ಕಳೆದ ಸಂಚಿಕೆಯಿಂದ…
ಡಾ ಕೃಷ್ಣ ಅವರದು ಆಕರ್ಷಕ ವ್ಯಕ್ತಿತ್ವ, ಮಟ್ಟಸವಾದ ನಿಲುವು, ತಕ್ಷಣ ಗಮನ ಸೆಳೆಯುವ ಬಟ್ಟಲು ಕಣ್ಣುಗಳು, ಗಂಭೀರ ಮುಖ, ಮಂದಸ್ಮಿತವಾದ ಮೃದು ಮಾತು ಸೌಜನ್ಯವೇ ರೂಪ ಪಡೆದಂತೆ, ಪ್ರದರ್ಶನ ಪ್ರವೃತ್ತಿಗೆ ವಿರುದ್ಧವಾದ ವ್ಯಕ್ತಿತ್ವ. ಮಾತನಾಡಿದಂತೆ ನಡೆದುಕೊಳ್ಳುವುದು ಇವರ ಮೊದಲ ಬದ್ಧತೆ.
ಒಬ್ಬ ಆಡಳಿತಗಾರನಾಗಿ ಕೃಷ್ಣ ಅವರ ಯಶಸ್ಸು ಅಡಗಿರುವುದು ಅವರು ತಳೆಯುವ ಖಚಿತ ನಿರ್ಧಾರಗಳಲ್ಲಿ. ಅವರು ಕಾರ್ಯನಿರ್ವಹಿಸುವ ಶೈಲಿಯನ್ನು ಗಮನಿಸಿದರೆ ಇದು ವೇದ್ಯ. ಯಾವುದೇ ವಿಷಯಕ್ಕಾಗಲಿ ಇವರು ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ತಕ್ಷಣವೇ ನಿರ್ಧಾರ ಪ್ರಕಟಿಸುತ್ತಾರೆ. ತಮ್ಮ ಸರಳ ಹಾಗೂ ನಿಖರ ಮಾತುಗಳಿಂದ ಕೆಲಸ ಮುಗಿಸಿ ಮತ್ತೊಂದು ಕೆಲಸಕ್ಕೆ ಹಾಜರಾಗುತ್ತಾರೆ. ಹಲವಾರು ಬಾರಿ ಒಂದೇ ತಾಸಿನಲ್ಲಿ ತಮ್ಮ ಕಚೇರಿಗೆ ಬರುವ 20- 25 ಜನರನ್ನು ಭೇಟಿ ಮಾಡಿ, ಎಲ್ಲರ ಕೆಲಸವನ್ನು ಮುಗಿಸುತ್ತಾರೆ. ಕೃಷ್ಣ ರವರು ಒಳ್ಳೆಯ ಆಡಳಿತಗಾರರು ಮುತ್ಸದ್ಧಿ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯನ್ನು ಇವರು ಕಟ್ಟುತ್ತಿರುವ ರೀತಿ ಇದಕ್ಕೆ ಉತ್ತಮ ನಿದರ್ಶನ.
ಸಂಶಯದ ಸಂದರ್ಭದಲ್ಲಿ ಅದನ್ನು ನಿವಾರಿಸುವ, ವಿವಾದದ ಸಂದರ್ಭದಲ್ಲಿ ವಿವೇಕದಿಂದ ವರ್ತಿಸುವ ,ಉದ್ವೇಗದ ಸಂದರ್ಭದಲ್ಲಿ ಸಂಯಮ ವಹಿಸುವ ಲೋಕಪ್ರಜ್ಞೆ,ಆಡಳಿತ ನಡೆಸುವವರಿಗೆ ಒಂದು ಆದರ್ಶ ಗುಣ. ವ್ಯಕ್ತಿ ದೊಡ್ಡವರಿರಲಿ, ಚಿಕ್ಕವರಿರಲಿ ಭೇಟಿ ಸಮಯವನ್ನು ನೀಡಿದರೆ ಸಮಯ ಪಾಲನೆಗೆ ಹೆಚ್ಚು ಗಮನ ಕೊಡುತ್ತಾರೆ ಒಂದು ವೇಳೆ ಭೇಟಿ ಸಾಧ್ಯವಿಲ್ಲದಿದ್ದರೆ ಮುಂಚಿತವಾಗಿ ದೂರವಾಣಿ ಕರೆ ಮಾಡಿ ಅವರಿಗೆ ತಿಳಿಸುತ್ತಾರೆ. ಇಂದು ಹೆಚ್ಚು ಜನನಾಯಕರಲ್ಲಿ ಈ ಲೋಕ ಪ್ರಜ್ಞೆ ಕಾಣಿಸುವುದಿಲ್ಲ. ಒಬ್ಬ ಗಾಂಧಿವಾದಿಗೆ ಮಾತ್ರ ಈ ರೀತಿಯ ಕಾರ್ಯವೈಖರಿ ಸಾಧ್ಯ. ಇತರರಿಗೂ ಇದು ಅನುಕರಣೀಯ.
ಪ್ರಭಾವ ಬೀರಿ ಕೆಲಸ ಕೇಳಲು ಬರುವವರನ್ನು ಮುಲಾಜಿಲ್ಲದೆ ಸಾಗ ಹಾಕುವ ಸ್ವಭಾವ ಇವರದು. ಬೇರೆಯವರನ್ನು ಮಾತನಾಡಿಸುವಾಗ ಅವರನ್ನು ನೋಯಿಸುವುದಿಲ್ಲ ಅಧಿಕಾರದಲ್ಲಿದ್ದೇನೆ ಎಂಬ ದರ್ಪ ಎಂದು ಅವರನ್ನು ಆವರಿಸಿಲ್ಲ. ಸಮಸ್ಯೆಯನ್ನು ಹೊತ್ತು ಬಂದವರಿಗೆ ಇವರೆಂದು ಬಗೆಹರಿಸದೆ ಸಲಹೆಯನ್ನು ಕೊಡದೆ ಕಳುಹಿಸಿಲ್ಲ. ಸರಳತೆಯ ಶುಭ್ರವಾದ ಖಾದಿ ವಸ್ತ್ರವನ್ನು ಧರಿಸುವ ಕೃಷ್ಣ ರವರ ಮನಸ್ಸು ಸದಾ ಸ್ವಚ್ಚ ತಿಳಿಗೊಳದಂತೆ ಇರುತ್ತದೆ. ಅದರಂತೆ ನಡೆದುಕೊಳ್ಳುತ್ತಾರೆ ಕೂಡಾ.
ಹಲವಾರು ಬಾರಿ ಚರ್ಚೆಯ ಬಿಸಿಯನ್ನು ಕಡಿಮೆಯಾಗಿಸಿ, ಅದಕ್ಕೆ ಸಾತ್ವಿಕ ರೂಪ ನೀಡಿ ಮುಂದುವರಿಸಿ, ಪರಿಹಾರವೆಂಬಂತೆ ಬೇರೊಂದು ಸೂತ್ರವನ್ನು ಮಂಡಿಸುತ್ತಾ, ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಇದನ್ನು ಪರಿಹರಿಸುತ್ತಾರೆ. ಇದು ಇವರ ನಾಯಕತ್ವದ ಅಪರೂಪ ವ್ಯಕ್ತಿ ವಿಶೇಷ ಗುಣ.
ಆಡಳಿತ ಸಂದರ್ಭದಲ್ಲಿ ಸದಾ ಶುಭ್ರವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಗಾಂಧೀಜಿಯವರ ಆದರ್ಶಗಳು, ತಂದೆಯವರ ಗುರುತನದ ಮಾತುಗಳಲ್ಲಿ ನೈತಿಕ ಶಿಸ್ತು, ಸಾರ್ವಜನಿಕ ಕೆಲಸಗಳಲ್ಲಿ ವಹಿಸುವ ಆಸ್ಥೆ, ರಾಮಕೃಷ್ಣ ಆಶ್ರಮದ ಮುನಿವರ್ಯರ ಸಾತ್ವಿಕ ಗುಣ ಅವರಲ್ಲಿ ಮೇಳವಿಸಿವೆ.
ಮುಂದುವರೆಯುವುದು……