” ರೂಮಿ” ಸದಾ ಕಾಡುತ್ತಾನೆ.
ಬರೇ ಪ್ರೇಮಿಗಳಿಗಲ್ಲ.
ತನ್ನ ವಿಶಿಷ್ಟ ಕವಿತೆಗಳಿಂದ.
ಮಳೆ ಬಗ್ಗೆ “ರೂಮಿ” ಏನು ಹೇಳಿರಬಹುದೆಂದು
ಹುಡುಕಿದರೆ …. ಯಾರಿಗೂ ಕಾಣದ ಮಳೆ
“ರೂಮಿ”ಗೆ ಕಾಣಿಸಿದೆ. ಆ ಶಕ್ತಿಯ ಇರುವನ್ನು
ಮಳೆ ಮೂಲಕ ಅರಿಯಬಹುದು.
ದಟ್ಟವಾದ ಮೋಡಗಳೆ
ಹೆಚ್ಚಿನ ಮಳೆ ಸುರಿಸುತ್ತವೆ.
ದೇವರು ಹಾಗೆಯೇ …..
ದುಃಖದ ನಂತರ
ಹೂಮಳೆ .
ಮಳೆ- ಮಳೆಯೇ ಆಗಿರಬೇಕು
ಎಂದು ಏನೂ ಇಲ್ಲ…
ಆಗಸದಲ್ಲಿ ಕಿನ್ನರಿಯರು
ಅಳುತ್ತಿರಬಹುದು.
ಪದಗಳು ಮಾತಾಡಬೇಕು…
ಏರಿದ ಧ್ವನಿಯಲ್ಲ.
ಗುಡುಗಿನಿಂದ ಹೂವು ಅರಳುವುದಿಲ್ಲ…
ಮಳೆ
ಸುರಿಯಬೇಕು.
ಸ್ನೇಹಿತರು ಹೇಗಿರಬೇಕು
ಎಂದರೆ…
ಬಿದ್ದ ಮಳೆಗೆ
ಒಂದು ಹೂವು ಇನ್ನೊಂದನ್ನು
ಅರಳಿಸಿದ ಹಾಗೆ.
ಮಳೆ ಬಾರದಿದ್ದರೆ
ಸುಡುವ ಸೂರ್ಯ
ಬಳ್ಳಿ ಚಿಗುರನ್ನು
ಸುಟ್ಟಾಕುತ್ತಿದ್ದ.
ಮಳೆಯಲ್ಲಿ ನೆನೆದು
ಒಂದು ಲೋಟ ಕಾಫಿ ಹಿಡಿದು
ಸಣ್ಣಗೆ ಹಾಡುವವರೂ …
ಈ ವಿಶ್ವಕ್ಕೆ
ತಮ್ಮದೆ ಕೊಡುಗೆ
ನೀಡುತ್ತಿದ್ದಾರೆ.
“ಜ್ಞಾನ “… ಹೇಗೆಂದರೆ ‘ಧೋ’ ಎಂದು
ಸುರಿಯುವ
ಮಳೆಗೆ ನೀನು ಇಟ್ಪ
ಪಾತ್ರೆಯ ಹಾಗೆ..
ಅಷ್ಟೇ ತುಂಬುತ್ತದೆ.
ನೆನೆಯ ಬೇಕು,
ನೀಲಿ ಆಕಾಶ
ನೆನೆದ ಹಾಗೆ
ಮತ್ತೆ ಹಗುರಾಗಿ….
ತೊಟ್ಟು ಮಳೆ
ಹೀರಿ,ಹಿಂಗಿ
ಬಸಿರಾಗಿ… ಭೂಮಿ
ಘಮಘಮ..
ನಿನ್ನ ಅರಿವಿನ ಹಸಿವು ಹೇಗಿರಬೇಕೆಂದರೆ….
ಮಳೆಗೆ ಬಾಯ್ತೆರೆದ
ಚಿಪ್ಪಿನ ಹಾಗೆ….
ಆರ್ಕಿಡ್ ಹೂ ಮಳೆಗೆ ಅರಳಿದ ….ಹಾಗೆ.
ನೀರಿನ ಸದ್ದು
ದಾಹ ಆದವನಿಗೆ ಕೇಳಿಸಿದ ….ಹಾಗೆ.
ದಟ್ಟ ಇರುಳು
ನಡು ರಾತ್ರಿ
ಸುರಿಯುವ ಮಳೆ
ನಿನ್ನ
ಇರುವನ್ನು
ಇನ್ನಷ್ಟು
ಖಾತ್ರಿ
ಗೊಳಿಸುತ್ತಿದೆ.
ಡಾII ರಜನಿ
(“ರೂಮಿ ” ಮಳೆ ಬಗ್ಗೆ ಹೇಳಿರುವದರ
ಭಾವಾನುವಾದ).