ಜಸ್ಟ್ ನ್ಯೂಸ್

SI ಅಮಾನತ್ತು; ಪಟಾಕಿ ಸಿಡಿಸಿ ಸಂಭ್ರಮಿಸಿದ ಜನತೆ

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಪಾವಗಡ ಠಾಣೆ ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ ಅವರನ್ನು ಎಸ್ ಪಿ ಡಾ.ಕೋನ ವಂಶಿಕೃಷ್ಣ ಅವರು ಅಮಾನತ್ತುಗೊಳಿಸಿದ್ದಾರೆ.

ವಂಚನೆ, ಕಳ್ಳತನ, ಜೇಬುಗಳ್ಳತನ ಸೇರಿದಂತೆ ಹಲವು ದೂರನ್ನ‌ ದಾಖಲಿಸದೇ ನಿರ್ಲಕ್ಷ್ಯ ತೋರಿದ ಆರೋಪ ಇವರ ಮೇಲಿತ್ತು. ಶಂಕರ ನಾಯ್ಕ ಎಂಬುವರು ಪೊಲೀಸ್ ಠಾಣೆ ಮುಂಭಾಗ ಇದ್ದ ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ವಂಚಕನೊಬ್ಬ ಅವರ ಎಟಿಎಂ ಬದಲಿಸಿ 1 ಲಕ್ಷ ರೂ ಹಣ ಡ್ರಾ ಮಾಡಿ ಪರಾರಿಯಾಗಿದ್ದ. ರಾಜವಂತಿ ಗ್ರಾಮದ ಅಡವಪ್ಪ ಅವರಿಗೂ ಇದೇ ರೀತಿ ವಂಚಿಸಿ 25 ಸಾವಿರ ರೂ ಹಣ ವಂಚಿಸಲಾಗಿತ್ತು. ಆದರೆ ಇವರಿಬ್ಬರು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸದೆ ಕೇವಲ ಸೀಮಿಸ್  ನೀಡಲಾಗಿತ್ತು.

ಜೇಬುಗಳ್ಳ ತನ್ನ ಜೇಬಿನಲ್ಲಿದ್ದ 80 ಸಾವಿರ ರೂಪಾಯಿ ಹಣ ಕಳವು ಮಾಡಿದ್ದಾನೆ ಎಂದು ದೇಗುಲಕ್ಕೆ ಆಗಮಿಸಿದ್ದ ಭಕ್ತನೋರ್ವ ನೀಡಿದ್ದ ದೂರನ್ನು ಪಡೆದು ಪ್ರಕರಣ ದಾಖಲಿಸದ ಆರೋಪ ರಾಘವೇಂದ್ರ ಅವರ ಮೇಲಿತ್ತು. ಎಸ್.ಪಿ ಅವರು ಸೂಚಿಸಿದ ನಂತರ ಜೇಬು ಕಳ್ಳತನದ ಪ್ರಕರಣ ದಾಖಲಿಸಲಾಗಿತ್ತು.

ಇಷ್ಟೆಲ್ಲದರ ಜೊತೆಗೆ ತುಮಕೂರಿಗೆ ಕ್ರೈಂ ಮೀಟಿಂಗ್ ಗಾಗಿ ಹೋಗುತ್ತಿದ್ದ ಅವರು ಮರಳಿ ಕೇಂದ್ರ ಸ್ಥಾನಕ್ಕೆ ಬರುತ್ತಿರಲಿಲ್ಲ. ನಂತರದ ದಿನವೂ ತಡವಾಗಿ ಠಾಣೆಗೆ  ಆಗಮಿಸುತ್ತಿದ್ದರು. ಈ ಬಗ್ಗೆ ಸರ್ಕಲ್ ಇನ್ ಸ್ಪೆಕ್ಟರ್ ಕೇಳಿದಾಗ ಬೇ ಜವಬ್ಧಾರಿ ಉತ್ತರ ನೀಡುತ್ತಿದ್ದರು. ಈ ಬಗ್ಗೆಯೂ ಎಸ್ ಪಿ ಅವರಿಗೆ ವರದಿ ಹೋಗಿತ್ತು ಎಂದು ತಿಳಿದು ಬಂದಿದೆ.

ಸಬ್ ಇನ್ ಸ್ಪೆಕ್ಟರ್ ಅಮಾನತ್ತುಗೊಂಡಿರುವ ವಿಚಾರ ತಿಳಿದು ಪಟ್ಟಣದ ಕೆಲವರು ಶನೈಶ್ಚರ ವೃತ್ತದಲ್ಲಿ ಪಟಾಕಿ ಸಿಡಿಸಿದರು. ಅಮಾನತ್ತುಗೊಳಿಸಿ ಕ್ರಮ ತೆಗೆದುಕೊಂಡ ಪೊಲೀಸ್ ವರಿಷ್ಠಾಧಿಕಾರಿ ಪರವಾಗಿ ಘೋಷಣೆ ಕೂಗಿದರು.

 

Comment here