ಕಳೆದ ಸಂಚಿಕೆಯಿಂದ……
ಡಾ.ಕೃಷ್ಣ ಕ್ಷಯರೋಗ ನಿವಾರಣಾ ಕಾರ್ಯದಲ್ಲಿ ತೊಡಗಿಸಿಕೊಂಡುದನ್ನು ಗುರುತಿಸಿ ಭಾರತೀಯ ಕ್ಷಯರೋಗ ಸಂಸ್ಥೆಯ ಕೇಂದ್ರ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರನ್ನಾಗಿ ಸರ್ಕಾರ ನೇಮಿಸಿತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗರ್ಭಿಣಿಯರಲ್ಲಿ ಅನಿಮಿಯಾ ನಿವಾರಣೆಗೆ ರೆಡ್‌ಕ್ರಾಸ್ ಕೈಗೊಂಡಿರುವ 12 ಬೈ 12 ಯೋಜನೆಯನ್ನು ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉಚಿತ
ರೆಡ್ ಕ್ರಾಸ್ ರಕ್ತನಿಧಿ ಮತ್ತಿತರ ಆರೋಗ್ಯಭಾಗ್ಯ ಕಾರ್ಯಕ್ರಮಗಳ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ವಿಶೇಷ ಅಭಿವೃದ್ಧಿ ಸಹಾಯಧನವನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರಾಜ್ಯ ರೆಡ್ ಕ್ರಾಸ್ ರಕ್ತನಿಧಿಯು ಮಹಿಳೆಯರಿಂದ ಅತಿಹೆಚ್ಚು ರಕ್ತವನ್ನು ದಾನವಾಗಿ ಪಡೆದುದಕ್ಕಾಗಿ 2007ರಲ್ಲಿ ‘ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಪ್ರಶಸ್ತಿ’ಯನ್ನು ಪಡೆಯಿತು. 1984ರಿಂದಲೂ ಡಾ. ಕೃಷ್ಣ ಅವರು ರೆಡ್ ಕ್ರಾಸ್ ಸಂಘಟನೆಯನ್ನು ಜನರಿಂದ ಜನರಿಗಾಗಿ ನೆರವಾಗುವ ಒಂದು ಆಂದೋಲನವನ್ನಾಗಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ.
2002ರಿಂದ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಉನ್ನತ ಹುದ್ದೆಯಾದ ಗೌರವ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಈ ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ.
ಬಹಳಷ್ಟು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಜರುಗುವಂತೆ ನಿಗಾವಹಿಸಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲೂ ದಕ್ಷ ಆಡಳಿತಗಾರರಾಗಿ, ರಚನಾತ್ಮಕ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.
ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಯಶಸ್ಸು ಕಾಣಲೇಬೇಕು ಎಂಬ ಛಲ ಇವರಲ್ಲಿದೆ. ಇವರ ಕಾರ್ಯಕ್ರಮಗಳಲ್ಲಿ ಆರೋಗ್ಯ ಮಂತ್ರಿಗಳು, ರಾಜ್ಯಪಾಲರು ಬಂದು ಭಾಗವಹಿಸಿರುವುದು ಇವರ ಸಂಘಟನಾ ಶಕ್ತಿಯನ್ನು ತೋರಿಸುತ್ತದೆ.
ಯಾವುದೇ ಗೊಂದಲ, ವಿವಾದಗಳಿಗೆ ಸಿಲುಕದೆ ಡಾ. ಡಿ. ಎಂ. ನಂಜುಂಡಪ್ಪ ನವರ ಜೊತೆಗೂಡಿ ರೇಸ್‌ಕೋರ್ಸ್‌ನ ಎದುರು ಭವ್ಯವಾದ ರೆಡ್ ಕ್ರಾಸ್ ಭವನವನ್ನು ನಿರ್ಮಿಸಿದರು. ಇದಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಸರ್ಕಾರದ ಒಪ್ಪಿಗೆ ಪಡೆದು ಒಂದು ಮಾದರಿ ರಕ್ತನಿಧಿಯನ್ನೂ ಸ್ಥಾಪಿಸಿದರು. ಹಾಗೇ ಬ್ಲಡ್ ಸೆಪರೇಷನ್ ಘಟಕಕ್ಕೂ ಸಹ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದರು.
‘ರಕ್ತದಾನ ಮಾಡಿ ಹೆಚ್ಚು ಜೀವಗಳನ್ನು ಉಳಿಸಿ’ ಎನ್ನುವ ಘೋಷಣೆಯನ್ನು ಡಾ. ಕೃಷ್ಣರವರು ಅಕ್ಷರಶಃ ಕಾರ್ಯಗತ ಮಾಡಿದ್ದಾರೆ. ಇವರು ರಕ್ತ ನೀಡುವ ಬಗ್ಗೆ ಸಲಹೆ ಮಾರ್ಗದರ್ಶನ ಮಾಡುವುದರ ಜೊತೆಗೆ ಸ್ವತಃ ಹಲವು ಬಾರಿ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ‘ರಕ್ತದಾನ ಮಾಡುವವರಿಗೆ ಸಾಮಾನ್ಯವಾಗಿ ಹೃದಯಾಘಾತವಾಗುವ ಸಾಧ್ಯತೆ ಕಡಿಮೆ’ ಎಂಬ ವೈಜ್ಞಾನಿಕ ಸತ್ಯವನ್ನು ರಕ್ತದಾನಿಗಳಿಗೆ ತಿಳಿಸುವಲ್ಲಿ ಕೃಷ್ಣರವರು ಮುಂಚೂಣಿಯಲ್ಲಿದ್ದಾರೆ.