ಆಗಿನ್ನು ನಾನು ನಾಲ್ಕನೇ ತರಗತಿ ಓದುತ್ತಿದ್ದೆ. ಅಷ್ಟರೊಳಗಾಗಲೇ ಅಣ್ಣ ಕ್ಲಾಸ್ ಒನ್ ಕಂತ್ರಾಟುದಾರನ ಕೆಲಸ ಬಿಟ್ಟು ಆ ಊರು, ಈ ಊರು ತಿರುಗುತ್ತಿದ್ದರು.
ಪ್ರೊ. ನಂಜುಂಡಸ್ವಾಮಿಯವರ ರೈತ ಸಂಘದ ಹುಚ್ಚು ಅವರನ್ನು ಹೀಗೆ ಮಾಡಿತ್ತು. ಅವರದೊಂದು ಪಡೆ. ಈಗ ಸಾಕಷ್ಟು ಜನರು ಅಕ್ಷರಶಃ ಬೀದಿಗೆ ಬಂದಿದ್ದಾರೆ.
ರೈತ ಸಂಘದ ಹೆಸರೇಳಿಕೊಂಡು ಶ್ರೀಮಂತರಾದವರು ಇದ್ದಾರೆ. ಬೀದಿಗೆ ಬಂದವರು ಇದ್ದಾರೆ. ಹಾಗೆ, ಬೀದಿಗೆ ಬಂದವರ ಕಥನಗಳು ಎಲ್ಲೂ ದಾಖಲಾಗುವುದಿಲ್ಲ.
ಹಣ ಮಾಡುವ ಗುತ್ತಿಗೆದಾರನ ಹುದ್ದೆ ಬಿಟ್ಟ ಅಣ್ಣ, ಹಣ ಕತ್ತೆ ತಿನ್ನುವ ಪೇಪರ್. ನಾಲ್ಕು ಜನಕ್ಕೆ ಸಹಾಯ ಮಾಡಬೇಕು ಎನ್ನುತ್ತಿದ್ದರು. ಇಂಥದೇ ಆದರ್ಶ ಹೇಳುತ್ತಿದ್ದರು. ಇದೇ ಕಾರಣಕ್ಕಾಗಿಯೇ ನಾನು ಸರ್ಕಾರಿ ಹುದ್ದೆಗಾಗಿ ಬದುಕುವುದು ಅವರಿಗೆ ಬೇಕಿರಲಿಲ್ಲ.
ರೈತ ಸಂಘದ ಸರ್ಕಾರ ಬರಬೇಕು. ರೈತರಿಗೆ ಪಿಂಚಣಿ ವ್ಯವಸ್ಥೆ ಬರಬೇಕೆಂಬುದು ಅವರ ಮಹದಾಸೆ ಆಗಿತ್ತು.
ಇವೆಲ್ಲ ಒತ್ತಟ್ಟಿಗಿರಲಿ, ಈಗ ಲೆಟರ್ ವಿಷಯಕ್ಕೆ ಬರುತ್ತೇನೆ.
ಇದೇ ಚಳಿಗಾಲದ ದಿನ ಅವು. ಎದ್ದವನು ಮುಂಜಾನೆ ಸಿಮೆಂಟ್ ಕಲ್ಲಿನ ಮೇಲೆ ಕುಳಿತಿದ್ದೆ. ಯಾವುದೊ ಅಜ್ಜಿ ಸೀದಾ ಬಂತು.
ಅಂತಹ ಕೊರೆಯುವ ಚಳಿಯಲ್ಲೂ ಅಜ್ಜಿ ಅಳುತ್ತಿತ್ತು. ಮಗ, ಸೊಸೆ ಇಬ್ಬರೂ ಅಸು ನೀಗಿದ್ದರು. ಒಬ್ಬ, ಸಣ್ಣ ಮೊಮ್ಮಗನನ್ನು ಸಲುಹುವ ಬಾರ ಹೊತ್ತಿತ್ತು ಅಜ್ಜಿ.
ಅಜ್ಜಿಯ ಕತೆಯನ್ನು ನಮ್ಮಣ್ಣ ಕೇಳಿದರು. ಟೀ ಕೊಟ್ಟರು. ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ಅದೇ ಊರಿನ ಬಲಾಢ್ಯ ವ್ಯಕ್ತಿಯೊಬ್ಬ ಕಿತ್ತುಕೊಂಡಿದ್ದ.
ಅಲ್ಲಿ, ಇಲ್ಲಿ, ಅಧಿಕಾರಿಗಳು, ಪೊಲೀಸರು ಹೀಗೆಲ್ಲ ಅಲೆದಾಡುತ್ತಿದ್ದ ಅಜ್ಜಿ ಗೆ ಯಾರೋ ನಮ್ಮಣ್ಣನ ಬಗ್ಗೆ ಹೇಳಿ ಕಳುಹಿಸಿದ್ದರು.
ಈ ವಿಷಯದಲ್ಲಿ ಇಡೀ ಊರಿನಲ್ಲಿ ಅಜ್ಜಿಯನ್ನು ಬೆಂಬಲಿಸುವವರೇ ಇಲ್ಲ. ಮರು ದಿನ ನನ್ನನ್ನು ಕರೆದ ಅಣ್ಣ, ಅಜ್ಜಿಗೆ ಭೂಮಿ ಕೊಡಿಸುವ ಕೆಲಸವನ್ನು ನನಗೆ ಹಾಕಿದರು. ನಾನು ತಬ್ಬಿಬ್ಬು, ಅಳುವುದೊಂದೇ ಬಾಕಿ. ಏನೇನು ಗೊತ್ತೆ ಇಲ್ಲದ ಸಣ್ಣ ಹುಡುಗ ನಾನು.
ಅದೇ ದಿನ ರಾತ್ರಿ ಸಿ.ಎಸ್.ಪುರದಿಂದ ಬಂದವರು ಅಜ್ಜಿಯ ಕತೆಯನ್ನು ನನಗೆ ಹೇಳಿದರು. ದಾರಿಯನ್ನು ತೋರಿಸಿದರು.
ನಾಳೆ ಸಂಜೆ ನಮ್ಮ ಮನೆಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ರಾಷ್ಟ್ರ ಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ ಕಚೇರಿಗೆ ನಾನು ಬರೆದ ಅಜ್ಜಿ ಕಥೆಯ ದೂರು ಹತ್ತು ಪೈಸೆಯ ಪೋಸ್ಟಲ್ ಕಾರ್ಡ್ ನಲ್ಲಿ ರವಾನೆಯಾಯಿತು.
ಇದಾದ ಎರಡು ತಿಂಗಳ ಬಳಿಕ ಅಜ್ಜಿ ಮತ್ತೇ ಮನೆ ಮುಂದೆ ಕಾಣಿಸಿತು. ನನ್ನ ಪತ್ರಕ್ಕೆ ರಾಷ್ಟ್ರಪತಿ ಕಚೇರಿಯಿಂದ ಆದೇಶ ತಹಶೀಲ್ದಾರ್ ಕಚೇರಿಗೆ ತಲುಪಿತ್ತು. ಸ್ಥಳಕ್ಕೆ ಬಂದ ತಹಶೀಲ್ದಾರ್ ಅಜ್ಜಿಯ ಜಮೀನು ಬಿಡಿಸಿಕೊಟ್ಟಿದ್ದರು.
ಮೊಮ್ಮಗನನ್ನು ಕರೆದುಕೊಂಡು ಬಂದಿದ್ದ ಅಜ್ಜಿ ನಮ್ಮಣ್ಣನಿಗೆ ಬಾಯ್ತುಂಬಾ ಹರಸಿತು. ನಗುವಿನ ಮುಖದೊಂದಿಗೆ ವಾಪಸ್ ಆಯಿತು.
ಅಣ್ಣ ನಮ್ಮನ್ನು ಅಗಲಿ ಇಂದಿಗೆ ಹನ್ನೆರಡು ವರ್ಷ. ತೆಂಗಿನ ಮರ ಪ್ರತಿ ಗರಿ ಕಳಚಿದಾಗಲೂ ಅದರ ಗುರುತು ಬಿಡುವಂತೆ ಬದುಕಿನುದ್ದಕ್ಕೂ ಸಮಾಜಕ್ಕೆ ನಮ್ಮ ಗುರುತುಗಳನ್ನು ಬಿಡಬೇಕು. ನಮ್ಮ ಕೈ ಯಾವಾಗಲೂ ಅಸಹಾಯಕರು, ಹಸಿದವರತ್ತ ಚಾಚಿರಬೇಕು. ಅವರಿಗಾಗಿ ಬದುಕು ಸವೆಸಬೇಕು ಎಂಬ ಅವರ ಮಾತುಗಳು ಎಂದೂ ಮರೆಯದ ಮಾತುಗಳಾಗಿ ನನ್ನಲ್ಲಿ ಉಳಿದಿವೆ.
.
ಸಿ.ಕೆ.ಮಹೇಂದ್ರ