ತುಮಕೂರು:ಜಿಲ್ಲೆಯ ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆಯ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಶಿವೋತ್ಸವದ ‘ಗಣೆ ಗೌರವ’ಕ್ಕೆ ಈ ಬಾರಿ ಜಾನಪದ ವಿದ್ವಾಂಸರಾದ ಡಾ.ಮೀರಸಾಬಿಹಳ್ಳಿ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ.
ಶಿವರಾತ್ರಿಯಂದು ಉತ್ಸವ ಇಡೀ ರಾತ್ರಿ ನಡೆಯುತ್ತದೆ.
ಡಾ.ಶಿವಣ್ಣನವರು ಕಾಡುಗೊಲ್ಲರ ಬುಡಕಟ್ಟು ಸಾಂಸ್ಕೃತಿಕ ವೀರರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅದರಲ್ಲಿಯೂ ಎತ್ತಪ್ಪ ಮತ್ತು ಜುಂಜಪ್ಪನ ಕುರಿತು ಆಳವಾಗಿ ತಳಸ್ಪರ್ಶಿ ಅಧ್ಯಯನ ಮಾಡಿದ್ದಾರೆ. ಇದುವೇ ಅವರಿಗೆ ‘ಗಣೆ ಗೌರವ’ ನೀಡಲು ಪ್ರಮುಖ ಕಾರಣ ಎಂದು ಶಿವೋತ್ಸವ ಸಮಿತಿಯ ಡಾ.ಹೊನ್ನಗಾನಹಳ್ಳಿ ಕರಿಯಣ್ಣ ಹೇಳಿದ್ದಾರೆ.
ಒಂದು ನಾಡಿನ ಸಾಂಸ್ಕೃತಿಕ ಪರಂಪರೆಯ ಮುಖ್ಯಧಾರೆಯಿಂದಾಚೆಗೆ, ಅಂದರೆ ಪರಿಧಿಯಾಚೆಗೆ ತಳ್ಳಲ್ಪಟ್ಟ ಮೌಖಿಕ ರೂಪಗಳ ಬೆನ್ನು ಹತ್ತಿ ಅವುಗಳಿಗೆ ಸಾಂಸ್ಕೃತಿಕ ಅನನ್ಯತೆ ತಂದುಕೊಡುವುದು ಡಾ.ಶಿವಣ್ಣನವರ ಪ್ರಧಾನ ಆಸಕ್ತಿಯಾಗಿದೆ.
ಜಾನಪದವನ್ನು ಶುದ್ಧಾಂಗ ಪಠ್ಯವನ್ನಾಗಿ ಗ್ರಹಿಸದೆ,ಅದನ್ನು ನಾಗರಿಕತೆ ಇತಿಹಾಸ ಸಮಾಜ ಸಂಸ್ಕೃತಿ ಆರ್ಥಿಕ ಮತ್ತು ಅಧಿಕಾರ ಸಂಬಂಧಗಳ ಮೊತ್ತವಾಗಿ ಅಧ್ಯಯನ ಮಾಡುವವರ ಸಾಲಿನಲ್ಲಿ ಡಾ.ಶಿವಣ್ಣ ಮುಖ್ಯರಾಗಿದ್ದಾರೆ.
ಪ್ರಶಸ್ತಿಯನ್ನು ಶನಿವಾರ ಶಿವರಾತ್ರಿಯ ಆಹೋರಾತ್ರಿ ಕಾರ್ಯಕ್ರಮದಲ್ಲಿ ಪ್ರದಾನಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಗೌರವದ ಪ್ರಮುಖ ಅಕರ್ಷಣೆ ಗಣೆ. ಈ ವಾದ್ಯ ಮಾಡಿಕೊಡುವುದು ಕುಂಬಾರ ಹಳ್ಳಿ ಗೊಲ್ಲರಹಟ್ಟಿ ಕುಕ್ಕುಡದಮ್ಮನ ಪೂಜಾರಿ ಈರಣ್ಣ. ಬಿದಿರಮ್ಮತಾಯಿ ಕುಕ್ಕುಡದಮ್ಮನ ಮೂಲ ನೆಲೆ ಚನ್ನಗಿರಿ ತಾಲ್ಲೂಕಿನ ಅಮ್ಮನ ಗುಡ್ಡಕ್ಕೆ ಹೋಗಿ ಬಿದಿರು ತಂದು ಈ ಬಾರಿ ಗಣೆ ಮಾಡಿದ್ದೇನೆಂದು ಈರಣ್ಣ ತಿಳಿಸಿದ್ದಾರೆ.
ಏನಿದು ‘ಗಣೆ ಗೌರವ’?:
ಶಿವೋತ್ಸವದ ಆತ್ಮದ ಸಾಂಸ್ಕೃತಿಕ ಸದ್ದೇ ಗಣೆ ಗೌರವ. ನಾಡಿನಲ್ಲಿ ಎಲೆಮರೆಕಾಯಂತಿರುವ ಪ್ರಮುಖರೊಬ್ಬರಿಗೆ ಕಂಬಳಿ ಗದ್ದುಗೆ ಮೇಲೆ ಬುಡಕಟ್ಟು ಸಂಗೀತ ವಾದ್ಯ ಗಣೆ ನೀಡಿ ಗೌರವಿಸುವುದೇ ಗಣೆ ಗೌರವ ಎಂದು ಕಾರ್ಯಕ್ರಮ ಸಂಘಟಕ, ರಂಗ ಕರ್ಮಿ ಪಿ.ಮಂಜುನಾಥ್ ತಿಳಿಸಿದ್ದಾರೆ.
ಈವರೆಗೆ ಗಣೆ ಗೌರವಕ್ಕೆ ರೈತ ನಾಯಕ ಕಡಿದಾಳು ಶಾಮಣ್ಣ, ದೇಶಿ ಪ್ರಸನ್ನ, ಪ್ರೊ. ಕಾಳೇಗೌಡ ನಾಗವರ, ವೈ ಎಸ್ ವಿ ದತ್ತ, ಡಾ. ಬಿ ಟಿ ಲಲಿತಾ ನಾಯ್ಕ್, ಕೋಟಿಗಾನಹಳ್ಳಿ ರಾಮಣ್ಣ ಅವರು ಪಾತ್ರರಾಗಿದ್ದಾರೆ.