಾಯಿತು. ಒಂದೊಂದೇ ಹೆಜ್ಜೆ ಸಾವಿರಾರು ಜನರಿಗೆ ಹೊಸ ಬೆಳಕು ನೀಡಿತು. ಕೃಷಿ ಭೂಮಿ ಉಳುವವರಿಗೆ, ನೊಂದವರಿಗೆ ಸಿಕ್ಕಿತು. ಮನೆ ಇಲ್ಲದವರು ಮನೆಯೊಳಗೆ ಸೇರಿದರು. ಕೈಗಾರಿಕೆಗೆ ಕಾರ್ಮಿಕರನ್ನು ಕೂಗಿ ಕರೆದವು.
ಹವಾನಾದ ಕ್ರಾಂತಿ ಚೌಕದಲ್ಲಿ ಫಿಡೆಲ್ ಘೋಷಿಸಿದರು. ‘ಸೋಷಿಯಲಿಸ್ಮೋ ಓ ಮ್ಯೂರ್ಟೆ’- ‘ಸಮಾಜವಾದ ಇಲ್ಲವೇ ಸಾವು’
ಇದರೊಂದಿಗೆ ಮತ್ತೊಂದು ದನಿ ಇದೆ. ಕ್ಯೂಬನ್ನರು ಪ್ರತೀ ಬಾರಿ ಸಂಕಷ್ಟಗಳ ಪ್ರವಾಹ ಬಂದಾಗಲೆಲ್ಲಾ ಹಿಡಿದ ಹುಲ್ಲುಕಡ್ಡಿ ಅದು.
ಈ ಹುಲ್ಲುಕಡ್ಡಿಯೇ ಕ್ಯೂಬಾದ ಪ್ರತಿಯೊಬ್ಬರನ್ನು ತನ್ನ ಮೇಲೆ ಕೂರಿಸಿಕೊಂಡು ಹೊಸ ದಾರಿ ಹುಡುಕುತ್ತಾ ನಡೆದಿದೆ.
ಅದೇ ‘ವೆನ್ಸಿರಿಮೋಸ್’- ‘ವಿ ಶಲ್ ಓವರ್ ಕಂ’ – ಗೆದ್ದೇ ಗೆಲ್ಲುವೆವು.
‘ಗೆದ್ದೇ ಗೆಲ್ಲುವೆವು’ ಎಂಬ ಭಾವ ಕೂಗಿ ಹೇಳಬೇಕಾಗಿದ್ದಿಲ್ಲ. ಕ್ಯೂಬನ್ನರ ಪ್ರತಿ ಮುಖದಲ್ಲೂ ಈ ಘೋಷಣೆ ಫಳಫಳ ಹೊಳೆಯುತ್ತಿದೆ. ಪ್ರತಿಯೊಬ್ಬರೂ ಅಚಲವಿಶ್ವಾಸಿಗಳು. ಅವರಿಗೆ ಚೆನ್ನಾಗಿ ಗೊತ್ತು- ‘ನಾವು ಗೆದ್ದೇ ಗೆಲ್ಲುವೆವು’.
ಇದು ಕ್ಯೂಬನ್ನರಿಗೆ ಕೇವಲ ಹುಸಿ ಭರವಸೆಯಲ್ಲ. ಏಕೆಂದರೆ, ಪ್ರತಿ ಬಾರಿಯೂ ಅವರು ಗೆದ್ದು ಬಂದಿದ್ದಾರೆ. ನಿನ್ನೆ, ಇಂದು ಗೆದ್ದು ಬಂದಿದ್ದಾರೆ ಅಂತೆಯೇ ನಾಳೆ ಗೆದ್ದೇ ಗೆಲ್ಲುವೆವು ಎಂಬ ಆಶಯ ಹುದುಗಿಸಿಟ್ಟುಕೊಂಡಿದ್ದಾರೆ.
ಫಿಡೆಲ್ ಕ್ಯಾಸ್ಟ್ರೋ 1960ರಲ್ಲಿ ಸಮ್ಮೇಳನವೊಂದರಲ್ಲಿ ಮಾತನಾಡುತ್ತಾ, ‘ಯಾವ ಬೆಲೆ ತೆರಬೇಕಾಗಿ ಬಂದರೂ ಸರಿಯೇ ನಮ್ಮ ಜನತೆ ಗೆದ್ದೇ ಗೆಲ್ಲುತ್ತಾರೆ. ಏಕೆಂದರೆ, ಈ ದೇಶದ ಜನತೆಗೆ ಧೈರ್ಯವಿದೆ, ದೇಶಪ್ರೇಮವಿದೆ, ಇಂತಹ ಪ್ರತಿಜ್ಞೆ ಕೈಗೊಳ್ಳುವ ಏಕತೆ ಇದೆ…’
‘..ಏಕೆಂದರೆ, ಪ್ರತಿಯೊಬ್ಬರೂ ತಾಯ್ನಾಡು ಇಲ್ಲವೇ ಸಾವು ಎಂದು ಘೋಷಿಸಿದ್ದಾರೆ. ನಮ್ಮೆಲ್ಲರಿಗೂ ಇರುವ ಘೋಷಣೆ ತಾಯ್ನಾಡು ಇಲ್ಲವೇ ಸಾವು. ಆದರೆ, ಮುಂದೆ ಗೆದ್ದು ಬರಲಿರುವ ಜನತೆಗೆ ಘೋಷಣೆ ‘ವೆನ್ಸಿರಿಮೋಸ್’- ವಿ ಶಲ್ ಓವರ್ ಕಂ.’ ಎಂದು ಹೇಳಿದರು.
ಕ್ಯೂಬಾದಲ್ಲಿ ನಡೆದಾಡಿದ ಎಲ್ಲರಿಗೂ ಅರಿವಾಗುತ್ತದೆ – ಅವರು ಗೆದ್ದೇ ಗೆಲ್ಲುವರು.