ತುರುವೇಕೆರೆ:
ಶಿವರಾಮ ಕಾರಂತರು ಅಳಿದ ಮೇಲೆ ಕಾದಂಬರಿಯ ಮೂಲಕ ನೀಡಿರುವ ಸಂದೇಶವಾದ ಸಮಾಜದ ಋಣ ಸಂದಾಯದ ಉತ್ತರದಾಯಿತ್ವ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ ಮೌಲ್ಯಗಳ ಶೋಧನೆ ಸರ್ವಕಾಲಕ್ಕೂ ಪ್ರಸ್ತುತವೆನಿಸುತ್ತದೆ ಎಂದು ಬದರಿಕಾಶ್ರಮದ ಚಿಂತಕ, ಶಿಕ್ಷಕ ಎಸ್.ಎನ್.ಶಂಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಚಿದಂಬರೇಶ್ವರ ಗ್ರಂಥಾಲಯದಲ್ಲಿ ಡಾ.ಕೆ.ಶಿವರಾಮ ಕಾರಂತರ ಅಳಿದ ಮೇಲೆ ಕೃತಿಯ ಪರಿಚಯ ಮಾಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಗತಿಸುವಾಗ ತಾನು ಸಮಾಜದಿಂದ ಪಡೆದದ್ದಕ್ಕಿಂತ ಹೆಚ್ಚಿನದನ್ನು ವಾಪಸ್ ಸಮಾಜಕ್ಕೆ ಕೊಟ್ಟು ಹೋಗಬೇಕು. ಹಣ,ಆಸ್ತಿಗಳು ಕೇವಲ ಬದುಕಿನ ಆಸರೆಗಳಾಗಬೇಕೇ ಹೊರತು ಅವು ಬೇರೊಬ್ಬರ ಶೋಷಣೆಯ ಮೂಲಕ ಬಂದ ಪಾಪದ ಸಂಪತ್ತಾಗಬಾರದು. ತನ್ನ ಬಳಿಯಿರುವ ದ್ರವ್ಯ ಸಮಾಜಕ್ಕೆ ಸೇರಿದ್ದು, ತಾನು ಅದನ್ನು ಕಾಯುವ ವಿಶ್ವಸ್ಥ ಪ್ರತಿನಿಧಿ ಎಂಬ ಭಾವನೆ ಬಂದಾಗಷ್ಟೇ ಸಮಾನತೆ,ಸಾಮಾಜಿಕ ಹಕ್ಕಿನ ಪ್ರಜ್ಞಾಪೂರ್ವಕ ಅರಿವುಂಟಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು ಮಾತನಾಡಿ ನಾವು ಎಷ್ಟೇ ಪ್ರಜ್ಞಾವಂತರೂ, ಬುದ್ದಿವಂತರಾಗಿದ್ದರೂ ಸಹ ನಮ್ಮ ಸಿದ್ಧಾಂತಗಳನ್ನು ಬೇರೆಯವರ ಮೇಲೆ ಹೇರಬಾರದು. ಪ್ರತಿಯೊಬ್ಬರೂ ತಾವು ಕಂಡುಕೊಂಡ ಬೆಳಕಿನಲ್ಲೇ ನಡೆಯುವ ಸ್ವಾತಂತ್ಯ್ರದ ಹಕ್ಕನ್ನು ಈ ಕಾದಂಬರಿ ಪ್ರತಿಪಾದಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎನ್.ಶಂಕರ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲ ಆನಂದರಾಜ್, ಬರಹಗಾರ ತುರುವೇಕೆರೆ ಪ್ರಸಾದ್, ಎಂ.ಎಸ್.ನಾಗರಾಜು, ಉಪನ್ಯಾಸಕಿ ರೂಪ ಶ್ರೀ, ಗ್ರಂಥಾಲಯ ಸಂಸ್ಥಾಪಕ ದಂಪತಿ ಲಲಿತಾ, ರಾಮಚಂದ್ರ, ಶರತ್, ಬದುಕು ಟ್ರಸ್ಟ್ನ ಉಮಾ ಇತರರು ಇದ್ದರು. ಕೃಷ್ಣಚೈತನ್ಯ ಕಾರ್ಯಕ್ರಮ ನಿರೂಪಿಸಿದರು.