ಸಂಜೆ ಒಬ್ಬೊಬ್ಬರಿಗೆ ಒಂದು ರೀತಿ.ಕೃತಜ್ಞತೆಯ ಭಾವ.
ದಿನದ ದುಗುಡ ಕಳೆದು.. ವಿರಮಿಸುವ ಕಾಲ.
ಹೆಂಡತಿಗೆ ಎಲ್ಲಿ ಬಿಡುವು..ಅವಳ ಸಂಜೆ ಸಂಸಾರದ ನೊಗ ನೂಕಲು ಮೀಸಲು. ಆದರೂ ಅವಳ ತ್ಯಾಗ
ಆಸ್ವಾದಿಸುವ ಪತಿರಾಯ.ಅವಳ ನಸು ನಗುವಿನ ಸಂಜೆ ಇರದಿದ್ದರೆ ಈ ಭೂಮಿ ಬರಡು.
ರಜನಿರವರ ಲೇಖನಿಯಿಂದ ಸಂಜೆಯನು ಓದಿ.
ಸಂಜೆ
ಇಳಿ ಸಂಜೆಯಲಿ
ನಿನ್ನ ಮೃದುವಾದ ಬೆಚ್ಚನೆ
ಅಂಗೈ..ನನಗೆ
ಭರವಸೆಯನೀಯುತ್ತದೆ.
ಇಳಿ ಸಂಜೆಯಲಿ
ನನಗಾಗಿ ಕಾಯುವ
ಪರಿ…ಬದುಕಲು
ಹೂಸ ಉತ್ಸಾಹ ವನೀಯುತ್ತದೆ.
ನೀನೂ ದುಡಿದು ದಣಿದು
ಬಂದಿದ್ದರೂ..
ನನಗಾಗಿ ನೀನು ಮಾಡುವ
ಅಡುಗೆ… ಯಾವ ಜನ್ಮದ ನಂಟು..
ಇಳಿ ಸಂಜೆಯಲಿ
ನಿನ್ನ ಚದುರಿದ ಮುಂಗುರುಳು
ಬಸವಳಿದ ಮುಖ
ಹೂಸ ರೂಪವನ್ನೇ ಇತ್ತಿವೆ.
ಇಳಿ ಸಂಜೆಯಲಿ
ಬಾಡಿದ ನಿನ್ನ ಮುಡಿ
ಮಲ್ಲಿಗೆಯ ಘಮ
ಮನಸ್ಸಿಗೆ ಅಮಲು.
ನೀ ಬೆಳಗ್ಗಿನ
ತಿಂಡಿಗೆ ನಡೆಸುವ
ತಯಾರಿ..ನನ್ನ ನಾಳೆಗೆ
ಖಾತ್ರಿ.
ಇಳಿಸಂಜೆಯಲಿ
ನಿನ್ನ ಕೆನ್ನೆ
ಕೆಂಪು ಸೂರ್ಯನಿಗೆ
ಸಡ್ಡು…
ಇಳಿಸಂಜೆಯಲಿ
ನಿನ್ನ ನಸುನಗು
ನನ್ನೆಲ್ಲಾ… ದಿನದ
ದುಡಿಮೆಯ
ಸಿಹಿ ಪ್ರತಿಫಲ.
ಇಳಿಸಂಜೆಯಲಿ
ನೀನುಸುರುವ
ಪಿಸು ಮಾತು...
ಸೂರ್ಯ ನಿಗೆ
ಪೂರ್ತಿ ಮುಳುಗಲು ಹೇಳುವ
ಸನ್ನೆ.
ಡಾll ರಜನಿ