ಸುಫಿಯ ಕಾನೂನು ಕಾಲೇಜಿನಲ್ಲಿ ʼವಿದ್ಯಾರ್ಥಿ ಸಂಘ ʼ ಉದ್ಘಾಟನೆ

ಪ್ರೊ.ಕಿರಣ್ ಎಸ್.ಎನ್. ಅವರನ್ನು ಸನ್ಮಾನಿಸಲಾಯಿತು. ಡಾ.ಎಸ್.ರಮೇಶ್, ತಬಸ್ಸಮ್, ಮಮತಾ, ಸಿ.ಕೆ.ಮಹೇಂದ್ರ, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ್. ಓಬಯ್ಯ ಇದ್ದಾರೆ.
ತುಮಕೂರು: ಕಾನೂನು ಪರಿಭಾಷೆಯ ಪದಗಳು ಅವು ಹೇಗಿವೆಯೋ ಹಾಗೆಯೇ ಉಳಿಸಿಕೊಳ್ಳಲು ವಕೀಲರು, ನ್ಯಾಯಾಲಯಗಳು ಬದ್ಧತೆ ತೋರಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ. ಕಿರಣ್ ಎಸ್.ಎನ್. ಅಭಿಪ್ರಾಯಪಟ್ಟರು.
ತುಮಕೂರಿನ ಸುಫಿಯ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನಿನಲ್ಲಿರುವ ಅನೇಕ ಪದಗಳು ಮೂಲ ಇಂಗ್ಲಿಷ್ ಪದಗಳಲ್ಲ. ಗ್ರೀಕ್, ರೋಮನ್ ಪಾರ್ಸಿ, ಇಂಡಿಯನ್ ಇಂಗ್ಲಿಷ್ ಹೀಗೆ ಅನೇಕ ಭಾಷೆಗಳಿಂದ ಬಂದಿವೆ. ಈ ಪರಿಭಾಷೆಗಳ ಹಿಂದೆ ಒಂದು ನ್ಯಾಯದ ಪರಂಪರೆಯೇ ಅಡಗಿದೆ. ಈ ಪದಗಳು ಹೇಗಿವೆಯೋ ಹಾಗೆಯೇ ಉಳಿಸಿಕೊಳ್ಳಬೇಕು. ಈ ಪದಗಳನ್ನು ಲಘುವಾಗಿ ಪರಿಗಣಿಸಬಾರದು. ನ್ಯಾಯದ ಅಡಿಪಾಯವೇ ಈ ಪಾರಿಭಾಷಿಕ ಪದಗಳಲ್ಲಿ ಅಡಗಿದೆ ಎಂದು ಹೇಳಿದರು.
ಕನ್ನಡ ಭಾಷೆ ಸಾವಿರ ವರ್ಷದ ಇತಿಹಾಸವಿದೆ. ತನ್ನದೇ ಪರಂಪರ ಇದೆ. ಕನ್ನಡ ಭಾಷೆಯ ಮೇಲೆ ಯಾವ ಭಾಷೆಯೂ ಸವಾರಿ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಅನೇಕ ಶಾಸನಗಳು ಪಾಳಿ ಭಾಷೆಯಲ್ಲಿದ್ದವು. ಆ ಭಾಷೆಗಳು ಸತ್ತಿವೆ. ಜನ ಮನೆ ಮಾತಾಗಿರುವ ಕನ್ನಡ ಉಳಿದಿದೆ. ಇಂಗ್ಲಿಷ್ ಕಲಿಯುವುದರಿಂದ ಕನ್ನಡ ಮತ್ತಷ್ಟು ಶ್ರೀಮಂತವಾಗುತ್ತದೆ ಹೊರತು ಕನ್ನಡ ಕಳೆಗುಂದುವುದಿಲ್ಲ. ಇಂಗ್ಲಿಷ್ ಗೆ ತನ್ನದೇ ಆದ ಪರಂಪರೆಯೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಕನ್ನಡವನ್ನು ಪ್ರೀತಿಸಬೇಕು. ಕನ್ನಡ ಸಂಸ್ಕೃತಿಯನ್ನು ಹರಡಬೇಕು. ಆದರೆ ಸಂವಿಧಾನದ ಪ್ರಕಾರವೇ ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ. ಕನ್ನಡದ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯದೇ ಹೋದರೆ ಉನ್ನತ ಕೋರ್ಟ್ ಗಳಲ್ಲಿ ಕನ್ನಡದ ಅಸ್ಮಿತೆ ಇಲ್ಲವಾಗುತ್ತದೆ. ಇದು ಕನ್ನಡದ ಕಕ್ಲಿದಾರರ ಮೇಲೂ ಪರಿಣಾಮ ಬೀರಲಿದೆ. ಕನ್ನಡದ ಅಸ್ಮಿತೆ ಸುಪ್ರೀಂ ಕೋರ್ಟ್ ನಲ್ಲೂ ಹರಡಬೇಕು ಎಂದು ಎಚ್ಚರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ರಮೇಶ್ ಮಾತನಾಡಿ, ಕನ್ನಡ ಭಾಷೆಯ ಮೇಲೆ ಹಿಡಿತ ಇರಬೇಕು. ಸ್ಥಳೀಯ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಹೆಚ್ಚಿಸಬೇಕು. ಕನ್ನಡದ ಜತೆಗೆ ಇಂಗ್ಲಿಷ್ ಕಲಿಯುವುದರಿಂದಲೂ ಉಪಯೋಗವಿದೆ. ಉನ್ನತ ನ್ಯಾಯಾಲಯಗಳಲ್ಲಿ ಸಮರ್ಥ ವಾದ ಮಂಡನೆಗೆ ಭಾಷೆಗಳ ಮೇಲಿನ ಹಿಡಿತ ಬೇಕಾಗುತ್ತದೆ ಎಂದರು.
ಉಪ ಪ್ರಾಂಶುಪಾಲರಾದ ಟಿ.ಎಚ್.ಓಬಯ್ಯ, ಪ್ಯಾಧ್ಯಾಪಕರಾದ ಸಿ.ಕೆ.ಮಹೇಂದ್ರ, ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಮಮತಾ, ಪ್ರೊ.ತಬಸ್ಸಮ್, ನರೇಶಬಾಬು, ಸುಬ್ಬು, ಎಚ್ ಎಂಟಿ ಜಗದೀಶ ಇತರರು ಇದ್ದರು.


