Publicstory
– ವರದಿ, ದೇವರಾಜ್ ಗುಬ್ಬಿ
ಒತ್ತುರಿಯಾದ 68 ಕೆರೆಗಳು | ಪರಿಣಾಮ ಎದುರಿಸಿದ ಜಲಾವೃತ ಹಳ್ಳಿಗಳು
ಗುಬ್ಬಿ: ಕಾನೂನಾತ್ಮಕ ಕ್ರಮಗಳನ್ನು ಕಾಯದ ಮಳೆರಾಯ ಅಕ್ರಮವಾಗಿ ಒತ್ತುವರಿಯಾದ ಕೆರೆ ಕಟ್ಟೆಗಳನ್ನು ಸಕ್ರಮ ಮಾಡುವಲ್ಲಿ ಯಶಸ್ವಿಯಾಗಿ ತನ್ನ ಗಡಿ ಸೃಷ್ಟಿಸಿದರೂ ಕೂಡ ಜಿಲ್ಲಾಡಳಿತ ಮಾತ್ರ ಒತ್ತುವರಿ ತೆರವು ಮಾಡಲು ಮೀನಮೇಷ ಮಾಡಿರುವುದು ಸುರಿದ ಮಳೆಯಿಂದ ಬೆಳಕಿಗೆ ಬಂದಿದೆ.
ಗುಬ್ಬಿ ತಾಲೂಕಿನ ಒಟ್ಟು 203 ಕೆರೆಗಳ ಪೈಕಿ 62 ಕೆರೆಗಳ ಸರ್ವೆ ಕಾರ್ಯ ನಡೆದು 68 ಕೆರೆಗಳು ಒತ್ತುವರಿ ಆಗಿರುವ ಬಗ್ಗೆ ಸರ್ವೇ ಇಲಾಖೆ ದೃಡಪಡಿಸಿದೆ. ಉಳಿದ 28 ಕೆರೆಗಳು ಯಾವುದೇ ಒತ್ತುವರಿ ಯಾಗಿಲ್ಲ ಎಂಬ ಮಾಹಿತಿ ಇದ್ದು, ಉಳಿದ ಕೆರೆಗಳ ಸರ್ವೇ ಕಾರ್ಯವನ್ನು ಕೂಡಲೇ ಮಳೆಗಾಲದಲ್ಲಿ ಅಧಿಕಾರಿಗಳು ಗುರುತಿಸುವುದು ಅಗತ್ಯವಾಗಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆ ನೀರು ತನ್ನ ಮೂಲ ಸ್ಥಾನ ಹುಡುಕಿ ಹೊರಟ ಪರಿಣಾಮ ಇಂದು ಎಲ್ಲಡೆಯೂ ಕೆರೆ ಕಟ್ಟೆಗಳು ತುಂಬಿವೆ. ಇದಕ್ಕೆ ನಿದರ್ಶನವೆಂದರೆ ಗುಬ್ಬಿ ಪಟ್ಟಣದ ಮಾರನಕಟ್ಟೆ ಸರ್ವೇ ನ.17 ರ ಸುಮಾರು 46.01 ಎಕರೆ ವಿಸ್ತೀರ್ಣದ ಸಂಪೂರ್ಣ ಕೆರೆ ಜಾಗ ಒತ್ತುವರಿ ಆಗಿದೆ ಎಂಬುದನ್ನು ಗಮನಿಸಬಹುದು.
ಜಿಲ್ಲೆಯಾದ್ಯಂತ ನೀರು ಶೇಕರಣೆಯಾದ ಎಲ್ಲಾ ಕೆರೆ ಕಟ್ಟೆಗಳ ವಿಸ್ತೀರ್ಣವನ್ನು ಗಮನಿಸಿದರೆ, ಈ ಹಿಂದೆ ಕೆರೆ ಹೇಗಿತ್ತು. ಈಗ ಏನಾಗಿದೆ ಎಂಬುದನ್ನು ತಿಳಿಯಬಹುದು. ಅಂತರ್ಜಲ ವೃದ್ಧಿಗೆ ಕೆರೆ ಕಟ್ಟೆಗಳ ಅವಶ್ಯಕತೆಗಳ ಬಗ್ಗೆ ಸುಪ್ರೀಂ ಕೋರ್ಟ್ ತಿಳಿಸಿ ಕೆರೆಗಳ ಒತ್ತುವರಿ ತೆರವಿಗೆ ಆದೇಶಿಸಿದೆ. ಆದರೆ ಕೆರೆ ಕಟ್ಟೆ ಒತ್ತುವರಿ ಕಾರ್ಯವನ್ನು ಅನುಷ್ಟಾನಕ್ಕೆ ತರುವಲ್ಲಿ ಸರ್ಕಾರ ವಿಳಂಬ ಮಾಡಿರುವುದನ್ನು ಸುರಿದ ಭಾರಿ ಮಳೆ ಬಯಲು ಮಾಡಿದೆ.
ಕೆರೆಗಳ ಒತ್ತುವರಿಯಿಂದಾಗಿ ಈಗಾಗಲೇ ಜಿಲ್ಲಾದ್ಯಂತ ಅನೇಕ ಹಳ್ಳಿಗಳು ಜಲವೃತಗೊಂಡಿವೆ. ಇದರಿಂದಾಗಿ ಅನೇಕ ಸಮಸ್ಯೆಗಳು ತಲೆದೋರಿದ್ದು, ಕೂಡಲೇ ಜಿಲ್ಲಾಡಳಿತ ಒತ್ತುವರಿ ತೆರವು ಕಾರ್ಯಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದರೆ ಮುಂದೆ ತಲೆದೋರುವ ಅನೇಕ ಸಮಸ್ಯೆಗಳಿಗೆ ಮುಕ್ತಿ ನೀಡಬಹುದು ಎಂದು ಪ್ರಜ್ಞಾವಂತ ನಾಗರೀಕರ ಒತ್ತಾಸೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 2060 ಕೆರೆಗಳನ್ನು ಗುರ್ತಿಸಿ 760 ಕೆರೆಗಳ ಒತ್ತುವರಿ ಕಾರ್ಯ ಕೈಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಜಿಲ್ಲೆಯಾದ್ಯಂತ ಸಂಬಂಧಪಟ್ಟ ಅಧಿಕಾರಿಗಳು ಪರಿಸರ ಪೀಡಕರಾದರೇ.. ಇದಕ್ಕೆ ಸಾಥ್ ನೀಡುವ ಜನಪ್ರತಿನಿಧಿಗಳು ಪ್ರಜಾ ಪೀಡಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮತ್ತು ಸರ್ಕಾರ ಕೆರೆ ಕಟ್ಟೆಗಳ ಒತ್ತುವರಿ ತೆರವಿಗೆ ಮುಂದಾಗಿ ಅಂತರ್ಜಲ ವೃದ್ಧಿಗೆ ಸಹಕರಿಸಬೇಕು.
___________________________________________
ಜಿಲ್ಲಾಧಿಕಾರಿಗಳ ಆದೇಶದಂತೆ ಕೆರೆಗಳ ಮಾಲೀಕತ್ವ ಪಡೆದ ಆಯಾ ಇಲಾಖೆಗಳು ಒತ್ತುವರಿ ತೆರವಿಗೆ ಜವಾಬ್ದಾರಿ ಹೊರಬೇಕಿದೆ. ಈಗಾಗಲೇ ಎಲ್ಲಾ ಇಲಾಖೆಗಳಿಗೆ ಪತ್ರದ ಮೂಲಕ ಒತ್ತುವರಿ ತೆರವಿಗೆ ತಿಳಿಸಲಾಗಿದೆ. ಆದರೆ, ಯಾವ ಇಲಾಖೆಯಿಂದಲೂ ಇಲ್ಲಿಯವರೆಗೆ ಉತ್ತರ ಬಂದಿಲ್ಲ. ಒತ್ತುವರಿ ಸಮಯದಲ್ಲಿ ವಾಣಿಜ್ಯ ಬೆಳೆಯ ಮರ ಗಿಡಗಳನ್ನು ತೆಗೆಯಲು ಅರಣ್ಯ ಇಲಾಖೆ ಅನುಮತಿ ಬೇಕಾಗಿರುವುದಿಲ್ಲ.
___________________________________________