ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸುವ ಆಶಯದಿಂದ ಹೋಬಳಿ ಮಟ್ಟ ಗ್ರಾಮ ಪಂಚಾಯಿತಿಗಳ ಪ್ರಮುಖರು, ಸಂಘಸಂಸ್ಥೆಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರನ್ನೊಳಗೊಂಡ ಮಹಾಸಭೆಯನ್ನು ದಬ್ಬೇಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆ.13ರಂದು ನಡೆಸಲು ಆಯೋಜಿಸಲಾಗಿದೆ ಎಂದು ಕ.ಸಾ.ಪ ದಬ್ಬೇಘಟ್ಟ ಹೋಬಳಿ ಘಟಕದ ಅಧ್ಯಕ್ಷ ಕೆ.ಟಿ ಸಂಪತ್ತು ತಿಳಿಸಿದ್ದಾರೆ.
ಈ ಬಾರಿ ದಬ್ಬೇಘಟ್ಟ ಹೋಬಳಿಯಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಕನ್ನಡದ ಥೇರು ಎಳೆಯಲು ಪ್ರತಿಯೊಬ್ಬ ಕನ್ನಡಿಗರೂ ಉತ್ಸುಕರಾಗಿದ್ದು ಕಾರ್ಯಕ್ರಮದ ಒಟ್ಟಾರೆ ರೂಪುರೇಷೆಗಳ ಸಿದ್ದತೆಗೆ ಸರ್ವರಿಂದಲೂ ಸಲಹೆ ಮಾರ್ಗದರ್ಶನ ಪಡೆಯಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಬೆಳಗ್ಗೆ 10ಗಂಟೆಗೆ ಸಭೆ ಕರೆಯಲಾಗಿದೆ.
ಪ್ರಮುಖ ಸಭೆಗೆ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಪ್ರತಿನಿಧಿಗಳು, ಹಿರಿಯರು, ಕೃಷಿ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು, ಸಿಬ್ಬಂದಿಗಳು, ಹಾಲು ಉತ್ಪಾದಕ ಸಹಕಾರ ಸಂಘದ ಪದಾಧಿಕಾರಿಗಳು, ಸಿಬ್ಬಂದಿ, ಶಾಲಾ ಮತ್ತು ಕಾಲೇಜುಗಳ ಶಿಕ್ಷಕವೃಂದ, ಯುವ ಕನ್ನಡ ಪ್ರೇಮಿಗಳು, ಸಮಸ್ತ ಸಾರ್ವಜನಿಕರು ತಮ್ಮ ತಮ್ಮ ಸಂಗಡಿಗರೊಡನೆ ಪ್ರತಿ ಗ್ರಾಮದಿಂದ ಕನಿಷ್ಠ ಐದಾರು ಮಂದಿ ಕ್ರಿಯಾಶೀಲ ವ್ಯಕ್ತಿಗಳೊಡನೆ ಸಕಾಲಕ್ಕೆ ಆಗಮಿಸಿ, ಸಮಿತಿರಚನೆ, ಸ್ಥಳ, ದಿನಾಂಕ ನಿಗಧಿ, ಸಂಪನ್ಮೂಲ ಕ್ರೋಢೀಕರಣ, ಸಮಗ್ರ ನಿರ್ವಹಣೆ ಮುಂತಾದ ಪ್ರಧಾನ ಅಂಶಗಳ ಬಗ್ಗೆ ಚರ್ಚೆ ಮಾಡಬೇಕಿದ್ದು ನಿಮ್ಮೆಲ್ಲರ ಆಗಮನ ಅಗತ್ಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.