ತುಮಕೂರು: ದಿನೇ ದಿನೇ ಧಾರ್ಮಿಕ ಮೂಲಭೂತವಾದಿಗಳ ದೌರ್ಜನ್ಯ ಹೆಚ್ಚಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ಬೀದಿ ಜಗಳ ಮಾಡುತ್ತಿದ್ದಾರೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಬರಗೂರು ಗೆಳೆಯರ ಬಳಗ ತುಮಕೂರಿನಲ್ಲಿ ಆಯೋಜಿಸಿದ್ದ ಬರಗೂರು ಅವರ ಕಾಗೆ ಕಾರುಣ್ಯದ ಕಣ್ಣು ಕೃತಿ ಜನಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವದ ಮೂಲ ಲಕ್ಷಣವೇ ಸಂವಾದ. ಆದರೆ ಸಂವಾದ ಮಾಡದಂಥ ವಾತಾವರಣವನ್ನು ಧಾರ್ಮಿಕ ಮೂಲಭೂತವಾದ ಸೃಷ್ಟಿ ಮಾಡಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ನಡೆಸುತ್ತಾ, ಧರ್ಮ–ಜಾತಿಯ ಹೆಸರಿನಲ್ಲಿ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಸಂವಾದ, ಮೌಲ್ಯ, ಪರಸ್ಪರ ವಿಚಾರ ವಿನಿಮಯ ಮುಖ್ಯ. ಆದರೆ ಇವೆಲ್ಲವನ್ನು ಮೀರಿದ ವಾತಾವರಣದಲ್ಲಿ ನಾವಿದ್ದೇವೆ ಎಂದರು.
ಪ್ರಜಾಪ್ರಭುತ್ವದಲ್ಲಿ ನಾವುಗಳು ಇರಬೇಕಾದರೆ ಪ್ರಜಾಪ್ರಭುತ್ವ ರಕ್ಷಣೆಗೆ ನಾವು ನಿಲ್ಲಬೇಕು. ಪರಸ್ಪರ ಸಂವಾದಿಸುವ, ಗೌರವದಿಂದ ಕಾಣುವ ಪ್ರಜಾಸತ್ತಾತ್ಮಕ ಮೌಲ್ಯ ಮುಖ್ಯ ಎಂದು ಹೇಳಿದರು.
ಶೋಧ ಎಂದು ಕೊಂಡವರು ಬೆಳೆಯುತ್ತಾ, ಬೆಳೆಸುತ್ತಾ ಹೋಗುತ್ತಾರೆ. ಹಾಗೆಯೇ ನಾನು ಹುಡುಕುತ್ತಲೆ ಬೆಳೆದವನು ಎಂದು ಹೇಳಿದರು.
ಸೌಹಾರ್ದತೆ ಮತ್ತು ಸಮಾನತೆಯ ಸಂಕೇತವಾಗಿ ‘ಕಾಗೆ ಕಾರುಣ್ಯದ ಕಣ್ಣು’ ಎಂದು ಹೆಸರಿಟ್ಟಿದ್ದೇನೆ. ನಾನು ಎಷ್ಟೋ ಸಾರಿ ವಿಧಾನ ಪರಿಷತ್ ಸ್ಥಾನವನ್ನು ಬಿಟ್ಟಿದ್ದೇನೆ. ಅದು ಬೇರೆ ವಿಷಯ. ಈ ಸಮಾರಂಭವನ್ನು ನನ್ನ ಜಿಲ್ಲೆ ಎಂಬ ಕಾರಣಕ್ಕೆ ನಮ್ಮ ಜಿಲ್ಲೆಯವರು ಪ್ರೀತಿಯಿಂದ ಆಯೋಜಿಸಿದ್ದಾರೆ. ನಾನು ಎಂ.ಎಲ್.ಸಿ. ಆಗಬೇಕೆಂದು ಅಲ್ಲ. ಈಗ ಅಪವ್ಯಾಖ್ಯಾನಗಳೇ ಹೆಚ್ಚು. ಈ ಕಾರ್ಯಕ್ರಮ ಅಪವ್ಯಾಖ್ಯಾನ ಆಗುವುದು ಬೇಡ ಎಂಬ ಕಾರಣಕ್ಕೆ ಇದನ್ನು ಹೇಳುತ್ತಿದ್ದೇನೆ ಎಂದರು.
ಸಮಾರಂಭದಲ್ಲಿ ಸಾಹಿತ್ಯಸಕ್ತರು ಕಿಕ್ಕಿರಿದು ಸೇರಿದ್ದರು. ಕಸಾಪದ ಸಭಾಂಗಣ ಆಚೆಗೂ ನಿಂತು ಬರಗೂರು ಅವರ ಮಾತುಗಳನ್ನು ಆಲಿಸಿದ್ದು ವಿಶೇಷವಾಗಿತ್ತು.