ತುಮಕೂರು:
25 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಕೊರಟಗೆರೆ ಪೊಲೀಸರು ಕಡೆಗೂ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಮೂಲಕ ಹಲವು ವರ್ಷಗಳ ಪ್ರಕರಣ ಅಂತ್ಯ ಕಂಡಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕರಕಲಘಟ್ಟದಲ್ಲಿ 1994 ಡಿಸೆಂಬರ್ 1ರಂದು ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು.
ಆರೋಪಿಯ ಹೆಸರು ಗೊತ್ತಿದ್ದರೂ ಪೊಲೀಸರು ಬಂಧಿಸಲು ಸಾಧ್ಯವಾಗಿರಲಿಲ್ಲ. 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖತರ್ನಾಕ್ ಆರೋಪಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಕೊಲೆಯಾದ ಮಹಿಳೆಯನ್ನು ಅದೇ ಗ್ರಾಮದ ಈರಮಲ್ಲಮ್ಮ ಎಂದು ಗುರುತಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಕೊರಟಗೆರೆ ಪೊಲೀಸರು ಪರಿಶೀಲನೆ ನಡೆಸಿ, ಸ್ಥಳೀಯರ ಮಾಹಿತಿ ಪ್ರಕಾರ ಅದೇ ಗ್ರಾಮದ ಸಿದ್ದಹನುಮಯ್ಯ ಕೆಎಎಸ್ ಎಂಬ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.
ನಂತರ ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಪತ್ತೆಯಾಗದ ಕಾರಣ ತಲೆ ಮರೆಸಿಕೊಂಡಿದ್ದಾನೆ ಎಂದು 1997ರಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.
25 ವರ್ಷಗಳ ಬಳಿಕ ಪ್ರಕರಣಕ್ಕೆ ಮರು ಜೀವ..!
ಕಳೆದ ಒಂದು ವರ್ಷದ ಹಿಂದೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದ ಡಾ.ಕೆ.ವಂಶಿಕೃಷ್ಣ ಈಚೆಗೆ ಕೊರಟಗೆರೆ ಪೊಲೀಸ್ ಠಾಣೆಗೆ ಭೇಟಿ ನೀಡಿ, ದೀರ್ಘ ಕಾಲದಿಂದ ಬಾಕಿ ಇರುವ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಈ ವೇಳೆ ಕರಕಲಘಟ್ಟ ಈರಮಲ್ಲಮ್ಮ ಕೊಲೆ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಸಿಪಿಐ ಎಫ್.ಕೆ.ನದಾಫ್, ಪಿಎಸ್‍ಐ ಬಿ.ಸಿ.ಮಂಜುನಾಥ್‍ಗೆ ಸೂಚಿಸಿದ್ದರು.
ಎಸ್ಪಿ ಸೂಚನೆಯಂತೆ ಪ್ರಕರಣ ಬೆನ್ನತ್ತಿ ಹೊರಟ ನದಾಫ್ ಮತ್ತು ಮಂಜುನಾಥ್ ನೇತೃತ್ವದ ತಂಡ ಆರೋಪಿ ಸಿದ್ದಹನುಮಯ್ಯನನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾದರು.
ಸಿದ್ದಹನುಮಯ್ಯ ಸಿರಾಜ್ ಆಗಿ ಬದಲಾದ…
ಪ್ರಕರಣದ ತನಿಖೆ ನಡೆಸಿದ ಸಿಪಿಐ ನದಾಫ್ ಹಾಗೂ ತಂಡಕ್ಕೆ ತುಂಬಾ ಇಂಟ್ರೆಸ್ಟಿಂಗ್ ವಿಚಾರವೊಂದು ಎದುರಾಯಿತು. ಕೆಎಎಸ್ ಅಂತಲೇ ಕರಕಲಘಟ್ಟದಲ್ಲಿ ಫೇಮಸ್ ಆಗಿದ್ದ ಸಿದ್ದಹನುಮಯ್ಯ, ಈರಮಲ್ಲಮ್ಮ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ನಂತರ ಅವಳ ಮೈಮೇಲಿದ್ದ ಚಿನ್ನಾಭರಣ ದೋಚಿ ಹಲವು ವೇಷ, ಭಾಷೆಗಳ ಮೂಲಕ ತಲೆ ಮರೆಸಿಕೊಂಡು ಮುಂಬೈ ಸೇರಿಕೊಂಡಿದ್ದ.
ನಂತರ ಬಾಂಬೆಯಲ್ಲಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿ ಆ ಬಳಿಕ ಡ್ರೈವರ್ ಜೀವನ ಸಾಗಿಸುತ್ತಿದ್ದ.
ಬಂಧನದ ಭೀತಿಯಿಂದಾಗಿ ಕರಕಲಘಟ್ಟದಲ್ಲಿದ್ದ ತನ್ನ ಹೆಂಡತಿ ಮಕ್ಕಳನ್ನು ಮರೆತು ಒಬ್ಬಂಟಿಯಾಗಿ ಅಲ್ಲೇ ಜೀವನ ಮಾಡುತ್ತಿದ್ದ.
ಕೆಲ ವರ್ಷಗಳ ಬಳಿಕ ಕೊಪ್ಪಳ ನಗರಕ್ಕೆ ಬಂದು ಸಿದ್ದಹನುಮಯ್ಯ ಬದಲಿಗೆ ಸಿರಾಜ್ ಎಂಬ ಹೆಸರು ಹೇಳಿಕೊಂಡು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ.
ನಂತರ ಕೊಪ್ಪಳದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೆಟ್ಟಹಳ್ಳಿಗೆ ಬಂದು ವಾಸವಾಗಿದ್ದ.
ಹುಟ್ಟೂರಿನ ಪ್ರೇಮ ಅಳಿಸದ ಕಾರಣ ಕರಕಲಘಟ್ಟದ ಸಂಬಂಧಿಕರ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಮೊದಲ ಪತ್ನಿ, ಮಕ್ಕಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ.
ಇದರ ಜಾಡು ಹಿಡಿದು ಹೊರಟ ಪೊಲೀಸರು ನೆಲಮಂಗಲ ಬಳಿ ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಂಡು ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಸಿದ್ದಹನುಮಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆ ಮೂಲಕ 25 ವರ್ಷಗಳ ಹಿಂದಿನ ಈರಮಲ್ಲಮ್ಮಳ ಕೊಲೆ ಪ್ರಕರಣದ ಅಂತ್ಯ ಕಂಡು ಆರೋಪಿ ಸಿದ್ದಹನುಮಯ್ಯನಿಗೆ ನ್ಯಾಯಾಂಗ ಬಂಧನವಾಗಿದೆ.
ತುಂಬಾ ಹಳೆಯ ಪ್ರಕರಣವನ್ನು ಭೇದಿಸಿದ ಸಿಪಿಐ ಎಫ್.ಕೆ.ನಧಾಫ್, ಪಿಎಸ್‍ಐ ಬಿ.ಸಿ.ಮಂಜುನಾಥ್ ಹಾಗೂ ತಂಡದ ಕಾರ್ಯ ವೈಕರಿಯನ್ನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಪ್ರಶಂಸಿ ಅಭಿನಂದಿಸಿದ್ದಾರೆ.