Friday, May 17, 2024
Google search engine
Homeಸಾಹಿತ್ಯ ಸಂವಾದವಾರದ ಪುಸ್ತಕವಾರದ ಪುಸ್ತಕ: ಶೌಚಾಲಯ ತಪಸ್ವಿ- ಪರಾಕುಗಳ ಹಂಗಿಲ್ಲದೆ ಹರಿವ ಪ್ರಬಂಧಗಳ ಹೊನಲು

ವಾರದ ಪುಸ್ತಕ: ಶೌಚಾಲಯ ತಪಸ್ವಿ- ಪರಾಕುಗಳ ಹಂಗಿಲ್ಲದೆ ಹರಿವ ಪ್ರಬಂಧಗಳ ಹೊನಲು

-ಗೋವಿಂದರಾಜು ಎಂ ಕಲ್ಲೂರು ಅವರು ತುಮಕೂರು ವಿಶ್ವವಿದ್ಯಾಲಯ ದಲ್ಲಿ ಸಿನಿಮಾ ಕುರಿತು ಸಂಶೋಧನ ವಿದ್ಯಾರ್ಥಿ. ಕಥೆಗಾರರು ಹಾಗೂ ಲೇಖಕರು. ಈರಪ್ಪ ಎಂ ಕಂಬಳಿ ಅವರ ’ಶೌಚಾಲಯ ತಪಸ್ವಿ ಮತ್ತು ಇತರ ಪ್ರಬಂಧ ಪುಸ್ತಕ ಕುರಿತು ಬರೆದಿದ್ದಾರೆ.

“ಹದಿ ಹರೆಯದಲ್ಲಿ ಪದೇಪದೇ ಕಿತ್ತು ನಡುರಸ್ತೆಯಲ್ಲೇ ಮಾನ ತೆಗೆಯುತ್ತಿದ್ದ

ಹವಾಯಿ ಚಪ್ಪಲಿ ಮೆಟ್ಟಿದ ಕಾಲುಗಳೇ ಇಂದು ಮಿರಿಮಿರಿ ಮಿಂಚುವ ಬೂಟು

ತೊಟ್ಟಿರುವುದನ್ನು ಕಂಡು ಸೋಜಿಗಪಟ್ಟಿದ್ದೇನೆ!”

-ಲೇಖಕ

ಪ್ರಕಟಣೆ ವರ್ಷ : ೨೦೨೦

ಬೆಲೆ : ೨೬೦/-

ಪುಟ : ೨೭೦

ಪ್ರಕಾಶಕರು : ಪಲ್ಲವ

ಗೋವಿಂದರಾಜು ಎಂ.ಕಲ್ಲೂರು

ಪುಟ ತೆರೆಯುತ್ತಲೇ ಕಾಡುವ ಈ ಸಾಲುಗಳು ಈರಪ್ಪ ಎಂ ಕಂಬಳಿ ಅವರ ಆರನೇ ಲಲಿತ ಪ್ರಬಂಧದ ಉಪೋದ್ಘಾತ ನುಡಿಗಳು. ‘ಹೀಗೊಂದು ಟಾಪ್ ಪ್ರಯಾಣ’, ‘ಹೆದ್ದಾರಿಗುಂಟ’, ‘ಚಾಚಾ ನೆಹರು’,’ಈಚಲ ಮರ’, ‘ಹುರುಳಿಕಟ್ಟು’ ಪ್ರಬಂಧ ಸಂಕಲನಗಳ ಮೂಲಕ ನಾಡಿನಾದ್ಯಂತ ಮನ್ನಣೆ ಪಡೆದ ಕಂಬಳಿಯವರು ಲಲಿತ ಪ್ರಬಂಧಗಳಿಗಾಗಿಯೇ ತಮ್ಮ ಬಹುಪಾಲು ಬರಹ-ಬದುಕನ್ನು ಮೀಸಲಿಟ್ಟವರು.

ಇವರ ಇತ್ತೀಚಿನ ಲಲಿತ ಪ್ರಬಂಧಗಳ ಸಂಕಲನವಾದ ’ಶೌಚಾಲಯ ತಪಸ್ವಿ ಮತ್ತು ಇತರ ಪ್ರಬಂಧಗಳು’ ಎನ್ನುವ ಮುನ್ನುಡಿ ಬೆನ್ನುಡಿಗಳ ಪರಾಕುಗಳಿಲ್ಲದೆ ಓದುಗನ ಜೀವನಾನುಭವಗಳೊಂದಿಗೆ ಮಾತನಾಡುವ ಪ್ರಬಂಧಗಳೇ ತುಂಬಿ ನಿಂತ ಸಮೃದ್ಧ ಫಸಲಿನ ಚೀಲ. ಲಲಿತ ಪ್ರಬಂಧಕ್ಕೆ ಓದುಗರು ಕಡಿಮೆ, ಕಥೆ ಕವನಗಳಿಗೆ ಇರುವಷ್ಟು ’ಸ್ಪೇಸ್’ ಲಲಿತ ಪ್ರಬಂಧಗಳಿಗೆ ಇಲ್ಲವೆಂಬ ಮಿತಿಗಳ ನಡುವೆಯೂ ಇಲ್ಲಿನ ಪ್ರಬಂಧಗಳು ಅರಳಿವೆ.

ಲೇಖಕರು ತಮ್ಮ ಅರವತ್ತು ವರ್ಷಗಳ ಲೋಕಾನುಭವವನ್ನು ನಿರ್ಲಿಪ್ತವಾಗಿ ಮೆಲುಕು ಹಾಕಿದ ಪ್ರಬಂಧಗಳು ಇಲ್ಲಿವೆ. ಕಳೆದು ಹೋದ ಬಾಲ್ಯದ ಘಟನೆಗಳು, ಮಾಡಿದ ತುಂಟಾಟಗಳು, ಮಾವು, ಬೇವು, ಹುಣಸಿ, ನೇರಳೆ ಹಣ್ಣುಗಳನ್ನು ಕದ್ದು ಮುಚ್ಚಿ ಸವಿಯಲು ನಡೆಸಿದ ಪರದಾಟಗಳ, ಪಟ್ಟ ಕಷ್ಟಗಳ ದೇಸೀಯ ಅಭಿವ್ಯಕ್ತಿಯೇ ಈ ಪುಸ್ತಕ. ಇಡೀ ಪುಸ್ತಕದಲ್ಲಿರುವ ಬಾಲ್ಯದ ಕಥನಗಳ ಭಾಗಗಳನ್ನು ಆರಿಸಿ ಅನುಕ್ರಮವಾಗಿ ಜೋಡಿಸಿದರೆ ಇದು ಕಂಬಳಿಯವರ ಆತ್ಮಕಥನದ ಭಾಗವಾಗಿಯೂ ತೋರಿಬರುತ್ತದೆ.

‘ಕರಕೀ ಬೇರು’, ‘ಶೌಚಾಲಯ ತಪಸ್ವಿ’, ‘ಮನೆಯೊಳಗಾಡೋ’, ‘ಕಾಗೆ ಮತ್ತು ನಾನು’, ‘ನೀರಲಹಣ್ಣೆಂಬ ಕೃಷ್ಣ ಸುಂದರಿಯ ನೆನೆಪು’, ‘ಮೊಬೈಲ್ ಮೇನಿಯಾ’, ‘ಕೂದಲ ಸೇವೆಯೂ : ಮಡೆ ಸ್ನಾನವೂ’, ‘ಹೆಸರಿಡುವುದು’, ‘ಅಂಬಲಿ-ಕಂಬಳಿ’, ‘ಮಟ್ಟುಗಳೋ ಎಡವಟ್ಟುಗಳೋ’ ಮುಂತಾದ ಹದಿನೇಳು ಪ್ರಬಂಧಗಳಿರುವ ಈ ಪುಸ್ತಕ ತನ್ನ ಭಾಷಾ ಬಳಕೆ ಮತ್ತು ಹಾಸ್ಯ ಪ್ರಜ್ಞೆಯಿಂದ ಓದುಗರನ್ನು ಸೆಳೆಯಬಲ್ಲ ಶಕ್ತಿಹೊಂದಿವೆ.

ತಪಸ್ವಿಯೆಂದರೆ ದೇಹ-ಮನಸ್ಸು ದಂಡಿಸುತ್ತಾ ತನ್ನ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನಿಸುವವನು/ವಳು ಶೌಚಾಲಯ ತಪಸ್ವಿಯೆಂದರೆ ಮಲಬದ್ಧತೆ ಮತ್ತು ಇತರ ಕಾರಣಗಳಿಂದ ಶೌಚಾಲಯದೊಳಗೆ ಗಂಟೆಗಟ್ಟಲೆ ಕೂರುವುದು! ಇದೇ ನಿಜವಾದ ತಪಸ್ಸು ಎನ್ನುತ್ತಾರೆ ಲೇಖಕರು. ದೇವರನ್ನು ಒಲಿಸಿಕೊಳ್ಳುವ ತಪಸ್ಸು ’ನೆಂಟರನ್ನು ಕಳಿಸುವ ತಪಸ್ಸು ಎರಡೂ ಒಂದೇ’ ಎನ್ನುವ ಅದ್ವೈತ ಕಲ್ಪನೆ ಇದು!.

ಇಲ್ಲಿನ ಪ್ರಬಂಧಗಳ ಒಳಗೆ ಬರುವ ಅನೇಕ ಸಂಗತಿಗಳು ಲೇಖಕರ ಅನುಭವವೂ, ಏಕ ಕಾಲಕ್ಕೆ ಓದುಗರ ಅನುಭವವೂ ಆಗುತ್ತವೆ. ಲವಲವಿಕೆಯ ಜೀವಂತಿಕೆಯ ಭಾಷೆ, ಓದಿಸಿಕೊಂಡು ಹೋಗುವ ನಿರೂಪಣೆ, ಓದುಗ ಮಹಾಶಯರಿಗೆ ರಸಾಸ್ವಾದನೆ ಉಂಟು ಮಾಡಲೇಬೇಕೆಂಬ ಪಣ ತೊಟ್ಟಂತಿರುವ ಮೊನಚು ಭಾಷೆ, ಪ್ರಬಂಧದೊಳಗೆ ಬರುವ ಜನಪದ ನುಡಿಗಟ್ಟುಗಳು, ನೀತಿ ಕಥೆಗಳು, ಹಿರಿಯ ಕವಿಗಳ ಪದ್ಯಗಳ ಸಾಲುಗಳು ಪ್ರಸ್ತುತ ಲಲಿತ ಪ್ರಬಂಧಗಳ ಮೂಲಕ ಲೇಖಕರು ಮಂಡಿಸುತ್ತಿರುವ ಸ್ವ-ಅನುಭವಗಳಿಗೆ ಹೆಗಲುಕೊಟ್ಟು ನಿಲ್ಲುತ್ತವೆ.

ಕಂಬಳಿಯವರ ಒಳಗೊಬ್ಬ ಶ್ರದ್ಧಾವಂತ ಓದುಗನಿದ್ದಾನೆ. ಪ್ರತಿ ಪ್ರಬಂಧಗಳಲ್ಲೂ ಗಂಭೀರ ಸಂಶೋಧನೆಯ ಬಂಧ ಇದೆ. ಹಾಗಾಗಿ ಈ ಪ್ರಬಂಧಗಳೊಳಗೆ ಜನಪದ, ವಚನ ಸಾಹಿತ್ಯ, ಕೀರ್ತನಾ ಸಾಹಿತ್ಯ, ಇತಿಹಾಸ, ಪುರಾಣ ಕಥೆಗಳು, ಜನಪ್ರಿಯ ಭಕ್ತಿಗೀತೆಗಳ ಸಾಲುಗಳು, ಶಿಶುಪ್ರಾಸ ಗೀತೆಗಳು, ಹಿಂದಿ, ಕನ್ನಡ ಸಿನಿಮಾದ ಅನೇಕ ಗೀತೆಗಳ ಸಾಲುಗಳು ಪ್ರಾಸಂಗಿಕವಾಗಿದ್ದು ಪ್ರತಿ ಬಂಧಗಳ ಸೊಗಸನ್ನು ಹೆಚ್ಚಿಸಿವೆ. ರಾಹುಲ ಸಾಂಕೃತ್ಯಾಯನ, ಷೇಕ್ಸ್‌ಫಿಯರ್, ಬಸವಣ್ಣ, ನವೋದಯ, ದಲಿತ-ಬಂಡಾಯದ ಕವಿಗಳು ಇನ್ನೂ ಹಲವಾರು ಹಿರಿ ಕಿರಿಯ ಬರಹಗಾರರು ಈ ಪುಸ್ತಕದಲ್ಲಿ ಬಂದು ತಂತಮ್ಮ ಪಾತ್ರ ನಿರ್ವಹಿಸುತ್ತಾರೆ. ಈ ಪುಸ್ತಕವನ್ನು ಓದುತ್ತಾ ಕನ್ನಡದ ಮತ್ತು ಇತರ ಭಾಷೆಗಳ ಪ್ರಮುಖ ಕವಿಗಳನ್ನು ಕಾದಂಬರಿಕಾರರನ್ನೂ, ಲೇಖಕರನ್ನು ಸ್ಪರ್ಷಿಸಿದ ಅನುಭವೂ ಆಗುತ್ತದೆ. ಇದು ಸಾಧ್ಯವಾಗಿರುವುದು ಕಂಬಳಿಯವರ ಅಪಾರ ಓದಿನ ಬಲದಿಂದಲೇ ಎನ್ನಬಹುದು.

‘ಶೌಚಾಲಯ ತಪಸ್ವಿ’ ಎಂಬ ಶೀರ್ಷಿಕೆಯ ಪ್ರಬಂಧವು ಮನುಷ್ಯನ ’ದೇಹ ಧರ್ಮವು’ ಯಾವೆಲ್ಲಾ ಪಾಡು ಅನುಭವಿಸಬೇಕು ಎಂಬುದನ್ನು ತಿಳಿಸುತ್ತದೆ. ಈ ಪ್ರಬಂಧದಲ್ಲಿ ಬರುವ ಮೂಲಂಗಿಯ ಕಥೆಯನ್ನು ಓದಲೇಬೇಕು. ಇದನ್ನು ಕೇವಲ ರಂಜನೆಯ ಉದ್ದೇಶದಿಂದಷ್ಟೇ ನೋಡದೆ ಶಿವನನ್ನು ಅಪಮೌಲ್ಯಗೊಳಿಸಲು ಕಾಲವೊಂದರ ಅನ್ಯಪಂಥೀಯರು ಹೆಣೆದಿರಬಹುದಾದ ಕಥೆಯಾಗಿಯೂ ತೋರುತ್ತದೆ.

ಪ್ರಸ್ತುತ ಸಂಕಲನದಲ್ಲಿರುವ ಪ್ರಬಂಧಗಳು ಓದುಗರನ್ನು ನಗಿಸುತ್ತಾ ಸಾಗುವುದಷ್ಟೇ ಅಲ್ಲ ವೈಚಾರಿಕ ಹೊಣೆಗಾರಿಕೆಯನ್ನೂ ಸಹ ನಿರ್ವಹಿಸಿವೆ. ‘ಹೆಸರಿಡುವುದು’!’ ಎಂಬ ಪ್ರಬಂಧದಲ್ಲಿ ಇದರ ಜಾಡನ್ನು ಸ್ಪಷ್ಟವಾಗಿ ಗುರುತಿಸಬಹುದು. ಮಗುವಿಗೆ ಒಂದು ಹೆಸರಿಡುವಾಗ ನಾವು ಪಡುವ ಪರಿಪಾಟಲುಗಳನ್ನು ವಿವರಿಸುವ ಬರಹ ಇದಾಗಿದ್ದರೂ ಜ್ಯೋತಿಷಿಗಳ ಆದೇಶದಂತೆ ಹೆಸರಿಡುವುದನ್ನು ’ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಬೇಕೇ ಎಂದು ಎಂದು ಕುಟುಕುತ್ತಾರೆ. ಹುಟ್ಟಿದ ನಕ್ಷತ್ರವೇ ಬದುಕಿನ ಗತಿ ನಿರ್ಧರಿಸುವುದಾದರೆ ಒಳ್ಳೆಯ ಸಮಯನೋಡಿ ಸಿಜೇರಿಯನ್ ಮಾಡಿಸಿದವರ ಭವಿಷ್ಯವನ್ನು ಇಷ್ಟ ಬಂದಂತೆ ತಿದ್ದಬಹುದೇ ಎಂಬ ಆಲೋಚನೆಯನ್ನು ಸಹ ಈ ಪ್ರಬಂಧವು ಹುಟ್ಟಿಸುತ್ತದೆ.

ಹೀಗೆ ಇಲ್ಲಿಯ ಲಲಿತ ಪ್ರಬಂಧಗಳು ಕೇವಲ ಓಘದಿಂದಷ್ಟೇ ಸಾಗುವುದಿಲ್ಲ. ಈ ನೆಲದಲ್ಲಿ ನಡೆದ ಅನೇಕ ಪಂಥಗಳ ಮುಷ್ಟಾಮುಷ್ಟಿ ಕಾದಾಟಗಳಿಂದ ಒಂದು ದೇವರನ್ನು ಪ್ರಧಾನ ಸ್ಥಾನದಿಂದ ಕೆಳಗಿಳಿಸಲು ಮಾಡಿದ ಅಣಕದಂತೆ ಹೆಣೆದ ಜನ ಕಥನಗಳನ್ನೂ ದಾಖಲಿಸುತ್ತವೆ, ಸಂಸ್ಕೃತಿ ಚಿಂತನೆಗೂ ಹಚ್ಚುತ್ತವೆ. ಇಲ್ಲಿನ ಯಾವುದೇ ಪ್ರಬಂಧದ ಒಳ ಹೊಕ್ಕರೂ ಪುಟ್ಟ ಪ್ರಪಂಚವೇ ಮೈದಾಳಿ ನಿಲ್ಲುತ್ತದೆ. ಪೂರ್ಣ ಬದುಕಲ್ಲಿ ಸವಿಯಲೇ ಬೇಕಾದ ಅನೇಕ ಲೋಕಾನುಭವವನ್ನು ನವಿರಾಗಿ ವಿವರಿಸುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?