ತುರುವೇಕೆರೆ: ಬಿಜೆಪಿಯ ದುರಾಡಳಿತಕ್ಕೆ ಬೇಸತ್ತಿರುವ ಕ್ಷೇತ್ರದ ಜನತೆ ಈ ಬಾರಿ ಕಾಂಗ್ರೆಸ್ಗೆ ಹೆಚ್ಚಿನ ಮತಗಳನ್ನು ನೀಡಿ; ಅಭ್ಯರ್ಥಿ ಕಾಂತರಾಜ್ ಬಿ.ಎಂ ಅವರನ್ನು ಗೆಲ್ಲಿಸಲಿದ್ದಾರೆಂದು ತುರುವೇಕೆರೆ ವಿಧಾನ ಸಭಾ ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜ್ ಬಿ.ಎಂ ಹೇಳಿದರು.
ಪಟ್ಟಣದ ಬೆಮೆಲ್ ಕಾಂತರಾಜ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಿ.ಎಸ್.ಪುರ ಹೋಬಳಿಯ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಬುಧವಾರ ರಾತ್ರಿ ಮಾತನಾಡಿದ ಅವರು
ಮಾಜಿ ಶಾಸಕ ಶ್ರೀನಿವಾಸ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು ಇದರಿಂದ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಮತಗಳು ತುರುವೇಕೆರೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಈ ಭಾಗದ ಸಾಕಷ್ಟು ಯುವಕರು, ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ನತ್ತ ಒಲವು ತೋರಿದ್ದು ಪಕ್ಷದ ಶಕ್ತಿಯನ್ನು ಹೆಚ್ಚಿಸಿದೆ.
ಕಾಂಗ್ರೆಸ್ ಬಡವರ, ಹಿಂದುಳಿದವರ, ಶೋಷಿತರ, ಅಲ್ಪಸಂಖ್ಯಾತರ ಸೇರಿದಂತೆ ಎಲ್ಲ ಸಮುದಾಯಗಳ ಏಳಿಗೆಗೆ ಸದಾ ದುಡಿಯುವ ಪಕ್ಷವಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ನೀಡಿರುವ ಶಾಶ್ವತ ಜನಪರ ಯೋಜನೆಗಳು ಇಂದಿಗೂ ಜನಮಾನಸಲ್ಲಿ ಅಚ್ಚಳಿಯದೇ ಉಳಿದಿದ್ದು ಈ ಬಾರಿ ಕಾಂಗ್ರೆಸ್ ಪರವಾದ ಮತದಾರರ ಧ್ವನಿ ಇದೆ ಎಂದರು.
ಗುಬ್ಬಿ ತಾಲ್ಲೂಕಿನ ಎಪಿಎಂಸಿ ಮಾಜಿ ಉಪಾಧ್ಯಕ್ಷ ತಿಮ್ಮರಾಜು ಮಾತನಾಡಿ, ಶಾಸಕ ಜಯರಾಮ್ ಎ.ಎಸ್ ಅವರ ಕೊಡುಗೆ ಸಿ.ಎಸ್.ಪುರ ಹೋಬಳಿಯಲ್ಲಿ ಶೂನ್ಯ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಒಳ್ಳೆಯ ಕೆಲಸ ಮಾಡಿದ್ದಾರೆ ಆದರೆ ಶಾಸಕರು ಏನೂ ಮಾಡಿಲ್ಲ. ಇಲ್ಲಿಯ ಜನತೆಗೆ ಒಂದು ಮನೆಯೂ ನೀಡಿಲ್ಲ, ಬಸ್ ಸೌಕರ್ಯವಿಲ್ಲ, ಬಡಮಕ್ಕಳಿಗೆ ಯಾವುದೇ ಸೌಲಭ್ಯ ನೀಡಿಲ್ಲವೆಂದು ಕಿಡಿಕಾರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರುಗಳಾದ ಗೋಣಿತುಮಕೂರು ಲಕ್ಷ್ಮೀಕಾಂತ್, ರಾಮಣ್ಣ, ವೆಂಕಟೇಶ್, ದೇವರಾಜ್ ಗಿರೀಶ್, ಚೇತನ್ಕುಮಾರ್, ನವೀನ್, ಆನಂದ್, ಗಂಗಾಧರ್, ಶಿವಕುಮಾರ್ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.