Publicstory/prajayoga
ತುಮಕೂರು: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಐಕ್ಯತೆ ಮತ್ತು ಸಮಗ್ರತೆ ಉಳಿಯುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಅಸಮಾನತೆ, ಅಸ್ಪೃಷ್ಯತೆ ರಹಿತ, ಸೌಹಾರ್ಧ ಭಾರತವನ್ನು ಕಟ್ಟಬೇಕಿದೆ ಎಂದು ಸರ್ವೋದಯ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮೇಜರ್ ಎಚ್.ನಾರಾಯಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿಜಯನಗರ ಸರ್ವೋದರ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವವಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಲವಾರು, ಭಾಷೆ,ಜಾತಿ, ಧರ್ಮಗಳ ಸಮ್ಮಿಲನವಾಗಿರುವ ಭಾರತ ಮತ್ತಷ್ಟು ಉಜ್ವಲ ಭವಿಷ್ಯ ಕಾಣಬೇಕಾದರೆ, ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಮೂಡುವಂತೆ ಮಾಡಬೇಕಿದೆ ಎಂದರು.
ಇಂದು ಇಡೀ ದೇಶವೇ ಭಾರತದ ಸ್ವಾತಂತ್ರ ದಿನದ ಅಮೃತ ಮಹೋತ್ಸವದ ಆಚರಣೆಯಲ್ಲಿ ತೊಡಗಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸುದೈವ ಎಂದು ನಾನು ಭಾವಿಸಿದ್ದೇನೆ. ದೇಶದ ಸ್ವಾತಂತ್ರಕ್ಕಾಗಿ ಒಟ್ಟಾರೆ ದೇಶದ ಶೇ5ರಷ್ಟು ಜನ ಮಾತ್ರ ಹೋರಾಟ ನಡೆಸಿದ್ದಾರೆ. ಉಳಿದ ಶೇ95ರಷ್ಟು ಜನ ಅದರ ಫಲವನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಹಿಂಸೆಯನ್ನು ತ್ಯಜಿಸಿ, ಪರಿವರ್ತನೆಯ ಕಡೆಗೆ ನಾವೆಲ್ಲರೂ ಹೆಜ್ಜೆ ಇಡಬೇಕಾಗಿದೆ ಎಂದು ಮೇಜರ್ ನಾರಾಯಣಪ್ಪ ತಿಳಿದರು.
ಸರ್ವೋದಯ ಕಾಲೇಜಿನ ನನ್ನ 35 ವರ್ಷಗಳ ಸೇವೆ ಎಂದಿಗೂ ಮರೆಯಲಾರೆ, ಜನರಲ್ ಕಾರ್ಯಪ್ಪ ನಮ್ಮ ಸಂಸ್ಥೆಯ ಎನ್.ಸಿ.ಸಿ.ತಂಡ ಕಟ್ಟಲು ಚಾಲನೆ ನೀಡಿದರು. ಅಂದಿನಿಂದ ಹಂತ ಹಂತವಾಗಿ ಉತ್ತಮ ಕಾಲೇಜಾಗಿ ಬೆಳೆದು ಬಂದಿದೆ. ಹಿರಿಯ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಆದ ಸೀತಾರಾಮ್ ಅವರು ತಾವು ಬೋಧನೆ ಮಾಡುವ ವಿಷಯದ ಜೊತೆಗೆ, ಮಕ್ಕಳಲ್ಲಿ ದೇಶ ಪ್ರೇಮ, ಪರಿಸರ ಪ್ರೇಮ ಬೆಳೆಸಲು ಹಗಲಿರುಳು ಶ್ರಮಿಸಿದ್ದಾರೆ. ಸರ್ವೋದಯ ಸಂಸ್ಥೆಯ ಸದಸ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಮೇಜರ್ ನಾರಾಯಣಪ್ಪ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಜಗದೀಶ್ ಮಾತನಾಡಿ, ನಾವೆಲ್ಲರೂ 75ನೇ ವರ್ಷದ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸುತಿದ್ದೇವೆ.ಆದರೆ ಇದುವರೆಗಿನ ಭಾರತದ ಸಾಧನೆ ಸಾಲದು, ದುಡಿಯುವ ಕೈಗಳಿಗೆ, ಅದರಲ್ಲಿಯೂ ಯುವಜನರಿಗೆ ಉದ್ಯೋಗ ದೊರಕಿಸುವಂತಹ ಗುರುತರ ಜವಾಬ್ದಾರಿಯನ್ನು ಸರ್ಕಾರಗಳು ಕೈಗೊಳ್ಳಬೇಕಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಯುವ ಅಮೇರಿಕಾ ತನ್ನ ಈ ಸಾಧನೆಗೆ 150ವರ್ಷ ತೆಗೆದುಕೊಂಡಿದೆ. ಆದರೆ ಭಾರತ 75ನೇ ವರ್ಷದಲ್ಲಿಯೇ ವಿಶ್ವದ 5ನೇ ಅರ್ಥಿಕ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಇದಕ್ಕೆ ಈ ಹಿಂದೆ ಆಳ್ವಿಕೆ ನಡೆಸಿದ ಎಲ್ಲ ಮಹನೀಯರು ಕಾರಣ. ಅವರೆಲ್ಲರನ್ನು ನಾವು ಸ್ಮರಿಸಬೇಕಿದೆ. ವಿಶ್ವದ ನಂಬರ್ 1 ಅರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಲು ನಾವೆಲ್ಲರೂ ಕಾಯಾ, ವಾಚಾ, ಮನಸ್ಸಾ ಶ್ರಮಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸೇನಾ ಮೆಡಲ್ ಪುರಸ್ಕೃತರಾದ ಹವಾಲ್ದಾರ್ ಎಂ.ಸಾಧಿಕ್ ಅವರನ್ನು ಸಂಸ್ಥೆಯ ವತಿಯಿಂದ ಹೃಪೂರ್ವಕವಾಗಿ ಅಭಿನಂದಿಸಲಾಯಿತು.75ನೇ ಸ್ವಾತಂತ್ರದ ಅಮೃತಮಹೋತ್ಸವ ಕಾರ್ಯಕ್ರಮದ ಪಥಸಂಚಲನ ಪೇರೆಡ್‌ನಲ್ಲಿ ಪಾಲ್ಗೊಂಡಿದ್ದ ಸರ್ವೊದಯ ವಿದ್ಯಾಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ 18ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪಥಸಂಚಲನದ ನೇತೃತ್ವವನ್ನು ಎನ್.ಸಿ.ಸಿ.ಜೂನಿಯರ್ ಅಂಡರ್ ಅಫೀಸರ್ ಸೂರ್ಯ ವಹಿಸಿದ್ದರು.
ವೇದಿಕೆಯಲ್ಲಿ ಸರ್ವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಸೀತಾರಾಮ್, ಜಂಟಿ ಕಾರ್ಯದರ್ಶಿ ಕೆ.ವಿ.ಸುಬ್ಬರಾವ್, ಸಂಸ್ಥೆಯ ನಿರ್ದೇಶಕರಾದ ಕೆ.ಎಸ್.ಚಂದ್ರಶೇಖರ್, ಸಿ.ವಿ.ಕೇಶವಮೂರ್ತಿ, ವರದರಾಜ ಪೈ, ಶಿಕ್ಷಕರಾದ ನಾಗರಾಜರಾವ್, ಶಂಕರಿ ಕಾಮತ್, ಜಿ.ಶ್ರೀನಿವಾಸಮೂರ್ತಿ, ವಿ.ಎಸ್.ಕಾಮಾಕ್ಷಿ,ನಾಗೇಶ್, ಗಾಯಿತ್ರಿ, ಸವಿತ, ಶ್ರೀಹರ್ಷ ಹಾಗೂ ಎನ್.ಸಿ.ಸಿ.ಅಧಿಕಾರಿ ಪ್ರದೀಪ್ ಉಪಸ್ಥಿತರಿದ್ದರು.