ತುರುವೇಕೆರೆ: ಪಟ್ಟಣದ ದಿ ಟೌನ್ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಾಗರಿಕ ವೇದಿಕೆ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ.
ಸಹಕಾರ ಸಂಘದ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳು ನಾಗರಿಕ ವೇದಿಕೆಯ ತೆಕ್ಕೆಗೆ ಬಂದರೆ ಉಳಿದ 2 ಸ್ಥಾನಗಳು ತಾಳ್ಕೆರೆ ಸುಬ್ರಹ್ಮಣ್ಯಂ ವೇದಿಕೆಯ ಪಾಲಾಗಿವೆ.
ಸಂಘದ ಆಡಳಿತ ಮಂಡಳಿಗೆಯ 13 ಸ್ಥಾನಗಳಿಗಾಗಿ 27 ಮಂದಿ ಸ್ಪರ್ಧಿಸಿದ್ದರು. ಅದರಲ್ಲಿ ಸಾಮಾನ್ಯ 7, ಮಹಿಳಾ ಮೀಸಲು 2, ಹಿಂದುಳಿದ ವರ್ಗ ಎ ಮತ್ತು ಬಿ, ಪರಿಶಿಷ್ಠ ಜಾತಿ, ಪರಿಶಿಷ್ಠ ಜಾತಿಗೆ ತಲಾ ಒಂದು ಸ್ಥಾನ ಮೀಸಲಾಗಿತ್ತು.
ಇವುಗಳ ಪೈಕಿ ಸಾಮಾನ್ಯ ವರ್ಗದಿಂದ ಎನ್.ಆರ್.ಸುರೇಶ್ (664) ಮತಗಳು, ಎಚ್.ಆರ್.ರಾಮೇಗೌಡ (593), ಟಿ.ಎನ್.ಶಿವರಾಜ್ (534), ಯಜಮಾನ್ ಟಿ.ಪಿ.ಮಹೇಶ್ (512), ಜೆ.ಚಂದ್ರಶೇಖರ್ (508), ಟಿ.ಎಂ.ಮಂಜಣ್ಣ (488), ಸಿ.ಎನ್.ಮಲ್ಲಿಕಾರ್ಜುನ್ (479) ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಮಹಿಳಾ ಮೀಸಲು ಕ್ಷೇತ್ರದಲ್ಲಿ ಅನುಸೂಯ (516), ವಿದ್ಯಾಕೃಷ್ಣ (437) ಮತಗಳನ್ನುಗಳಿಸಿ ಜಯಶಾಲಿಯಾದರು. ಹಿಂದುಳಿದ ಪ್ರ ವರ್ಗ ಎ ಯಿಂದ ಸಿ.ಆನಂದ್ ಕುಮಾರ್ (508) ಮತಗಳನ್ನು ಗಳಿಸಿದರೆ, ಹಿಂದುಳಿದ ಪ್ರವರ್ಗ ಬಿ ಯಿಂದ ಸ್ಪರ್ಧಿಸಿದ್ದ ಟಿ.ಆರ್.ರಂಗನಾಥ್ (451) ಮತಗಳನ್ನು ಗಳಿಸಿ ಜಯಶಾಲಿಯಾದರು.
ಪರಿಶಿಷ್ಠ ಪಂಗಡದಿಂದ ಟಿ.ಎಲ್.ಕಾಂತರಾಜ್ 406 ಮತಗಳನ್ನು, ಪರಿಶಿಷ್ಠ ಜಾತಿಯಿಂದ ಎನ್.ಬಿ.ಶಿವಯ್ಯ (ಬಡಾವಣೆ ಶಿವಣ್ಣ) 427 ಮತಗಳನ್ನು ಪಡೆಯುವ ಮೂಲಕ ದಿ.ಟೌನ್ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದರು.
ನಾಗರಿಕ ವೇದಿಕೆಯ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು. ಪಟ್ಟಣದ ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ದಿ.ಟೌನ್ ಸಹಕಾರ ಸಂಘದಲ್ಲಿ ಒಟ್ಟು 1138 ಮಂದಿ ಷೇರುದಾರರು ಇದ್ದರು. ಇವರ ಪೈಕಿ 948 ಮಂದಿ ಮತ ಚಲಾವಣೆ ಮಾಡಿದರು. ಒಟ್ಟು ಶೆಕಡಾ 83.30 ರಷ್ಟು ಮತದಾನವಾಗಿತ್ತು.