Publicstory
ಮೈಸೂರು: ತನ್ನ ಮಾನಸಿಕ ರೋಗದ ಮಗನಿಗೆ ಔಷಧಿ ತರಲು ಮೈಸೂರಿನಿಂದ ಬೆಂಗಳೂರಿಗೆ 300 ಕಿ.ಮೀಟರ್ ಸೈಕಲ್ ನಲ್ಲಿ ಹೋದ ಗಾಣಿಗರಕೊಪ್ಪಲಿನ ತಂದೆಯ ಕಥನ ಮೈಸೂರಿನ ಆರೋಗ್ಯ ಇಲಾಖೆಯನ್ನು ಮತ್ತೊಮ್ಮೆ ಬೆತ್ತಲು ನಿಲ್ಲಿಸಿದೆ.
ತನ್ನ ಮಗನಿಗಾಗಿ ಲಾಕ್ ಡೌನ್ ಲೆಕ್ಕಿಸದೇ ಸೈಕಲ್ ನಲ್ಲೇ ತೆರಳಿದ ಗಾಣಿಗರಕೊಪ್ಪಲಿನ ಆನಂದ್ ಅವರ ಕಥನ ಮನ ಮಿಡಿಯುವಂತದೆ. ಆದರೆ ಇದಕ್ಕೆ ಕಾರಣ ಮಾತ್ರ, ಮೈಸೂರಿನ ಜಿಲ್ಲಾ ಆರೋಗ್ಯ ಇಲಾಖೆಯೇ. ಏಕೆ ಎಂಬುದನ್ನು ಮುಂದೆ ಓದಿ.
ಕೇಂದ್ರ ಸರ್ಕಾರವು ಇಡೀ ದೇಶದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಆದರೆ ಇದನ್ನು ಬಳಕೆ ಮಾಡಿಕೊಳ್ಳದ ಕಾರಣದಿಂದಲೇ ಆನಂದ್ ಅವರ ಈ ಕಥನಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಸಾರ, ಮಾನಸಿಕ ರೋಗದಿಂದ ಬಳಲುತ್ತಿರುವ ಯಾರೇ ಆಗಲಿ ಅಂತವರಿಗೆ ಉನ್ನತ ವೈದ್ಯಕೀಯ ಆಸ್ಪತ್ರೆಗಳು ಬರೆದುಕೊಡುವ ಮಾತ್ರೆಗಳನ್ನು ಅಲ್ಲಿನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಉಚಿತವಾಗಿ ನೀಡಬೇಕು. ಇಂತ ರೋಗಗಳಿಂದ ಬಳಲುತ್ತಿರುವ ಉನ್ನತ ವೈದ್ಯಕೀಯ ಆಸ್ಪತ್ರೆಗಳಲ್ಲಿ ತೋರಿಸಿಕೊಂಡ ಬಳಿಕ ಔಷಧಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆಯಬಹುದಾಗಿದೆ.
ಒಂದು ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆಗಳ ಪೂರೈಕೆ ಇಲ್ಲದಿದ್ದರೆ ಆಸ್ಪತ್ರೆ ಗಳ ಸುರಕ್ಷಾ ಸಮಿತಿಯಲ್ಲಿರುವ ನಿಧಿಯನ್ನು ಬಳಸಿ ಮಾತ್ರೆಗಳನ್ನು ಖರೀದಿಸಿ ರೋಗಿಗಳಿಗೆ ನೀಡಬೇಕಾಗುತ್ತದೆ.
ಮೇಲಿನ ಘಟನೆಯಲ್ಲಿ ಆನಂದ್ ಅವರಿಗೆ ಈ ಕಾರ್ಯಕ್ರಮದ ಅರಿವು ಇತ್ತೇ, ಇಲ್ಲವೇ ಎಂಬುದು ಗೊತ್ತಿಲ್ಲ. ಒಂದು ವೇಳೆ ಗೊತ್ತಿದ್ದೂ, ಆಸ್ಪತ್ರೆಯನ್ನು ಸಂಪರ್ಕಿಸಿ ಅವರಿಗೆ ನೆರವು ಸಿಗದಿದ್ದರೆ ಅಲ್ಲಿಯ ವೈದ್ಯಾಧಿಕಾರಿ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು.
ಇಂತದೊಂದು ಕಾರ್ಯಕ್ರಮ, ಯೋಜನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಅಲ್ಲಿನ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆ ಮಾಡಿಲ್ಲ ಎಂಬುದಕ್ಕೆ ಮೇಲಿನ ಘಟನೆಯೇ ಸಾಕ್ಷಿಯಾಗಿದೆ.
ಇದರ ಜತೆಗೆ, ಟೆಲಿ ಮೆಡಿಷನ್, ಜೀವ ಸಂಜೀವಿನಿ ಕಾರ್ಯಕ್ರಮದಡಿ ಚಿಕಿತ್ಸೆ ಮುಂದುವರೆಸುವ ಅವಕಾಶ ಸಹ ಆರೋಗ್ಯ ಇಲಾಖೆಗೆ ಇದೆ. ಇದನ್ನು ಬಳಸಿಕೊಂಡಿದ್ದರೆ ಆನಂದಯ್ಯ ಅಷ್ಟು ದೂರ ಹೋಗುವ ಪ್ರಮೇಯವೂ ಬರುತ್ತಿರಲಿಲ್ಲ.
ಸರ್ಕಾರದ ಯೋಜನೆಗಳು ಹೇಗೆ ಬಳಕೆಯಾಗುತ್ತಿವೆ ಎಂಬುದರ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು, ಸಂಸದರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಕಣ್ಗಾವಲು ಇಡದ ಕಾರಣದಿಂದಲೇ ರಾಜ್ಯದಲ್ಲಿ ಆನಂದಯ್ಯ ಅವರಂಥವರ ನೂರಾರು ಘಟನೆಗಳು ನಡೆಯಲು ಕಾರಣವಾಗುತ್ತಿದೆ.