ಪಬ್ಲಿಕ್ ಸ್ಟೋರಿ: ಮೇ-18 ರಿಂದ 4 ನೇ ಹಂತದ ಲಾಕ್ ಡೌನ್ ಮುಂದುವರೆಯಲಿದೆ. ಲಾಕ್ ಡೌನ್ ನಿಯಮಾವಳಿಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕಂಟೈನ್ಮೆಂಟ್ ಝೋನ್ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಾನೂನು ಮೀರಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಸಂಚಾರಕ್ಕೆ ಅನುಕೂಲ ಕಲ್ಪಿಸಲು ಷರತ್ತುಗಳನ್ನು ವಿಧಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ 4 ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಸದಸ್ಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಒಂದು ಬಸ್ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ ನೀಡಲಾಗಿದೆ. ಬಸ್ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಹಾಕದೇ ಇದ್ದರೆ ದಂಡ ವಿಧಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಮುಂದುವರಿಸಲು ನಿರ್ಧರಿಸಲಾಗಿದೆ. ಮೇ 31ರವರೆಗೂ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗುಜರಾತ್ ಜನತೆಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಆಟೋ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಅವರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ನಾಳೆಯಿಂದ ಮಾಲ್, ಸಿನಿಮಾ ಥಿಯೇಟರ್, ಹೋಟೆಲ್ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ರಾಜ್ಯದೊಳಗೆ ಓಡಾಡಲು ರೈಲುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹೊರ ರಾಜ್ಯಗಳಿಂದ ರೈಲೆ ಸಂಚಾರಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದರು.
ಸಲೂನ್ ತೆರೆಯಲು ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ಭಾನುವಾರ ಸಂಪೂರ್ಣ ಲಾಕ್ಡೌನ್ ಇರುತ್ತದೆ. ಬೆಳಗ್ಗೆ 7 ರಿಂದ 9 ಹಾಗೂ ಸಾಯಂಕಾಲ 5 ರಿಂದ 7ಗಂಟೆ ವರೆಗೆ ಎಲ್ಲ ಪಾರ್ಕ್ಗಳಲ್ಲಿ ಓಡಾಡಲು ಅವಕಾಶ ನೀಡಲಾಗಿದೆ. ಬಸ್ ಟಿಕೆಟ್ ಧರ ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು ಹೇಳಿದರು.