Publicstory/prajayoga
ವರದಿ, ಎ.ಶ್ರೀನಿವಾಸಲು
ಪಾವಗಡ: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಪಳವಳ್ಳಿ, ಹುಸೇನ್ ಪುರ, ಸಿ.ಕೆ ಪುರ, ದೊಡ್ಡ ಹಳ್ಳಿ, ವೆಂಕಟಾಪುರ ದ ಮಣಿ ಮುಕ್ತಾವತಿ ಕೆರೆಗಳು ತುಂಬಿ ಹರಿಯುತ್ತಿದೆ. ಭಾರಿ ಮಳೆಯಿಂದಾಗಿ 40 ವರ್ಷಗಳ ನಂತರ ಪಳವಳ್ಳಿಯ ಪಲ್ಲವರಾಯನ ಕೆರೆ ಕೊಡಿಬಿದ್ದು, ಹರಿಯುತ್ತಿರುವುದರಿಂದ ರೈತರು ಹರ್ಷ ವ್ಯಕ್ತ ಪಡಿಸಿರುವುದು ಒಂದೆಡೆ.
ಇನ್ನೊಂದೆಡೆ ಪಳವಳ್ಳಿ ಗ್ರಾಮ ಪಂಚಾಯತಿಯ ಹೊಸಹಳ್ಳಿ ತಾಂಡಾದಲ್ಲಿ ಗಮಲಿ ಬಾಯಿ ಹಾಗೂ ಸಾಕಮ್ಮ ಎಂಬುವವರ ಮನೆಗಳು ಭಾರಿ ಮಳೆಯಿಂದಾಗಿ ಬಿದ್ದು ಹೋಗಿದ್ದು, ಇವರು ಮೊದಲನೇ ಬಾರಿಗೆ ಮಳೆ ಬಂದಾಗ ಗ್ರಾಮ ಪಂಚಾಯತಿಯಿಂದ ಮನೆ ನಿರ್ಮಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳೀಯ ಪಿಡಿಒ ಶ್ರೀ ರಾಮನಾಯ್ಕರ ನಿರ್ಲಕ್ಷದಿಂದಾಗಿ ಈ ದಿನ ಎರಡು ಮನೆಗಳು ಕುಸಿದು ಬಿದ್ದಿವೆ ಎಂದು ಹೊಸಳ್ಳಿ ತಾಂಡಾದ ಗೋವಿಂದ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದರು.
ಹುಸೇನ್ ಪುರ ಗ್ರಾಮಕ್ಕೆ ನುಗ್ಗಿದ ಮಳೆಯ ನೀರು
ಭಾರಿ ಮಳೆಯಿಂದಾಗಿ ಹುಸೇನ್ ಪುರದ ಕೆರೆ ಉಕ್ಕಿ ಹರಿದು ಕೆರೆ ಪಕ್ಕದಲ್ಲಿರುವ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ ಮನೆಯಲ್ಲಿರುವ ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣವಾಗಿ ಹಾಳಾಗಿದೆ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡರು.
ಸ್ಥಳಕ್ಕೆ ತಹಶೀಲ್ದಾರ್ ವರದರಾಜು ಭೇಟಿ ನೀಡಿ, ಮಳೆಯಿಂದ ಬಿದ್ದು ಹೋದ ಮನೆಗಳ ಹಾಗೂ ಮನೆಗಳಿಗೆ ನೀರು ತುಂಬಿದ, ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು. ಅಧಿಕಾರಿಗಳಿಗೆ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.
ಮಳೆಯ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಆಲಿಸಬೇಕಿದ್ದ ರಾಪ್ಟೆ ಪಂಚಾಯಿತಿಯ ಪಿಡಿಒ ಹನುಮಂತರಾಜು ಗೈರು ಹಾಜರಿದ್ದು ಗ್ರಾಮಸ್ಥರು ಇಂತಹ ಪಿಡಿಒ ತಮ್ಮ ಪಂಚಾಯಿತಿಗೆ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆ ಬಿದ್ದು ಹೋಗಿರುವ ಹಾಗೂ ನೀರಿನಿಂದ ಆವೃತಗೊಂಡ ಮನೆಗಳ ಸದಸ್ಯರಿಗೆ ಹುಸೇನ್ ಪುರದ ವೆಂಕಾವಧೂತ ದೇವಸ್ಥಾನ ದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಸ್ಥಳದಲ್ಲಿ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ತಹಶೀಲ್ದಾರ್ ವರದರಾಜು ಅಧಿಕಾರಿಗಳಿಗೆ ತಿಳಿಸಿದರು.
ಸ್ಥಳದಲ್ಲಿ ತಾಲೂಕು ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕರಾದ ಗಂಗಾಧರ, ಆರ್ ಐ ರವಿಕುಮಾರ್, ಬಿಲ್ ಕಲೆಕ್ಟರ್ ರಾಮ್, ಗ್ರಾಮ ಪಂಚಾಯತಿ ಸದಸ್ಯ ನಾಗರಾಜು ಇದ್ದರು.