Tuesday, September 10, 2024
Google search engine
Homeತುಮಕೂರು ಲೈವ್ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ;ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ;ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ

Public story


ತುಮಕೂರು: ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿರುವುದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಮೆದುಳುಜ್ವರ, ಆನೆಕಾಲು ರೋಗಗಳು ಹರಡದಂತೆ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲೇರಿಯಾ, ಡೆಂಗ್ಯು, ಚಿಕುನ್ ಗುನ್ಯಾ ರೋಗಗಳ ನಿಯಂತ್ರಣ ಕ್ರಮ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜೂಮ್ ಆ್ಯಪ್ ಮೂಲಕ ಏರ್ಪಡಿಸಲಾಗಿದ್ದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸಮುದಾಯಕ್ಕೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗಳು ಹೆಚ್ಚಿನ ಅರಿವು‌ ಮೂಡಿಸಬೇಕು. ನಗರದಲ್ಲಿರುವ ಗುಂಡಿ‌ ಮತ್ತು ಕೆಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವ ಟೈರ್ ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಯಿದ್ದು, ನೈರ್ಮಲ್ಯತೆ ಕಾಪಾಡುವಲ್ಲಿ ಹೆಚ್ಚು ಜಾಗೃತರಾಗಬೇಕು. ಪಾಲಿಕೆ ಸೇರಿದಂತೆ ನಗರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರು ಸಂಗ್ರಹವಾಗುವ ಗುಂಡಿಗಳನ್ನು ಮುಚ್ಚಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಬೇಕು.‌ ಖಾಲಿ ನಿವೇಶನ ಗಳಲ್ಲಿಯೂ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರೋಗಗಳು ಉಲ್ಪಣವಾಗದಂತೆ ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.

ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ ಗುನ್ಯಾ ರೋಗಗಳ ತೀವ್ರತೆ ಇಳಿಕೆಯಾಗಿದ್ದು, 2020ನೇ ಸಾಲಿನಲ್ಲಿ 30 ಡೆಂಗ್ಯೂ, 78 ಚಿಕುಂಗುನ್ಯಾ, 6 ಮಲೇರಿಯಾ ಪ್ರಕರಣಗಳು ಹಾಗೂ 2021ಸಾಲಿನ ಮೇ ಅಂತ್ಯದವರೆಗೆ 4 ಡೆಂಗ್ಯೂ, 16 ಚಿಕುಂಗುನ್ಯಾ ಪ್ರಕರಣಗಳು ಕಂಡುಬಂದಿದೆ. ಆದರೆ, ಯಾವುದೇ ಮಲೇರಿಯಾ ಪ್ರಕರಣ ವರದಿಯಾಗಿಲ್ಲ. ದೇಶದಲ್ಲಿ 2030ನೇ ಇಸವಿಗೆ ಮಲೇರಿಯಾ ನಿವಾರಣಾ ಕಾರ್ಯಕ್ರಮದ ಗುರಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ 2025ನೇ‌‌ ಇಸವಿಗೆ ಮಲೇರಿಯಾ ನಿವಾರಣಾ ಗುರಿ ಹಮ್ಮಿಕೊಳ್ಳಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ 2022ನೇ ಇಸವಿಗೆ ಮಲೇರಿಯಾ ನಿವಾರಣಾ ಕಾರ್ಯಕ್ರಮದ ಗುರಿ ನಿಗಧಿಯಾಗಿದೆ. ಈ ಗುರಿ ಸಾಧಿಸಲು ಎಲ್ಲಾ ಇಲಾಖೆಗಳ ಪಾತ್ರ ಮುಖ್ಯವಾಗಿ ಇರಬೇಕು ಎಂದು ತಿಳಿಸಿದರು.

ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು, ಸೊಳ್ಳೆ ಉತ್ಪತ್ತಿ ತಾಣಗಳ ನಾಶ, ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ, ಉತ್ತಮ ಚರಂಡಿ ವ್ಯವಸ್ಥೆ, ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಿ ಸೊಳ್ಳೆ ಕಚ್ಚುವಿಕೆಯಿಂದ ರಕ್ಷಣೆ, ಹದಿನೈದು ದಿನಗಳಿಗೊಮ್ಮೆ ಆರೋಗ್ಯ/ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆ,‌ ಲಾರ್ವಾಹಾರಿ ಗಬ್ಬಿ ಮತ್ತು ಗ್ಯಾಂಬೂಸಿಯಾ ಮೀನುಗಳ ಬಳಕೆ, ನೀರಿನ ಶೇಖರಣಾ ಪಾತ್ರೆ/ ತಾಣಗಳನ್ನು ಸೊಳ್ಳೆಗಳು ನುಸುಳದಂತೆ ಮುಚ್ಚಿಡುವುದು, ಹೆಚ್ಚು ದಿನಗಳ ಕಾಲ ನೀರು ಶೇಖರಿಸಿದಂತೆ ನೋಡಿಕೊಳ್ಳುವುದು, ಅನಿವಾರ್ಯವೆನಿಸಿದರೆ ನೀರನ್ನು ಶೋಧಿಸಿ ಮುಚ್ಚಳ ಮುಚ್ಚಿ ಬಳಸುವುದು, ತ್ಯಾಜ್ಯ ವಸ್ತುಗಳ ವಿಲೇವಾರಿ, ವಾರಕ್ಕೊಮ್ಮೆ‌‌ ಒಣ ದಿನಾಚರಣೆ, ಸ್ವಯಂ ವೈದ್ಯಕೀಯದ ಬದಲು ಆರೋಗ್ಯ ಕಾರ್ಯಕರ್ತರ ಸಲಹೆ/ ಚಿಕಿತ್ಸೆ‌ ಸೇರಿದಂತೆ ರೋಗ ನಿಯಂತ್ರಣಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜ್ವರ ಸಮೀಕ್ಷೆ ಮತ್ತು ರೋಗ ಪತ್ತೆ, ಸಂಶಯಾಸ್ಪದ ಪ್ರಕರಣಗಳಿಂದ ರಕ್ತದ ಮಾದರಿಗಳ ಸಂಗ್ರಹಣೆ, ರೋಗ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ಚಿಕಿತ್ಸಾಲಯ/ಸಂಚಾರಿ ಚಿಕಿತ್ಸಾಲಯ ತೆರೆದು ವೈದ್ಯಕೀಯ ಸೌಲಭ್ಯ ಒದಗಿಸುವುದು, ರೋಗ ಹಾಗು ರೋಗಲಕ್ಷಣಗಳಿಗೆ ಅನುಗುಣವಾಗಿ ಸೂಕ್ತ ಚಿಕಿತ್ಸೆ, ಎಲ್ಲಾ ಗ್ರಾಮಗಳಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿ 15 ದಿನಗಳಿಗೊಮ್ಮೆ ನಿಯಮಿತವಾಗಿ ಸಮೀಕ್ಷೆ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳ ನಾಶ, ಅವಶ್ಯಕತೆಗನುಗುಣವಾಗಿ ಧೂಮೀಕರಣ ಕಾರ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.

ನಿಯಮಿತ ಹಾಗೂ ಸಮರ್ಪಕ ನೀರು ಸರಬರಾಜು, ನೀರು ಸರಬರಾಜಾಗುವ ನಲ್ಲಿ/ ಪೈಪುಗಳು ಸೋರದಂತೆ ತಡೆಗಟ್ಟುವುದು, ಕೊಳವೆ ಬಾವಿಗಳು ಹಾಗೂ ನಲ್ಲಿ ಪೈಪುಗಳು ಒಳಚರಂಡಿ ಇರುವ ಜಾಗದಿಂದ ದೂರದಲ್ಲಿರುವಂತೆ ನಿರ್ಮಿಸುವುದು, ಮೇಲ್ಛಾವಣಿಯ ತೊಟ್ಟಿ ಹಾಗೂ ನೀರು ಸರಬರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚುವ ವ್ಯವಸ್ಥೆ ಮಾಡುವುದು, ಆರೋಗ್ಯ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಗ್ರಾಮದ ನೈರ್ಮಲ್ಯತೆ ಹಾಗೂ ಗ್ರಾಮದಲ್ಲಿ ಇರಬಹುದಾದ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿ ಹಾಗೂ ಅದರ ಬಗ್ಗೆ ಚರ್ಚಿಸುವುದು, ನೀರು ಸರಬರಾಜು ಮಾಡುವ ಮೊದಲು ಸೂಕ್ತವಾದ ಪ್ರಮಾಣದಲ್ಲಿ ಕ್ಲೋರಿನ್ ಹಾಕುವ ಮೂಲಕ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಇಲಾಖಾಧಿಕಾರಿಗಳಿಗೆ ನಿರ್ದೇಶಿಸಿದರು.

ಸೊಳ್ಳೆ ಉತ್ಪತ್ತಿ ನಿಯಂತ್ರಣಗೊಳಿಸುವ ಸಲುವಾಗಿ ಮಹಾನಗರ ಪಾಲಿಕೆಗಳಲ್ಲಿ ನಾಗರಿಕ ಹಾಗೂ ಕಟ್ಟಡ ಬೈಲಾಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಸೊಳ್ಳೆ ರಹಿತ ಓವರ್ ಹೆಡ್ ಟ್ಯಾಂಕ್ ಹಾಗೂ ಅಂಡರ್ ಗ್ರೌಂಡ್ ಟ್ಯಾಂಕ್ ಗಳನ್ನು ನಿರ್ಮಿಸುವಂತೆ ಅಗತ್ಯ ನಿಯಮಗಳನ್ನು ಜಾರಿಗೊಳಿಸುವುದು, ವಾರಕ್ಕೊಮ್ಮೆ ಸೊಳ್ಳೆ ನಾಶದ ದ್ರಾವಣವನ್ನು ಸೊಳ್ಳೆ ಉತ್ಪತ್ತಿ ತಾಣಗಳಿಗೆ ಸಿಂಪಡಿಸುವುದು, ನೀರು ಸರಬರಾಜು ಪೈಪುಗಳನ್ನು ಆಗಿಂದಾಗ್ಗೆ ಪರೀಕ್ಷಿಸುವುದರ ಮೂಲಕ ಸೋರಿಕೆಯನ್ನು ತಡೆಗಟ್ಟುವುದು, ನಗರದಲ್ಲಿರುವ ಉದ್ಯಾನವನಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಹಾಕುವುದು, ಸಮರ್ಪಕ ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವುದು ಮತ್ತು ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು, ಸೊಳ್ಳೆ ಉತ್ಪತ್ತಿಗೆ ಕಾರಣವಾದ ಖಾಲಿ ನಿವೇಶನಗಳ ವಿವರ ಮತ್ತು ಅದರ ಮಾಲೀಕರಿಗೆ ಸ್ವಚ್ಛತೆ ಕಾಪಾಡಲು ನೋಟೀಸ್ ನೀಡುವ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.

ಶಿಕ್ಷಣ ಇಲಾಖೆಯ ಕಾರ್ಯಚಟುವಟಿಕೆಗಳು ಪ್ರಾರಂಭವಾದ ಬಳಿಕ ಶಾಲಾ-ಕಾಲೇಜುಗಳಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್ ಗಳನ್ನು ಭದ್ರವಾಗಿ ಮುಚ್ಚಬೇಕು. ನಿಯಮಿತವಾಗಿ ಅವುಗಳನ್ನು ಸ್ವಚ್ಛಗೊಳಿಸಬೇಕು. ಶಾಲೆಯ ಸುತ್ತಮುತ್ತ ಲಾರ್ವಾ ಉತ್ಪತ್ತಿ ತಾಣಗಳು ಕಂಡುಬಂದಲ್ಲಿ ಆರೋಗ್ಯ ಸಹಾಯಕರು/ಆಶಾ ಕಾರ್ಯಕರ್ತರಿಂದ ಲಾರ್ವಾನಾಶಕ‌ ದ್ರಾವಣ ಹಾಕಿಸಬೇಕು ಮತ್ತು ಸ್ವಚ್ಛತೆ ಕಾಪಾಡಬೇಕು. ಶಾಲೆಯಲ್ಲಿ ಯಾವುದೇ ಜ್ವರ ಪ್ರಕರಣಗಳು ಇದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು ಹಾಗೂ ಸಾಮೂಹಿಕ ಜ್ವರ ಪ್ರಕರಣಗಳು ಕಂಡುಬಂದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು. ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಶಾಲಾ ಮಕ್ಕಳಿಗೆ ಪ್ರಾರ್ಥನಾ ಸಮಯದಲ್ಲಿ ಲಾರ್ವ ಪ್ರಾತ್ಯಕ್ಷತೆ ಮತ್ತು ಆರೋಗ್ಯ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯು ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ವಸತಿ ನಿಲಯಗಳಲ್ಲಿ ಟ್ಯಾಂಕ್ ಮತ್ತು ಸಂಪುಗಳನ್ನು ಭದ್ರವಾಗಿ ಮುಚ್ಚಬೇಕು ಮತ್ತು ಅವುಗಳನ್ನು ಸ್ವಚ್ಛಗೊಳಿಸಬೇಕು. ವಸತಿಗೃಹಗಳ ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು. ಹಾಸ್ಟೆಲ್ ಆವಣದಲ್ಲಿ ಪರಿಸರ ನೈರ್ಮಲ್ಯ ಕಾಪಾಡಬೇಕು. ಅಂತೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಪೂರ್ಣವಾಗಿ ತನ್ನ ಕಾರ್ಯಚಟುವಟಿಕೆಗಳು ಆರಂಭವಾದ ಬಳಿಕ ತಾಯಂದಿರ ಸಭೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಬೇಕು. ಅಂಗನವಾಡಿ ಕೇಂದ್ರದ ಮಕ್ಕಳಲ್ಲಿ ಜ್ವರ ಪ್ರಕರಣಗಳು ಕಂಡುಬಂದರೆ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕು. ಅಂಗನವಾಡಿ ಕೇಂದ್ರದಲ್ಲಿ ನೀರು ಶೇಖರಿಸುವ ಮತ್ತು ಡ್ರಮ್, ತೊಟ್ಟಿ ಮತ್ತು ಸಂಪುಗಳನ್ನು ಭದ್ರವಾಗಿ ಮುಚ್ಚಬೇಕು ಎಂದು ಸೂಚಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪುರುಷೋತ್ತಮ್ ಮಾತನಾಡಿ,‌ ರೋಗಗಳ ಲಕ್ಷಣಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?