ಡಾ. ರಜನಿ ಅವರ ಈ ಕವನ ದೈನಂದಿನ ಜೀವನದಲ್ಲಿ ಜೀವ ಸೆಲೆ
ಎಲ್ಲೆಲ್ಲೂ ಇರುವುದನ್ನು ಗುರುತಿಸುತ್ತದೆ. ಮೇಲ್ನೋಟಕ್ಕೆ ಸರಳ ಕವನದಂತೆ ಕಂಡರೂ ಒಳ ಹೊಕ್ಕರೆ ಬದುಕು ಏನ್ನೆಂಬುದನ್ನು ಹೇಳುತ್ತದೆ.
ಬೈಕ್ ಕಾರ್ ಕುಕ್ಕರ್ ಏನೇ ಆಧುನಿಕತೆ ಬಂದರೂ ತಿನ್ನುವ ಅನ್ನ ಬದಲಾಗಲ್ಲ.
ಕೂಗುವ ಪಕ್ಷಿಗೆ ಕೊರೋನಾ ಗೊತ್ತಿಲ್ಲ.
ಬಾಗಿಲಿನ ರಂಗೋಲೆ ಹಾಕುವುದನ್ನು ಬಿಡಲ್ಲ ನಾರಿ.
ಯಾರು ಹೋದರೂ ಜೀವ ಚೈತನ್ಯ ಬತ್ತುವುದಿಲ್ಲ.
ಆಧುನಿಕತೆಗೂ ಜಿರಲೆ ಮುಕ್ತಿ ಹೊಂದಲಾಗಿಲ್ಲ.
ಜಿರಲೆ ಬದಲಾಗಲ್ಲ. ಕೆಮ್ಮಣ್ಣು ಕೊನೆಗೆ- ಇದೆಲ್ಲವನ್ನು ಕವನ ಹೇಳಿದೆ.
ಬೆಳಿಗ್ಗೆ
ಸಾವಂತಿಗೆ ,ಮಲ್ಲೇ ,ಚಂಡುವ್ವಾ
ಈರುಳ್ಳಿ ನೂರು ರೂ ಗೆ ನಾಲ್ಕು ಕೇಜಿ
ದಿಂಬಿಗೆ ಅಂಟಿದ ಮಲ್ಲಿಗೆ ವಾಸನೆ
ತೆಂಗಿನ ಮರದ ಮೇಲಿನ ಕೋಗಿಲೆ
ಕುಹೂ ಕುಹೂ…
ಯಾವುದೋ ಪಕ್ಷಿಗಳ ಚಿಲಿ ಪಿಲಿ
ಅಪರೂಪಕ್ಕೆ ಬಂದು ಸೇರಿರುವ
ಇಲಿಯ ಕೆರೆತ AC ಒಳಗೆ…
ಟಾಯ್ಲೆಟ್ನಲ್ಲಿ ಬಂದೇ ಬಂದ ಜಿರಲೆ
ಬಾತ್ ರೂಮಲ್ಲಿ ಗೋಡೆ ಮೇಲಿನ
ಸೊಳ್ಳೆ ತಿಂದು
ದಪ್ಪ ಆದ ಹಲ್ಲಿ…
ಒಗ್ಗರಣೆಗೆ ತೆಗೆದ ಕಡ್ಲೆಬೇಳೆ
ಕೊರೆದ ತೂತು..
ತೆಗೆಯದೇ ಬಿಟ್ಟ ಉಪ್ಪಿನಕಾಯಿ
ಬೂಸ್ಟ್..
ಪಕ್ಕದ ಮನೆಯಕುಕ್ಕರ್ ಸೀಟಿ
ಬೈಕ್ ರೊಂಯ್..
ನೀರಿನ ಸಪ್ಪಳ
ಆಲೂಗಡ್ಡೆಯ ಮೊಳಕೆ..
ಚಟ್ನಿಗೆ ಒಡೆದ ಕಾಯಿ
ಕೊಬ್ಬರಿ
ತಂತಿ ಮೇಲಿನ ಮಗುವಿನ
ಹುಚ್ಚೆ ಬಟ್ಟೆ…
ಒಣಗಿ ಹಾಕಿದ ಕಾಟನ್ ಮಾಸ್ಕ್
ಬಾಗಿಲಿಗೆ ಬಿದ್ದಿರುವ ಸುದ್ದಿ
ಪತ್ರಿಕೆ…
ಕರೆಂಟ್ ಬಿಲ್..
ಮೈನ್ ರೋಡಿನಿಂದ
ಆಂಬುಲೆನ್ಸ್
ಸೈರನ್..
ರಂಗೋಲೆ …ರಂಗೋಲೇ
ನುಣ್ಣನೇ
ಕೆಮ್ಮಣ್ಣು ಪುಡಿ…