ತೆಂಗು ಬೆಳೆಗಾರರಿಗೆ ಬೆಲೆ ಕೊಡದ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆಯಲ್ಲಿ ಪಾಠ ಕಲಿಸಿ, ಎಂ.ಟಿ.ಕೃಷ್ಣಪ್ಪ ರೈತರಿಗೆ ಕರೆ
ತುರುವೇಕೆರೆ: ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸದೆ ರಾಜ್ಯದ ತೆಂಗು ಬೆಳೆಗಾರರನ್ನು ಕಡೆಗಣಿಸಿರುವ ಕಾಂಗ್ರೆಸ್ ಪಕ್ಕಕ್ಕೆ ಮುಂಬರುವ ಲೋಕಸಬಾ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ರೈತರಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು
ರಾಜ್ಯದ 13 ಜಿಲ್ಲೆಗಳಲ್ಲಿ ತೆಂಗು ಬೆಳೆಯುವ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ. ಕೊಬ್ಬರಿಗೆ ಕನಿಷ್ಠ 15 ಸಾವಿರ ರೂಪಾಯಿಗಳನ್ನಾದರೂ ಬೆಂಬಲ ಬೆಲೆಯಾಗಿ ಘೋಷಿಸಬೇಕೆಂದು ಪ್ರತಿಭಟನೆ, ಚಳವಳಿ, ಹೋರಾಟ ಮಾಡಿದರೂ ಬಜೆಟ್ ನಲ್ಲಿ ಕೊಬ್ಬರಿ ಬೆಳೆಗಾರರ ಪರವಾಗಿ ಯಾವುದೇ ಘೋಷಣೆ ಮಾಡದೆ ರೈತ ವಿರೋದಿ ಸರ್ಕಾರವಾಗಿದೆ.
ರಾಜ್ಯದಲ್ಲಿ ರೈತರ ಹೋರಾಟಗಳಿಗೂ ಬೆಲೆ ನೀಡದ ಭಂಡ ಸರ್ಕಾರವಾಗಿದೆ. ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂಬ ವಿಚಾರವನ್ನಿಟ್ಟುಕೊಂಡು ವಿಧಾನಸೌಧದ ಅಧಿವೇಶನದಲ್ಲಿ ಗಂಟೆಗಟ್ಟಲೆ ಮಾತನಾಡಿ ಕ್ವಿಂಟಾಲ್ ಕೊಬ್ಬರಿಗೆ 15000 ರೂಪಾಯಿಗಳು ಘೋಷಿಸಬೇಕು ಎಂದು ಒತ್ತಾಯಿಸಿದೆ. ಸರ್ಕಾ ಇದಕ್ಕೂ ಬೆಲೆ ಕೊಡಲಿಲ್ಲ. ಕೊಬ್ಬರಿ ಬೆಲೆ ಕುಸಿತದ ಬಗ್ಗೆ ನಾನು ಹೋರಾಟ ಹಮ್ಮಿಕೊಳ್ಳುವ ಚಿಂತನೆ ನಡೆಸುತ್ತಿರುವ ಹೊತ್ತಿಗೆ ಬಜೆಟ್ ನಲ್ಲಿ ನೀಡಿರುವ ಭರವಸೆಯಿಂದ ಸುಮ್ಮನಾದೆ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ 15ಸಾವಿರ ನಿಗದಿಮಾಡಲು ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದರು.
ಇದೇ ಸರ್ಕಾರ ತನ್ನ ಪಕ್ಷದ ಶಾಸಕರಿಗೆ ಒಂದು ಅನುಧಾನ ಉಳಿದ ಪಕ್ಷದ ಶಾಸಕರಿಗೆ ಒಂದು ಅನುದಾನ ನೀಡುವ ಮೂಲಕ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆಂದು ಕಿಡಿಕಾರಿದರು.
ಸರ್ಕಾರ ಕೇವಲ 5 ಗ್ಯಾರಂಟಿಗಳಿಗೆ ಹಣಹೊಂದಿಸುವುದರಲ್ಲೇ ಸಕ್ರಿಯವಾಗಿ ರಾಜ್ಯದ ಅಭಿವೃದ್ಧಿಯನ್ನೇ ಮೈಮರೆತಿದೆ. ಗ್ಯಾರಂಟಿಗಳಿಂದ ರಾಜ್ಯದ ಜನತೆ ಬೆಸತ್ತಿದ್ದು ಅವುಗಳಿಗೆ ಮಾನ್ಯತೆಯೇ ಇಲ್ಲವಾಗಿದೆ. ಕಾಂಗ್ರೆಸ್ಸಿಗರುಅಂದುಕೊಂಡಂತೆ ಮುಂದಿನ ಯಾವುದೇ ಚುನಾವಣೆಯಲ್ಲಿ ಗ್ಯಾರಂಟಿಗಳು ಕೆಲಸ ಮಾಡವು.
ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ವೇಳೆ ಬುದ್ದಿ ಕಲಿಸಬೇಕು. ಇಲ್ಲವಾದರೆ ರಾಜ್ಯದ ರೈತರಿಗೆ ಉಳಿಗಾಲವಿಲ್ಲ ಎಂಬ ಅರಿವು ರೈತರಿಗೆ ಗೊತ್ತಾಗಬೇಕು. ಲೋಕಸಭಾ ಚುನಾವಣೆಯಲ್ಲಿ ಎಲ್ಲ ರೈತರು ಒಗ್ಗಟ್ಟಾಗಿ ರೈತ ವಿರೋಧಿ ಕಾಂಗ್ರೆಸ್ ಅನ್ನು ನಾಮಾವಶೇಷ ಮಾಡಬೇಕೆಂದು ಪ್ರತಿಪಾದಿಸಿದರು.
ಹೇಮಾವತಿ ಎಕ್ಸ್ ಫ್ರೆಸ್ ಲಿಂಕ್ ಕೆನಾಲ್ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಆದರೆ ತುರುವೇಕೆರೆ ಕ್ಷೇತ್ರದ ಪಾಲಿನ ನೀರಿಗೆ ಅನ್ಯಾಯವಾದರೆ ನಾನು ಕೈಕಟ್ಟಿ ಕೂರುವವನಲ್ಲ. ಇದು ತಾಲ್ಲೂಕಿನ ರೈತರ ಅಳಿವು ಉಳಿವಿನ ಪ್ರಶ್ನೆ ಕ್ಷೇತ್ರದ ರೈತರಿಗಾಗಿ ಯಾವ ಹೋರಾಟಕ್ಕೂ ಸಿದ್ದ ಎಂದು ಎಚ್ಚರಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೇವರಾಜು, ಮುಖಂಡರಾದ ಪರಮೇಶ್,ವಿಜೇಂದ್ರಕುಮಾರ್, ವೆಂಕಟಾಪುರ ಯೋಗೀಶ್, ಮಂಗಿಗುಪ್ಪೆಬಸವರಾಜು, ರಂಗಸ್ವಾಮಿ, ಪುಟ್ಟರಾಜು ಇದ್ದರು.