ನೀ ಹೆತ್ತಿರುವೆಯಂತೆ…?
ಎಲ್ಲರೂ ಬರುವರು
ಮಗುವ ನೋಡಲು…
ಛೆ
ಮಗೂಗೆ
ಏನು ಗೊತ್ತು ನನ್ನ ಸಂಕಟ…
ಹಾಲು ಕುಡಿದು
ಮಲುಗುವುದ ಬಿಟ್ಟು …
ನನ್ನ ನೋವು
ಕೇಳ ಬಾರದೆ
ನೀವು ?
ಎದೆ ಹಾಲು
ಬಾರದ ಭಯ
ಎದೆ ಭಾವು
ತಂದ ನೋವು
ಎದೆ ತೊಟ್ಟು
ಕೊಟ್ಟಾಗಲೆಲ್ಲ
ಕಿಬ್ಬೊಟ್ಟೆ ಕಿವುಚಿ
ಹೊಟ್ಟೆ ಖಾಲಿ
ಖಾಲಿ ..
ಕೈ ತುಂಬಾ ಮಗು..
ಬಿಡು ಬೀಸು ಇದ್ದ
ನನಗೆ
ಮಗುವೆಂಬ… ಜತನ..
ರಕ್ತ ಬಸಿದು
ಹೆತ್ತದ್ದು ನಾನೇ?
ಕೂರಲೂ ಆಗದೆ
ಹೇಳಲೂ ಆಗದೆ
ಹಾಲು ಊಡಿಸಿ
ಲಾಲಿ ಹಾಡುವ ಜವಾಬುದಾರಿ.
ಮರೆತು ಎಲ್ಲ
ಮಗುವ ತಬ್ಬಲು
ಏನೋ ತುಮುಲ
ಕೇಳೇ ಅಮ್ಮ
ಇದ್ಯಾವ ಹೊರೆ ನನಗೆ…
ನಿನಗೂ
ಹೀಗೆ ಆಗಿತ್ತೇನೆ?
ಬಾರೆ ಸಂತೈಸು
ನನ್ನನು..
ನೀಗ ಬಾರೆ
ಮನದ ದುಗುಡವನ್ನು…
ಮಗು ಹೆತ್ತದ್ದು
ನಾನಲ್ಲವೇನೆ??
ಹೆತ್ತ ಮಗುವಿಗಿಂತ
ಹೆಚ್ಚಲ್ಲವೇನೆ?
ನಾ ತಾಯಾದ
ಗಳಿಗೆ….
ಹೊತ್ತಿರುವೆ
ಹೆಚ್ಚು ಭಾರ. .
ಹೊಟ್ಟೆ ಇಳಿಸಿದರೇನೆ??
ಹೊರ ಬೇಕಲ್ಲವೇ
ಮಗುವನ್ನು
ಎದೆ ತುಂಬ
ಮನದ ತುಂಬಾ
ಹೃದಯ ತುಂಬಾ
..ನನ್ನ ಕರುಳ ಬಳ್ಳಿ
ಹರಿಯುವ ತನಕ…
ಸಹಕರಿಸಿರೇ
ಅಕ್ಕ ತಂಗಿಯರೇ
ಕಂದನ ಕಾಯಲು .